Home ಜಿಲ್ಲೆ ಶಿವಮೊಗ್ಗ ಜನನ-ಮರಣ ವಿಭಾಗದಲ್ಲಿ ಸಿಗದ ಸ್ಪಂದನೆ: ಸಿಬಿಐ ಸಿಬ್ಬಂದಿಯ ಆಕ್ರೋಶ

ಜನನ-ಮರಣ ವಿಭಾಗದಲ್ಲಿ ಸಿಗದ ಸ್ಪಂದನೆ: ಸಿಬಿಐ ಸಿಬ್ಬಂದಿಯ ಆಕ್ರೋಶ

ಶಿವಮೊಗ್ಗ, ಸೆ. ೯- ಶಿವಮೊಗ್ಗ ಮಹಾನಗರ ಪಾಲಿಕೆ ಜನನ- ಮರಣ ವಿಭಾಗಕ್ಕೆ ಇತ್ತೀಚೆಗೆ ಕಾರ್ಯನಿಮಿತ್ತ ಆಗಮಿಸಿದ್ದ ಬೆಂಗಳೂರು ಸಿಬಿಐ ಕಚೇರಿಯ ಸಿಬ್ಬಂದಿಯೋರ್ವರು ಸಕಾಲದಲ್ಲಿ ಸಿಗದ ಸ್ಪಂದನೆಯಿಂದ ಅಸಮಾಧಾನಗೊಂಡು, ವಿಭಾಗದ ಅಧಿಕಾರಿ – ಸಿಬ್ಬಂದಿಗಳ ವಿರುದ್ದ ಆಕ್ರೋಶಗೊಂಡ ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ!


ವಿಷಯ ತಿಳಿಯುತ್ತಿದ್ದಂತೆ ವಿಭಾಗಕ್ಕೆ ದೌಡಾಯಿಸಿರುವ ಆಯುಕ್ತ ಮಾಯಣ್ಣಗೌಡ ಅವರು, ಸಿಬಿಐ ಕಚೇರಿ ಸಿಬ್ಬಂದಿಯೊಂದಿಗೆ ಮಾತುಕತೆ ನಡೆಸಿದ್ದಾರೆ. ಅವರಿಗೆ ಅಗತ್ಯವಿರುವ ಪ್ರಮಾಣಪತ್ರ ದೊರಕಿಸಿಕೊಟ್ಟಿದ್ದಾರೆ. ಜೊತೆಗೆ ಜನನ- ಮರಣ ವಿಭಾಗದ ಅಧಿಕಾರಿ, ಸಿಬ್ಬಂದಿಗಳನ್ನು ತರಾಟೆಗೆ ತೆಗೆದುಕೊಂಡಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.


ಏನೀದು ಘಟನೆ : ಪಾಲಿಕೆ ಮೂಲಗಳ ನೀಡುವ ಮಾಹಿತಿ ಅನುಸಾರ, ಕಳೆದ ಕೆಲ ದಿನಗಳ ಹಿಂದೆ ಕಚೇರಿ ಕೆಲಸ ಕಾರ್ಯದ ನಿಮಿತ್ತ ಬೆಂಗಳೂರಿನ ಸಿಬಿಐ ಕಚೇರಿಯ ಸಿಬ್ಬಂದಿಯೋರ್ವರು ಪಾಲಿಕೆಗೆ ಆಗಮಿಸಿದ್ದಾರೆ. ಪ್ರಮಾಣಪತ್ರವೊಂದನ್ನು ಪಡೆಯಲು ಜನನ- ಮರಣ ವಿಭಾಗಕ್ಕೆ ತೆರಳಿದ್ದಾರೆ.


ವಿಭಾಗದಲ್ಲಿ ತಮ್ಮ ಪೂರ್ವಾಪರಗಳ ಬಗ್ಗೆ ಅವರು ತಿಳಿಸಿಲ್ಲ. ಜನಸಾಮಾನ್ಯರ ರೀತಿಯಲ್ಲಿಯೇ ಕೆಲಸಕಾರ್ಯ ಮಾಡಿಸಿಕೊಳ್ಳಲು ಮುಂದಾಗಿದ್ದಾರೆ. ಆದರೆ ವಿಭಾಗದ ಅಧಿಕಾರಿ, ಸಿಬ್ಬಂದಿಗಳಿಂದ ಸಮರ್ಪಕ ಸ್ಪಂದನೆ ದೊರಕಿಲ್ಲ. ಗಂಟೆಗಟ್ಟಲೆ ಸತಾಯಿಸಿದ್ದಾರೆ. ಆದಾಗ್ಯೂ ಕೆಲಸ ಮಾಡಿಕೊಟ್ಟಿಲ್ಲ.


ಇದರಿಂದ ಅಸಮಾಧಾನಗೊಂಡ ಸಿಬ್ಬಂದಿಯು ತಮ್ಮ ಐಡಿ ಕಾರ್ಡ್ ತೋರಿಸಿ, ತಮ್ಮ ಪೂರ್ವಾಪರ ತಿಳಿಸಿದ್ದಾರೆ. ಅಧಿಕಾರಿ ಸಿಬ್ಬಂದಿಗಳ ಕಾರ್ಯವೈಖರಿ ವಿರುದ್ದ ಅಸಮಾಧಾನ ವ್ಯಕ್ತಪಡಿಸಿ, ಆಕ್ರೋಶಗೊಂಡಿದ್ದಾರೆ. ಇದರ ಮಾಹಿತಿ ಅರಿತ ಆಯುಕ್ತ ಮಾಯಣ್ಣಗೌಡರವರು ವಿಭಾಗಕ್ಕೆ ಆಗಮಿಸಿದ್ದಾರೆ.


ಸಿಬಿಐ ಕಚೇರಿ ಸಿಬ್ಬಂದಿಯೊಂದಿಗೆ ಸಮಾಲೋಚನೆ ನಡೆಸಿ, ಅವರಿಗೆ ಅಗತ್ಯವಿರುವ ದಾಖಲೆಗಳನ್ನು ಕಾಲಮಿತಿಯೊಳಗೆ ಕೊಡಿಸಿದ್ದಾರೆ. ಕೆಲ ನಿಮಿಷಗಳಲ್ಲಿಯೇ ಅಗತ್ಯ ದಾಖಲೆ ದೊರಕಿಸಿ ಕೊಟ್ಟ ಆಯುಕ್ತರಿಗೆ, ಸಿಬ್ಬಂದಿಯು ಧನ್ಯವಾದ ಅರ್ಪಿಸಿ ತೆರಳಿದ್ದಾರೆ ಎಂದು ತಿಳಿದುಬಂದಿದೆ.


ಹಾವಳಿ : ಜನನ -ಮರಣ ವಿಭಾಗದಲ್ಲಿ ಜನಸಾಮಾನ್ಯರ ಕೆಲಸಕಾರ್ಯಗಳು ವಿಳಂಬವಾಗುತ್ತಿರುವ ಹಾಗೂ ವಿಭಾಗಕ್ಕೆ ಅಲೆದಾಡುವಂತಹ ಸ್ಥಿತಿಯಿದೆ ಎಂಬ ದೂರುಗಳಿವೆ. ಮಧ್ಯವರ್ತಿಗಳ ಹಾವಳಿಯಿದ್ದು, ಇವರ ಮೂಲಕ ಹೋದರೆ ಸುಲಭವಾಗಿ ಕೆಲಸವಾಗುತ್ತವೆ ಎಂಬ ಆರೋಪಗಳಿವೆ. ಈ ನಿಟ್ಟಿನಲ್ಲಿ ಆಯುಕ್ತರ ಅಗತ್ಯ ಗಮನಹರಿಸಬೇಕಾಗಿದೆ.


ಸಿಬ್ಬಂದಿಗಳಿಗೆ ತರಾಟೆ
ಪಾಲಿಕೆ ಜನನ- ಮರಣ ವಿಭಾಗದಲ್ಲಿ ಸಿಬಿಐ ಕಚೇರಿ ಸಿಬ್ಬಂದಿಗೆ ಆದ ಕಹಿ ಘಟನೆಯ ಕುರಿತಂತೆ ಆಯುಕ್ತ ಮಾಯಣ್ಣಗೌಡರವರು, ವಿಭಾಗದ ಅಧಿಕಾರಿ ಸಿಬ್ಬಂದಿಗಳನ್ನು ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ವಿಭಾಗಕ್ಕೆ ಯಾರೇ ಆಗಮಿಸಲಿ ಅವರಿಗೆ ಸಮರ್ಪಕವಾಗಿ ಸ್ಪಂದಿಸಬೇಕು. ಕಾಲಮಿತಿಯೊಳಗೆ ಕೆಲಸ ಕಾರ್ಯ ಮಾಡಿಕೊಡಬೇಕು. ಯಾವುದೇ ಕಾರಣಕ್ಕೂ ಅಲೆದಾಡಿಸಬಾರದು. ಸಾರ್ವಜನಿಕ ವಲಯದಿಂದ ಏನಾದರೂ ದೂರುಗಳು ಕೇಳಿಬಂದರೆ, ಸಂಬಂಧಿಸಿದ ಅಧಿಕಾರಿ ಸಿಬ್ಬಂದಿಗಳ ವಿರುದ್ದ ಕಠಿಣ ಕ್ರಮ ಜರುಗಿಸಲಾಗುವುದು ಎಂದು ಆಯುಕ್ತರು ಎಚ್ಚರಿಕೆ ನೀಡಿದ್ದಾರೆ ಎಂದು ಕಚೇರಿ ಮೂಲಗಳು ಮಾಹಿತಿ ನೀಡುತ್ತವೆ.