Home ಜಿಲ್ಲೆ ಕಾರ್ಗಿಲ್ ವಿಜಯ ದಿನ: ದೇಶಸೇವೆಗೆ ಸೈನ್ಯ ಸೇರುವುದು ಪುಣ್ಯದ ಅವಕಾಶ : ಕಲ್ಮೇಶ ಆಸಂಗಿ

ಕಾರ್ಗಿಲ್ ವಿಜಯ ದಿನ: ದೇಶಸೇವೆಗೆ ಸೈನ್ಯ ಸೇರುವುದು ಪುಣ್ಯದ ಅವಕಾಶ : ಕಲ್ಮೇಶ ಆಸಂಗಿ

ವಿಜಯಪುರ, ಜು.31: ದೇಶ ಸೇವೆ ಮಾಡುವ ಅನೇಕ ಮಾರ್ಗಗಳಿದ್ದರೂ, ರಾಷ್ಟ್ರಕ್ಕಾಗಿ ಜೀವವನ್ನೇ ಅರ್ಪಿಸುವ ಅವಕಾಶ ಸೈನಿಕರಿಗೆ ಮಾತ್ರ ದೊರೆಯುತ್ತದೆ. ಸೈನ್ಯದಲ್ಲಿ ಸೇವೆ ಸಲ್ಲಿಸುವುದು ಪ್ರತಿಯೊಬ್ಬರಿಗೂ ಸಿಗದ ಪುಣ್ಯದ ಅವಕಾಶ ಎಂದು ಭೂಸೇನೆಯ ನಿವೃತ್ತ ಹವಾಲ್ದಾರ್ ಹಾಗೂ ದ್ರೋಣ ಸೋಲ್ಜರ್ಸ್ ಅಕಾಡೆಮಿಯ ಸಂಸ್ಥಾಪಕ ಅಧ್ಯಕ್ಷ ಕಲ್ಮೇಶ ಆಸಂಗಿ ಹೇಳಿದರು.
ನಗರದ ಎಕ್ಸಲೆಂಟ್ ವಿಜ್ಞಾನ ಪದವಿ ಪೂರ್ವ ಕಾಲೇಜಿನಲ್ಲಿ ಕಾರ್ಗಿಲ್ ವಿಜಯ ದಿನ ಹಾಗೂ ಗುರುಪೂರ್ಣಿಮೆ ಅಂಗವಾಗಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದ ಅವರು, ದೇಶದ ಪ್ರತಿಯೊಬ್ಬ ನಾಗರಿಕರೂ ತಮ್ಮ ತಮ್ಮ ಕ್ಷೇತ್ರದಲ್ಲಿ ರಾಷ್ಟ್ರಸೇವೆ ಮಾಡುತ್ತಿದ್ದಾರೆ. ಆದರೆ ದೇಶದ ರಕ್ಷಣೆಗಾಗಿ ಪ್ರಾಣವನ್ನೇ ಪಣಕ್ಕಿಡುವ ಅವಕಾಶ ಸೈನಿಕರಿಗೆ ಮಾತ್ರ ಸಿಗುತ್ತದೆ. ಅಂತಹ ಅವಕಾಶ ದೊರೆತಿರುವುದು ತಮ್ಮ ಬದುಕಿನ ಹೆಮ್ಮೆ ಎಂದು ಹೇಳಿದರು.
ಕಾರ್ಗಿಲ್ ಯುದ್ಧವು ಭಾರತೀಯ ಸೈನಿಕರ ಶೌರ್ಯ, ಸಾಹಸ ಮತ್ತು ತ್ಯಾಗದ ಪ್ರತೀಕವಾಗಿದೆ. ಪ್ರತಿಕೂಲ ಪರಿಸ್ಥಿತಿಯಲ್ಲಿಯೂ ಪಾಕಿಸ್ತಾನದ ಒಳನುಸುಳುವಿಕೆಯನ್ನು ಹಿಮ್ಮೆಟ್ಟಿಸಿ ದೇಶದ ಗೌರವವನ್ನು ಎತ್ತಿಹಿಡಿದ ವೀರ ಯೋಧರ ತ್ಯಾಗವನ್ನು ದೇಶ ಎಂದಿಗೂ ಮರೆಯಬಾರದು ಎಂದು ಅವರು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಎಕ್ಸಲೆಂಟ್ ಸಮೂಹ ಶಿಕ್ಷಣ ಸಂಸ್ಥೆಗಳ ಸಂಸ್ಥಾಪಕ ಅಧ್ಯಕ್ಷ ಬಸವರಾಜ ಕೌಲಗಿ, ಕಾರ್ಗಿಲ್ ಯುದ್ಧವು ಅತ್ಯಂತ ಕಠಿಣ ಯುದ್ಧಗಳಲ್ಲಿ ಒಂದಾಗಿತ್ತು. ಎತ್ತರದ ಪರ್ವತ ಪ್ರದೇಶಗಳಲ್ಲಿ ಶತ್ರುಗಳನ್ನು ಸೋಲಿಸಿ ವಿಜಯ ಸಾಧಿಸಿದ ಭಾರತೀಯ ಸೈನಿಕರ ಧೈರ್ಯ ಮತ್ತು ತ್ಯಾಗದಿಂದಲೇ ಇಂದು ದೇಶ ಸುರಕ್ಷಿತವಾಗಿದೆ ಎಂದರು.
ಗುರುಗಳು ಸಮಾಜ ನಿರ್ಮಾಣದ ಶಿಲ್ಪಿಗಳು. ಸೈನಿಕರು ದೇಶದ ಗಡಿಯನ್ನು ಕಾಪಾಡಿದರೆ, ಗುರುಗಳು ಜ್ಞಾನ ನೀಡುವ ಮೂಲಕ ಸಮಾಜವನ್ನು ರಕ್ಷಿಸುತ್ತಾರೆ. ಆದ್ದರಿಂದ ಸೈನಿಕರು ಮತ್ತು ಗುರುಗಳ ಸೇವೆ ಸದಾ ಸ್ಮರಣೀಯ ಎಂದು ಹೇಳಿದರು.
ಕಾಲೇಜಿನ ಪ್ರಾಂಶುಪಾಲ ಮಂಜುನಾಥ ಜುನಗೊಂಡ ಮಾತನಾಡಿದರು. ಕಾರ್ಯಕ್ರಮದಲ್ಲಿ ನಿವೃತ್ತ ಬ್ಯಾಂಕ್ ಅಧಿಕಾರಿ ವಿ.ಡಿ. ಮಾದನಶೆಟ್ಟಿ, ಕಾಲೇಜಿನ ಶೈಕ್ಷಣಿಕ ಸಂಯೋಜಕ ಮಂಜುನಾಥ ತುಮ್ಮರಮಟ್ಟಿ, ಉಪನ್ಯಾಸಕರು, ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ವಿದ್ಯಾರ್ಥಿನಿ ಕುಮಾರಿ ರತ್ನಾ ಕ್ಷತ್ರಿ ಪ್ರಾರ್ಥನೆ ನೆರವೇರಿಸಿದರು. ಕನ್ನಡ ವಿಭಾಗದ ಮುಖ್ಯಸ್ಥ ಶರಣಗೌಡ ಪಾಟೀಲ ಕಾರ್ಯಕ್ರಮ ನಿರೂಪಿಸಿದರು.