Home ಮುಖಪುಟ ಸುದ್ದಿ ಗಾಲ್ಫ್ ನಲ್ಲಿ ಕನ್ನಡತಿ ಪ್ರಣವಿಗೆ ಚಿನ್ನ,ಆರ್ಚರಿಯಲ್ಲಿ ಕುಂಕುಮ್ ಗೆ ಸ್ವರ್ಣ

ಗಾಲ್ಫ್ ನಲ್ಲಿ ಕನ್ನಡತಿ ಪ್ರಣವಿಗೆ ಚಿನ್ನ,ಆರ್ಚರಿಯಲ್ಲಿ ಕುಂಕುಮ್ ಗೆ ಸ್ವರ್ಣ

ನಗೋಯಾ, ಅ.೩: ಅದ್ಭುತ ಪ್ರದರ್ಶನ ನೀಡಿದ ಕರ್ನಾಟಕದ ಪ್ರಣವಿ ಅರಸ್ ಏಷ್ಯನ್ ಗೇಮ್ಸ್ ನ ಮಹಿಳೆಯರ ವೈಯಕ್ತಿಕ ಗಾಲ್ಫ್ ಸ್ಪರ್ಧೆಯಲ್ಲಿ ಚಿನ್ನದ ಪದಕ ಗೆದ್ದಿದ್ದಾರೆ. ನಾಲ್ಕು ಸುತ್ತಿನ ಸ್ಪರ್ಧೆಯನ್ನು ಅವರು ೧೫ ಅಂಡರ್ ಪಾರ್‌ನೊಂದಿಗೆ ಪೂರ್ಣಗೊಳಿಸಿದರು.


ಅಂತಿಮ ಹೋಲ್‌ನಲ್ಲಿ ಪ್ರಣವಿ ಪಾರ್ ಸಾಧಿಸಿದರು. ಸಿಂಗಾಪುರದ ಶ್ಯಾನನ್ ಟಾನ್ ಮತ್ತು ಚೀನಾದ ಯಿನ್ ರುಒನಿಂಗ್ ಕೂಡ ಅಂತಿಮ ಹೋಲ್‌ನಲ್ಲಿ ಪಾರ್ ಸಾಧಿಸಿದ್ದು, ಇಬ್ಬರೂ ೧೪ ಅಂಡರ್ ಪಾರ್‌ನೊಂದಿಗೆ ಜಂಟಿಯಾಗಿ ಬೆಳ್ಳಿ ಪದಕಕ್ಕೆ ಪಾತ್ರರಾದರು.


ಅದ್ಭುತ ಗೆಲುವಿನ ಬಳಿಕ ಭಾರತದ ಆಟಗಾರ್ತಿಯರಾದ ಅದಿತಿ ಅಶೋಕ್ ಮತ್ತು ದೀಕ್ಷಾ ದಾಗರ್ ಮೈದಾನದಲ್ಲೇ ಪ್ರಣವಿ ಅರಸ್ ಅವರನ್ನು ನೀರಿನಿಂದ ನೆನೆಸಿ ಸಂಭ್ರಮಿಸಿದರು. ಮಹಿಳಾ ತಂಡ ಸ್ಪರ್ಧೆಯಲ್ಲೂ ಭಾರತ ಬೆಳ್ಳಿ ಪದಕ ಗೆದ್ದಿದೆ.


ಪ್ರಣವಿ ಅರಸ್ ಗೆಲ್ಲುವುದೊರಂದಿಗೆ ಕರ್ನಾಟಕಕ್ಕೆ ಮೂರನೇ ಚಿನ್ನದ ಪದಕ ಬಂದಾಂತಾಗಿದೆ. ಕ್ರಿಕೆಟ್ ನಲ್ಲಿ ಶ್ರೇಯಾಂಕಾ ಪಾಟೀಲ್, ಮಹಿಳೆಯರ ರಿಲೇಯಲ್ಲಿ ಎಂ.ಆರ್. ಪೂವಮ್ಮ ಮತ್ತು ಈಗ ಪ್ರಣವಿ ಗಾಲ್ಫ್ ನಲ್ಲಿ ಬಂಗಾರದ ಸಾಧನೆ ತೋರಿದ್ದಾರೆ.


ಕುಂಕುಮ್ ಗೆ ಎರಡನೇ ಚಿನ್ನ


೧೭ ವರ್ಷದ ಕುಂಕುಮ್ ಮೊಹೋದ್ ಮಹಿಳಾ ವೈಯಕ್ತಿಕ ರಿಕರ್ವ್ ಆರ್ಚರಿ ಸ್ಪರ್ಧೆಯಲ್ಲಿ ಐತಿಹಾಸಿಕ ಚಿನ್ನದ ಪದಕ ಗೆದ್ದಿದ್ದಾರೆ. ದಕ್ಷಿಣ ಕೊರಿಯಾದ ಓ ಯೆಜಿನ್ ವಿರುದ್ಧದ ಶೂಟ್-ಆಫ್‌ನಲ್ಲಿ ಕೊರಿಯಾದ ಬಿಲ್ಲುಗಾರ್ತಿ ೮ ಅಂಕ ಗಳಿಸಿದರೆ, ಕುಂಕುಮ್ ಮೊಹೋದ್ ಪರಿಪೂರ್ಣ ೧೦ ಅಂಕ ಗಳಿಸಿ ಜಯ ಸಾಧಿಸಿದರು.


ಇದು ಈ ಏಷ್ಯನ್ ಗೇಮ್ಸ್ ಅಭಿಯಾನದಲ್ಲಿ ಕುಂಕುಮ್ ಅವರ ಎರಡನೇ ಚಿನ್ನದ ಪದಕವಾಗಿದೆ. ಮಹಿಳಾ ವೈಯಕ್ತಿಕ ರಿಕರ್ವ್ ವಿಭಾಗದಲ್ಲಿ ಭಾರತಕ್ಕೆ ದೊರೆತ ಮೊದಲ ಚಿನ್ನದ ಪದಕವೂ ಇದಾಗಿದೆ. ಇದರೊಂದಿಗೆ ಈ ವರ್ಷದ ಆರ್ಚರಿ ಸ್ಪರ್ಧೆಯಲ್ಲಿ ಭಾರತ ಐದನೇ ಚಿನ್ನದ ಪದಕವನ್ನು ತನ್ನದಾಗಿಸಿಕೊಂಡಿದೆ.
ಸದ್ಯ ಭಾರತ ೧೮ ಚಿನ್ನ, ೨೬ ಬೆಳ್ಳಿ ಮತ್ತು ೩೫ ಕಂಚು ಸೇರಿದಂತೆ ೭೬ ಪದಕಗಳೊಂದಿಗೆ ಪದಕಪಟ್ಟಿಯಲ್ಲಿ ೫ನೇ ಸ್ಥಾನದಲ್ಲಿದೆ.


ಕ್ರಿಕೆಟ್ ಮತ್ತು ಹಾಕಿ ಪಂದ್ಯಗಳ ಫೈನಲ್ ಪಂದ್ಯಗಳು ಇಂದು ನಡೆಯಲಿದ್ದು, ಕನಿಷ್ಠ ಪಕ್ಷ ಇನ್ನೂ ನಾಲ್ಕರಿಂದ ಐದು ಚಿನ್ನದ ಪದಕಗಳನ್ನು ನಿರೀಕ್ಷಿಸಲಾಗಿದೆ. ಇದು ಸಾಧ್ಯವಾದರೆ ಭಾರತ ಪದಕ ಪಟ್ಟಿಯಲ್ಲಿ ಅಗ್ರ ನಾಲ್ಕರಲ್ಲಿ ಸ್ಥಾನ ಉಳಿಸಿಕೊಳ್ಳಲಿದೆ.