
ಕಲಬುರಗಿ,ಆ.2: ಪ್ರಸ್ತುತ ನಡೆಯುತ್ತಿರುವ ವಿಶೇಷ ಸಮಗ್ರ ಮತದಾರರ ಪಟ್ಟಿ ಪರಿಷ್ಕರಣೆಯಲ್ಲಿ ಕ್ಷೇತ್ರದ ಒಟ್ಟು 23,71,542 ಮತದಾರರ ಪೈಕಿ 51,187 ಮತದಾರರನ್ನು ಎ.ಎಸ್.ಡಿ.ಡಿ. (ಗೈರು, ಸ್ಥಳಾಂತರ, ನಿಧನ, ಡುಪ್ಲಿಕೇಟ್) ಎಂದು ಗುರುತಿಸಿರುವ ಹಿನ್ನೆಲೆಯಲ್ಲಿ ಇದರ ನೈಜತೆ ಮತ್ತು ನಿಖರತೆ ಮೊತ್ತೊಮ್ಮೆ ಪರಿಶೀಲಿಸಲು ಇದೇ ಆಗಸ್ಟ್ 3 ಮತ್ತು 4 ರಂದು ಶಹಾಬಾದ ಹೋಬಳಿ ಪ್ರದೇಶದಲ್ಲಿ ವಾರ್ಡ್ ವಾರು ಸಭೆ ನಡೆಸಲಾಗುವುದು ಎಂದು ಕ್ಷೇತ್ರದ ಮತದಾರರ ನೋಂದಣಾಧಿಕಾರಿ ಮತ್ತು ಕಲಬುರಗಿ ಉಪ ವಿಭಾಗದ ಹಿರಿಯ ಸಹಾಯಕ ಆಯುಕ್ತರಾಗಿರುವ ಸಾಹಿತ್ಯ ಆಲದಕಟ್ಟಿ ತಿಳಿಸಿದ್ದಾರೆ.
ಶನಿವಾರ ಇಲ್ಲಿನ ತಮ್ಮ ಕಚೇರಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, ಇದೂವರೆಗೆ 2,18,741 (ಶೇ.79.58) ಗಣತಿ ನಮೂನೆಯನ್ನು ಮೊಬೈಲ್ ತಂತ್ರಾಂಶದಲ್ಲಿ ಡಿಜಿಟೈಸ್ ಮಾಡಲಾಗಿದ್ದರು, ಸಹ 7,176 ನಿಧನ, 37,068 ಸ್ಥಳಾಂತರ, 2,968 ಈಗಾಗಲೆ ನೋಂದಣಿ, 355 ಇತರೆ ಸೇರಿ ಒಟ್ಟು 51,187(ಶೇ.18.62ರಷ್ಟು) ಮತದಾರರು ಎ.ಎಸ್.ಡಿ.ಡಿ. ಪಟ್ಟಿಯಲ್ಲಿದ್ದು, ಇದನ್ನು ಮತ್ತೊಮ್ಮೆ ಪರಿಶೀಲನೆಗೆ ವಾರ್ಡ್ ಮತ್ತು ಗ್ರಾಮ ಸಭೆ ನಡೆಸಲಾಗುತ್ತಿದೆ ಎಂದರು.
ಕಮಲಾಪುರ ಹೋಬಳಿಯಲ್ಲಿ 6,101, ಮಹಾಗಾಂವ ಹೋಬಳಿಯಲ್ಲಿ 8,770, ನರೋಣಾ ಹೋಬಳಿಯಲ್ಲಿ 4,789, ಅವರಾದ ಬಿ. ಹೋಬಳಿಯಲ್ಲಿ 5,768, ಕಲಬುರಗಿ ಹೋಬಳಿಯಲ್ಲಿ 3,553 ಹಾಗೂ ಶಹಾಬಾದ ಹೋಬಳಿಯಲ್ಲಿ 22,206 ಮತದಾರರ ಎ.ಎಸ್.ಡಿ.ಡಿ. ಪಟ್ಟಿಯಲ್ಲಿದ್ದಾರೆ. ಯಾವುದೇ ಅರ್ಹ ಮತದಾರರ ಮತದಾರರ ಪಟ್ಟಿಯಿಂದ ಹೊರಗುಳಿಯಬಾರದೆಂಬ ಸದುದ್ದೇಶದಿಂದ ಕ್ಷೇತ್ರದ ನಗರ ಮತ್ತು ಗ್ರಾಮೀಣ ಪ್ರದೇಶದಲ್ಲಿ ಗ್ರಾಮವಾರು ಸಭೆ ನಡೆಸಿ ಎ.ಎಸ್.ಡಿ.ಡಿ. ಪಟ್ಟಿ ಪರಿಶೀಲಿಸಲಾಗುತ್ತಿದ್ದು, ಅದರಂತೆ ಶಹಾಬಾದ ಹೋಬಳಿಯ 50 ಮತಗಟ್ಟೆಯಲ್ಲಿ ಈ ರೀತಿಯ ಸಭೆ ಆಯೋಜಿಸಿದೆ ಎಂದರು.
ಇನ್ನು ಕ್ಷೇತ್ರದ ಕೆಲವೆಡೆ ಮತದಾರರು ಗಣತಿ ನಮೂನೆ ಪಡೆದುಕೊಂಡು ಹಿಂದಿರುಗಿಸಿಲ್ಲ. ಅಂತಹ ಮತದಾರರು ಕೊನೆ ದಿನಾಂಕದ ವರೆಗೆ ಕಾಯದೆ ಕೂಡಲೆ ಬಿ.ಎಲ್.ಓ. ಗಳಿಗೆ ಭರ್ತಿ ಮಾಡಿದ ಅರ್ಜಿ ಹಿಂದಿರುಗಿಸಬೇಕು ಎಂದು ತಿಳಿಸಿರುವ ಅವರು, ಇನ್ನು ಎ.ಎಸ್.ಡಿ.ಡಿ. ಹೆಚ್ಚಿರುವ 161 ಮತಗಟ್ಟೆಯಲ್ಲಿ ಪಟ್ಟಿಯನ್ನು ಪ್ರದರ್ಶಿಸಲು ಈಗಾಗಲೆ ಬಿ.ಎಲ್.ಓ. ಗಳಿಗೆ ಸೂಚಿಸಲಾಗಿದೆ. ಸಾರ್ವಜನಿಕರು ಇದನ್ನು ವೀಕ್ಷಿಸಿ ಏನಾದರು ತಪ್ಪಾಗಿ ನಮೂದಾದಲ್ಲಿ ಬಿ.ಎಲ್.ಓ ಮತ್ತು ಇ.ಆರ್.ಓ ಗಮನಕ್ಕೆ ತಂದು ಸರಿಪಡಿಸಿಕೊಳ್ಳಬೇಕಲ್ಲದೆ
ಎ.ಎಸ್.ಡಿ.ಡಿ. ಪಟ್ಟಿ ಶೇ.100 ರಷ್ಟು ನಿಖರವಾಗಿರುವುದನ್ನು ಎಲ್ಲಾ ಬಿ.ಎಲ್.ಎ., ಸಾರ್ವಜನಿಕರು, ರಾಜಕೀಯ ಪಕ್ಷಗಳು ಖಾತ್ರಿಪಡಿಸಿಕೊಳ್ಳಬೇಕೆಂದು ಅವರು ಮನವಿ ಮಾಡಿದ್ದಾರೆ.
ವಿಶೇಷ ಸಮಗ್ರ ಪರಿಷ್ಕರಣೆ ಸಂದರ್ಭದಲ್ಲಿ ಹಿಂದಿನ ವಾಸಸ್ಥಳದಲ್ಲಿನ ಮತದಾರರ ಪಟ್ಟಿಯಲ್ಲಿನ ಹೆಸರು ತೆಗೆಸಿಲ್ಲದ ಕಾರಣ ಓರ್ವ ಮತದಾರ ಒಂದಕ್ಕಿಂತ ಹೆಚ್ಚು ಕ್ಷೇತ್ರಗಳಲ್ಲಿ ಹೆಸರು ಇರುವುದುನ್ನು ಕಾಣಬಹುದಾಗಿದೆ. ಕಾನೂನಿನ ಪ್ರಕಾರ ಪ್ರತಿಯೊಬ್ಬ ಮತದಾರರನ್ನು ಒಂದೇ ಕ್ಷೇತ್ರದಲ್ಲಿ ಮಾತ್ರ ಹೆಸರು ನೋಂದಾಯಿಸಿಕೊಳ್ಳಬಹುದಾಗಿದೆ ಎಂದಿರುವ ಅವರು, ಅಂತಹ ಮತದಾರರು ಕೊನೆಯ ದಿನಾಂಕದವರೆಗೆ ಕಾಯದೆ ಪ್ರಸ್ತುತ ಸಾಮಾನ್ಯವಾಗಿ ವಾಸಿಸುವ ಮತ್ತು ಮತ ಚಲಾಯಿಸಲು ಬಯಸುವ ಕ್ಷೇತ್ರದಲ್ಲಿ ತಕ್ಷಣ ಗಣತಿ ನಮೂನೆಯನ್ನು ಬಿ.ಎಲ್.ಓ. ಗೆ ಸಲ್ಲಿಸಬೇಕು. ತ್ವರಿತ ಸಲ್ಲಿಕೆಯು ಮತದಾರರ ಪಟ್ಟಿಯಲ್ಲಿ ಸಕಾಲಿಕ ಪರಿಶೀಲನೆ ಮತ್ತು ಸೇರ್ಪಡೆಗೆ ಅನುವು ಮಾಡಿಕೊಡುತ್ತದೆ ಎಂದು ಅವರು ತಿಳಿಸಿದ್ದಾರೆ.
ಜಾತಿ ಪ್ರಮಾಣ ಪತ್ರ,ನಿವಾಸಿ ಪತ್ರ ವಿತರಣೆ:ರಾಜ್ಯ ಸರ್ಕಾರದ ನಿರ್ದೇಶನದಂತೆ ಕ್ಷೇತ್ರದ ಮತದಾರರಿಗೆ ಎಸ್.ಐ.ಆರ್ ಪರಿಣ್ಕರಣೆ ಹಿನ್ನೆಲೆಯಲ್ಲಿ ಯಾವುದೇ ಅರ್ಹ ಮತದಾರರು ಮತದಾರರ ಪಟ್ಟಿಯಿಂದ ಹೊರಗುಳಿಯದಂತೆ ಮನೆ ಮನೆ ಬಾಗಿಲಿಗೆ ಜಾತಿ ಪ್ರಮಾಣ ಪತ್ರ ವಿತರಿಸುವ ಪ್ರಕ್ರಿಯೆಗೆ ಚಾಲನೆ ನೀಡಲಾಗಿದೆ. ಇದಲ್ಲದೆ ಅರ್ಜಿ ಸಲ್ಲಿಸುವವರಿಗೆ ನಿವಾಸಿ ಪ್ರಮಾಣ ಪತ್ರ ಸಹ ನೀಡಲಾಗುತ್ತಿದೆ. ಎಸ್.ಐ.ಆರ್. ಪರಿಷ್ಕರಣೆಯ ಮತದಾರರ ಪಟ್ಟಿಯಲ್ಲಿ ಹೆಸರು ಸೇರಿಸಲು ಈ ದಾಖಲೆಗಳು ಮತದಾರರಿಗೆ ನೆರವಾಗಲಿವೆ ಎಂದಿರುವ ಸಾಹಿತ್ಯ ಆಲದಕಟ್ಟಿ ಅವರು, 2002ರ ಎಸ್.ಐ.ಆರ್ ಪಟ್ಟಿಯಲ್ಲಿ ಸ್ವತ ಹೆಸರಿಲ್ಲದಿದ್ದರು, ಅಥವಾ ಸಂಬಂಧಿಕರ ಹೆಸರಿಲ್ಲದಿದ್ದರು ಸಹ ಅಂತಹ ಮತದಾರರು ಕೊನೆಯ ಕಾಲಂ ಭರ್ತಿ ಮಾಡಿ ಸಲ್ಲಿಸಿದರು ಸಹ ಅವರ ಹೆಸರು ಕರಡು ಪಟ್ಟಿಯಲ್ಲಿ ಸೇರುತ್ತೆ ಎಂದು ಸ್ಪಷ್ಟನೆ ನೀಡಿದರು.
ಪತ್ರಿಕಾಗೋಷ್ಠಿಯಲ್ಲಿ ಕಲಬುರಗಿ ತಹಶೀಲ್ದಾರ ಕೆ.ಆನಂದಶೀಲ, ಕಮಲಾಪುರ ತಹಶೀಲ್ದಾರ ಮೊಹಮ್ಮದ್ ಮೋಸಿನ್, ಶಹಾಬಾದ ತಹಶೀಲ್ದಾರ ನೀಲಪ್ರಭಾ ಇದ್ದರು.






























