Home ಜಿಲ್ಲೆ ತುಮಕೂರು ಜು. ೨೮: ಚೆನ್ನಮ್ಮ ನುಡಿ ನಮನ, ಶ್ರದ್ಧಾಂಜಲಿ ಕಾರ್ಯಕ್ರಮ

ಜು. ೨೮: ಚೆನ್ನಮ್ಮ ನುಡಿ ನಮನ, ಶ್ರದ್ಧಾಂಜಲಿ ಕಾರ್ಯಕ್ರಮ

ಹುಳಿಯಾರು, ಜು. ೨೭- ಮಾತೃಮೂರ್ತಿ, ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡರ ಧರ್ಮಪತ್ನಿ ದಿ. ಚೆನ್ನಮ್ಮ ದೇವೇಗೌಡ ಅವರ ಅಗಲಿಕೆಯಿಂದ ಇಡೀ ರಾಜ್ಯಕ್ಕೆ ತುಂಬಲಾರದ ನಷ್ಟವಾಗಿದೆ ಎಂದು ಶಾಸಕ ಸಿ.ವಿ.ಸುರೇಶ್ ಬಾಬು ಹೇಳಿದರು.


ಪಟ್ಟಣದ ಬಸವೇಶ್ವರ ಕಲ್ಯಾಣ ಮಂಟಪದಲ್ಲಿ ಏರ್ಪಡಿಸಿದ್ದ ಪೂರ್ವಭಾವಿ ಸಭೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು.


ಪಟ್ಟಣದ ಜೆಎಂಆರ್ ಕಲ್ಯಾಣ ಮಂಟಪದಲ್ಲಿ ಜು. ೨೮ ರಂದು ಪಕ್ಷಾತೀತ ಹಾಗೂ ಜಾತ್ಯಾತಿತವಾಗಿ ಚೆನ್ನಮ್ಮ ದೇವೇಗೌಡರ ಅವರಿಗೆ ನುಡಿ ನಮನ ಮತ್ತು ಶ್ರದ್ಧಾಂಜಲಿ ಕಾರ್ಯಕ್ರಮ ಏರ್ಪಡಿಸಲಾಗಿದೆ.


ಕಾರ್ಯಕ್ರಮದಲ್ಲಿ ಪಟ್ಟನಾಯಕನಹಳ್ಳಿಯ ಶ್ರೀ ನಂಜಾವಧೂತ ಸ್ವಾಮೀಜಿ, ಮಾಜಿ ಸಚಿವೆ ಲೀಲಾದೇವಿ ಆರ್. ಪ್ರಸಾದ್, ಜೆಡಿಎಸ್ ರಾಜ್ಯ ಯುವ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ, ರಾಜ್ಯ ಮಹಿಳಾ ಘಟಕದ ಅಧ್ಯಕ್ಷೆ ರಶ್ಮಿ ರಾಮೇಗೌಡ, ತುಮಕೂರು ಜಿಲ್ಲಾ ಜೆಡಿಎಸ್ ಅಧ್ಯಕ್ಷ ಹೆಚ್. ನಿಂಗಪ್ಪ ಸೇರಿದಂತೆ ಜಿಲ್ಲೆ ಹಾಗೂ ರಾಜ್ಯ ಮಟ್ಟದ ಪ್ರಮುಖ ನಾಯಕರು, ಜನಪ್ರತಿನಿಧಿಗಳು ಭಾಗವಹಿಸಿ ನುಡಿನಮನ ಸಲ್ಲಿಸಲಿದ್ದಾರೆ ಎಂದು ಹೇಳಿದರು.


ದೇವೇಗೌಡರು ಸಾಮಾನ್ಯ ಕಾಂಟ್ರಾಕ್ಟರ್ ಹಂತದಿಂದ ದೇಶದ ಪ್ರಧಾನಿಯಾಗುವವರೆಗಿನ ದೀರ್ಘ ೭೨ ವರ್ಷಗಳ ಸುದೀರ್ಘ ದಾಂಪತ್ಯ ಜೀವನದಲ್ಲಿ ಚೆನ್ನಮ್ಮನವರು ಬೆನ್ನೆಲುಬಾಗಿ ನಿಂತಿದ್ದರು. ದಿನಕ್ಕೆ ೬ ರಿಂದ ೮ ಗಂಟೆಗಳ ಕಾಲ ಸುದೀರ್ಘ ಪೂಜೆ ಪುನಸ್ಕಾರಗಳಲ್ಲಿ ನಿರತರಾಗುತ್ತಾ, ತಮ್ಮ ಮನೆಯನ್ನೇ ದೇವಸ್ಥಾನವನ್ನಾಗಿ ಮಾಡಿಕೊಂಡಿದ್ದ ಅವರು, ಮನೆಗೆ ಬರುವ ಪ್ರತಿಯೊಬ್ಬ ಕಾರ್ಯಕರ್ತರಿಗೂ, ಸಾರ್ವಜನಿಕರಿಗೂ ಪ್ರೀತಿಯಿಂದ ಆತಿಥ್ಯ ನೀಡಿ ?ದೊಡ್ಡಮನೆಯ ದೇವತೆ? ಎನಿಸಿಕೊಂಡಿದ್ದರು. ಯಾವುದೇ ಚುನಾವಣೆಗೂ ಸ್ಪರ್ಧಿಸದಿದ್ದರೂ, ಯಾವುದೇ ಸಭೆ-ಸಮಾರಂಭಗಳಲ್ಲಿ ಕಾಣಿಸಿಕೊಳ್ಳದಿದ್ದರೂ ಇಡೀ ನಾಡಿನ ಜನರ ಪ್ರೀತಿ ಗಳಿಸಿದ ದೇವತೆ ಅವರು. ಪುನೀತ್ ರಾಜಕುಮಾರ್ ಅವರ ಅಗಲಿಕೆಯ ನಂತರ ಅವರ ವ್ಯಕ್ತಿತ್ವ ನಮಗೆ ಅರಿವಾದಂತೆ, ಚೆನ್ನಮ್ಮನವರ ಅಗಲಿಕೆಯ ನಂತರ ಅವರ ನಿಸ್ವಾರ್ಥ ಸೇವೆ ಹಾಗೂ ವ್ಯಕ್ತಿತ್ವದ ಹಿರಿಮೆ ಎಷ್ಟು ದೊಡ್ಡದು ಎಂಬುದು ಜಗತ್ತಿಗೆ ತಿಳಿದಿದೆ ಎಂದರು.


ಜು. ೩೦ ರಂದು ದೇವೇಗೌಡರ ಸ್ವಗ್ರಾಮ ಹರದನಹಳ್ಳಿಯಲ್ಲಿ ನಡೆಯಲಿರುವ ಚೆನ್ನಮ್ಮನವರ ಅಂತಿಮ ಶ್ರದ್ಧಾಂಜಲಿ ಹಾಗೂ ಪುಣ್ಯಸ್ಮರಣೆ ಕಾರ್ಯಕ್ರಮಕ್ಕೆ ಕ್ಷೇತ್ರದ ಸಾರ್ವಜನಿಕರು ಹಾಗೂ ಅಭಿಮಾನಿಗಳು ಅಪಾರ ಸಂಖ್ಯೆಯಲ್ಲಿ ತೆರಳಲು ಅನುಕೂಲವಾಗುವಂತೆ ತಾಲ್ಲೂಕಿನ ಎಲ್ಲಾ ಭಾಗಗಳಿಂದ ಉಚಿತ ಬಸ್ ವ್ಯವಸ್ಥೆ ಕಲ್ಪಿಸಲಾಗುವುದು. ಪ್ರತಿಯೊಂದು ಪಂಚಾಯಿತಿ ಮತ್ತು ಗ್ರಾಮಗಳಿಂದ ಜನರನ್ನು ಕರೆದೊಯ್ಯಲು ವ್ಯವಸ್ಥಿತ ಯೋಜನೆ ರೂಪಿಸಲಾಗಿದೆ ಎಂದರು.


ಹುಳಿಯಾರು ಪಟ್ಟಣ ಪಂಚಾಯಿತಿ ಮಾಜಿ ಸದಸ್ಯ ರಾಘವೇಂದ್ರ ಮಾತನಾಡಿ, ದಿ. ಚೆನ್ನಮ್ಮ ದೇವೇಗೌಡ ಅವರು ಇಡೀ ಕುಟುಂಬಕ್ಕೆ ಮತ್ತು ಸಮಾಜಕ್ಕೆ ಹಿರಿಯ ಜೀವ ಹಾಗೂ ತಾಯಿಯ ಸ್ವರೂಪವಾಗಿದ್ದರು. ಅವರು ತೋರಿಸಿಕೊಟ್ಟ ಮಾರ್ಗ ಮತ್ತು ತತ್ವಾದರ್ಶಗಳು ಎಂದೆಂದಿಗೂ ಜೀವಂತವಾಗಿರುತ್ತವೆ. ಪ್ರತಿಯೊಬ್ಬ ಯಶಸ್ವಿ ಪುರುಷನ ಹಿಂದೆ ಸ್ತ್ರೀಯ ಪಾತ್ರವಿರುವಂತೆ, ದೇವೇಗೌಡರ ಪ್ರತಿಯೊಂದು ಏಳು-ಬೀಳುಗಳಲ್ಲಿ ಚೆನ್ನಮ್ಮ ಬೆನ್ನೆಲುಬಾಗಿ ನಿಂತಿದ್ದರು ಎಂದು ಸ್ಮರಿಸಿದರು.


ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಅವರಲ್ಲಿರುವ ಅಂತಃಕರಣ, ಮಾತೃ ಹೃದಯ ಹಾಗೂ ಸರಳ ನಡವಳಿಕೆಗೆ ತಾಯಿ ನೀಡಿದ ಸಂಸ್ಕಾರವೇ ಕಾರಣ. ದೇವಾಲಯಗಳು, ಚರ್ಚ್ ಹಾಗೂ ಮಸೀದಿಗಳ ಅಭಿವೃದ್ಧಿಗೆ ಮತ್ತು ಸರ್ವ ಜನಾಂಗದ ಒಳಿತಿಗೆ ಶ್ರಮಿಸಿದ ಚೆನ್ನಮ್ಮನವರು, ಮನೆಗೆ ಬಂದ ಯಾವುದೇ ಅತಿಥಿಗಳನ್ನು ಪ್ರೀತಿ-ಆಧರಗಳಿಂದ ಸತ್ಕರಿಸುತ್ತಿದ್ದರು ಎಂದರು.


ಈ ಸಂದರ್ಭದಲ್ಲಿ ತಾಲ್ಲೂಕು ಜೆಡಿಎಸ್ ಅಧ್ಯಕ್ಷ ರಾಮಚಂದ್ರಯ್ಯ, ಪ.ಪಂ. ಅಧ್ಯಕ್ಷೆ ಪ್ರೀತಿ, ತಾ.ಪಂ. ಮಾಜಿ ಸದಸ್ಯರುಗಳಾದ ಚೇತನಾ, ಹೇಮಲತಾ, ಗೂಬೆಹಳ್ಳಿ ಉಷಾ,, ಪಿಎಲ್‌ಡಿ ಬ್ಯಾಂಕ್ ಉಪಾಧ್ಯಕ್ಷ ಡಿ.ಬಿ.ರವಿಕುಮಾರ್, ಪ.ಪಂ. ಸದಸ್ಯ ಎಸ್‌ಆರ್‌ಎಸ್ ದಯಾನಂದ್, ಮುಖಂಡರಾದ ಏಜಾಸ್, ತಿಮ್ಮನಹಳ್ಳಿ ಹರ್ಷ, ಪ್ರದೀಪ್, ಕಿರಣ್, ಗಣೇಶ್, ರಾಮಣ್ಣ, ಹೊನ್ನೇಶಪ್ಪ, ತಾ.ಪಂ. ಮಾಜಿ ಸದಸ್ಯರಾದ ಪ್ರಸನ್ನ, ಗೌಡಿ, ಉಪ್ಪಾರ ಸಮಾಜದ ಅಧ್ಯಕ್ಷ ಹನುಮಂತಪ್ಪ ಮತ್ತಿತರರು ಉಪಸ್ಥಿತರಿದ್ದರು.