
ಕಲಬುರಗಿ,ಆ.16-ಬಡತನದಲ್ಲಿರುವ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಪ್ರತಿಭಾವಂತ ವಿದ್ಯಾರ್ಥಿಗಳು ಶಿಕ್ಷಣದಿಂದ ವಂಚಿತರಾಗಬಾರದು ಎಂಬ ಉದ್ದೇಶದಿಂದ ಕೆನರಾ ಬ್ಯಾಂಕ್ ವತಿಯಿಂದ ವಿದ್ಯಾರ್ಥಿಗಳಿಗೆ ಸಹಾಯ ಧನದ ಚೆಕ್ ವಿತರಿಸಲಾಯಿತು.
ಕಲಬುರಗಿ ಜಿಲ್ಲೆಯ ಖಣದಾಳ ಗ್ರಾಮದ ಕೆನರಾ ಬ್ಯಾಂಕ್ ಶಾಖೆಯಲ್ಲಿ ನಡೆದ 80ನೇ ಸ್ವಾತಂತ್ರ್ಯೋತ್ಸವದ ದಿನಾಚರಣೆಯ ಅಂಗವಾಗಿ ಹಮ್ಮಿಕೊಂಡಿದ್ದ ಧ್ವಜಾರೋಹಣ ನೆರವೇರಿಸಿ ಕೆನರಾ ಬ್ಯಾಂಕ್ ಅಧಿಕಾರಿ ಅಶ್ವಘೋಷ್ ಶೃಂಗೇರಿ ಮಾತನಾಡಿ, ಇದೊಂದು ರಾಷ್ಟೀಯ ಹಬ್ಬ, ಸ್ವಾತಂತ್ರ್ಯ ದಿನವನ್ನು ಸಂಭ್ರಮದಿಂದ ಆಚರಿಸಬೇಕು. ಇದು ನಾವೆಲ್ಲ ಒಂದೇ ಎಂಬ ಭಾವನೆ ಮೂಡಿಸುತ್ತದೆ. ಸ್ವಾತಂತ್ರ್ಯದ ಮಹತ್ವ ನಮ್ಮ ಮಕ್ಕಳಿಗೆ ಅರ್ಥವಾಗುವಂತಹ ಆಚರಣೆ ನಡೆಯಬೇಕು. ಹಾಗೂ ಹಣಕಾಸಿನ ತೊಂದರೆಯಿಂದ ಪ್ರತಿಭಾವಂತ ವಿದ್ಯಾರ್ಥಿಗಳು ಶಿಕ್ಷಣ ವಂಚಿತರಗಬಾರದು ಎಂಬ ಉದ್ದೇಶದಿಂದ ಸಂಸ್ಥೆಯು ಡಾ.ಬಿ.ಆರ್.ಅಂಬೇಡ್ಕರ್ ವಿದ್ಯಾಜ್ಯೋತಿ ವಿದ್ಯಾರ್ಥಿವೇತನ ಅಡಿಯಲ್ಲಿ ಬಡತನದಲ್ಲಿರುವ ಸರ್ಕಾರಿ ಶಾಲೆಯಲ್ಲಿ ಓದುತ್ತಿರುವ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಪ್ರತಿಭಾವಂತ 5, 6, 7, ತರಗತಿಯ ವಿದ್ಯಾರ್ಥಿಗಳಿಗೆ ತಲಾ ಮೂರು ಸಾವಿರ,8, 9,10 ನೇ ತರಗತಿಯ ವಿದ್ಯಾರ್ಥಿಗಳಿಗೆ 5 ಸಾವಿರ ಸಹಾಯ ಧನ ನೀಡಿ ಸಹಕರಿಸುತ್ತದೆ ಎಂದರು.
ಈ ಸಂದರ್ಭದಲ್ಲಿ ಶಾಖೆಯ ಮ್ಯಾನೇಜರ್ ಮೀನಾಲ್ ಮಾಧವಕುಮಾರ್, ಸೇರಿದಂತೆ ಗ್ರಾಮಸ್ಥರು, ಮಹಿಳೆಯರು, ವಿದ್ಯಾರ್ಥಿಗಳು ಇತರರು ಭಾಗವಹಿಸಿದ್ದರು.































