Home ಜಿಲ್ಲೆ ನೊಂದವರ ಧ್ವನಿಯಾಗಿ ನಿಲ್ಲುವ ಪತ್ರಕರ್ತರು ಸಮಾಜದ ಆಶಾ ಕಿರಣ : ಯಡ್ರಾಮಿ

ನೊಂದವರ ಧ್ವನಿಯಾಗಿ ನಿಲ್ಲುವ ಪತ್ರಕರ್ತರು ಸಮಾಜದ ಆಶಾ ಕಿರಣ : ಯಡ್ರಾಮಿ

ಔರಾದ್ :ಜು.30: ಸಮಾಜದಲ್ಲಿ ಅನ್ಯಾಯ, ಶೋಷಣೆ ಹಾಗೂ ಸಮಸ್ಯೆಗಳಿಗೆ ಒಳಗಾದ ನೊಂದವರ ಪರವಾಗಿ ಧ್ವನಿಯಾಗುವಲ್ಲಿ ಪತ್ರಕರ್ತರ ಪಾತ್ರ ಅತ್ಯಂತ ಮಹತ್ವದ್ದಾಗಿದೆ. ಜನಸಾಮಾನ್ಯರ ಸಮಸ್ಯೆಗಳನ್ನು ಅಧಿಕಾರಿಗಳ ಗಮನಕ್ಕೆ ತಂದು, ಅವರಿಗೆ ನ್ಯಾಯ ದೊರಕಿಸುವ ಸೇತುವೆಯಾಗಿ ಪತ್ರಕರ್ತರು ಕಾರ್ಯ ನಿರ್ವಹಿಸುತ್ತಿದ್ದಾರೆ ಎಂದು ವಿಜಯವಾಣಿ ಸ್ಥಾನಿಕ ಸಂಪಾದಕರಾದ ಬಾಬುರಾವ ಯಡ್ರಾಮಿ ಹೇಳಿದರು.

ಪಟ್ಟಣದ ತಾಲೂಕು ಪಂಚಾಯತ್ ಸಭಾಂಗಣದಲ್ಲಿ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ಹಮ್ಮಿಕೊಂಡಿದ್ದ ಪತ್ರಿಕಾ ದಿನಾಚರಣೆಯ ಕಾರ್ಯಕ್ರಮದಲ್ಲಿ ವಿಶೇಷ ಉಪನ್ಯಾಸ ನೀಡಿ ಮಾತನಾಡಿದ ಅವರು ಗ್ರಾಮೀಣ ಪ್ರದೇಶಗಳಿಂದ ಹಿಡಿದು ನಗರಗಳವರೆಗೆ ಕುಡಿಯುವ ನೀರು, ರಸ್ತೆ, ಆರೋಗ್ಯ, ಶಿಕ್ಷಣ, ಭ್ರಷ್ಟಾಚಾರ ಹಾಗೂ ಸಾರ್ವಜನಿಕ ಸೇವೆಗಳ ಕೊರತೆ ಸೇರಿದಂತೆ ವಿವಿಧ ಸಮಸ್ಯೆಗಳನ್ನು ಬೆಳಕಿಗೆ ತರುವ ಮೂಲಕ ಪತ್ರಕರ್ತರು ಜನರ ಪರ ನಿಲ್ಲುತ್ತಿದ್ದಾರೆ. ಅವರ ವರದಿಗಳ ಪರಿಣಾಮವಾಗಿ ಅನೇಕ ಸಮಸ್ಯೆಗಳಿಗೆ ಪರಿಹಾರ ದೊರಕಿದ್ದು, ಸಂಬಂಧಪಟ್ಟ ಅಧಿಕಾರಿಗಳು ಕ್ರಮ ಕೈಗೊಂಡಿರುವ ಉದಾಹರಣೆಗಳೂ ಸಾಕಷ್ಟಿವೆ. ಪತ್ರಿಕೆ ನೋಡುವುದರಿಂದ ಮನಸ್ಸು ಪ್ರಫುಲ್ಲಗೊಳ್ಳಬೇಕು. ನೊಂದವರಿಗೆ ಧ್ವನಿಯಾಗುವ ಕೆಲಸ ಮಾಡುವ ಮೂಲಕ ನಮ್ಮ ಶ್ರೇಷ್ಠತೆ ಕಾಪಾಡಿ ಕೊಳ್ಳಬೇಕು ಎಂದರು.

ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಶಾಸಕ ಪ್ರಭು ಚವ್ಹಾಣ ಅವರು ಮಾತನಾಡಿ ಪ್ರಜಾಪ್ರಭುತ್ವದ ನಾಲ್ಕನೇ ಅಂಗವೆಂದು ಕರೆಯಲ್ಪಡುವ ಮಾಧ್ಯಮವು ನಿಷ್ಪಕ್ಷಪಾತವಾಗಿ ಕಾರ್ಯನಿರ್ವಹಿಸಿ ಸತ್ಯವನ್ನು ಜನರ ಮುಂದಿಡಬೇಕು. ಜನರ ಸಮಸ್ಯೆಗಳನ್ನು ಅಧಿಕಾರಿಗಳ ಗಮನಕ್ಕೆ ತಂದು, ಅವುಗಳಿಗೆ ಪರಿಹಾರ ದೊರಕುವಂತೆ ಮಾಡುವಲ್ಲಿ ಪತ್ರಕರ್ತರ ಸೇವೆ ಶ್ಲಾಘನೀಯವಾಗಿದೆ.

ಸಾಮಾಜಿಕ ನ್ಯಾಯ ಮತ್ತು ಸಾರ್ವಜನಿಕ ಹಿತಾಸಕ್ತಿಗೆ ಆದ್ಯತೆ ನೀಡುವ ಪತ್ರಕರ್ತರು ಯಾವುದೇ ಒತ್ತಡಗಳಿಗೆ ಮಣಿಯದೆ ಸತ್ಯದ ಪರವಾಗಿ ನಿಲ್ಲಬೇಕು. ನೊಂದವರಿಗೆ ನ್ಯಾಯ ದೊರಕುವಂತೆ ಮಾಡುವಲ್ಲಿ ಮಾಧ್ಯಮದ ಜವಾಬ್ದಾರಿ ಇನ್ನಷ್ಟು ಹೆಚ್ಚಿದ್ದು, ಸಮಾಜದ ಅಭಿವೃದ್ಧಿಗೆ ಪತ್ರಕರ್ತರು ಸೇತುವೆಯಾಗಿ ಕಾರ್ಯನಿರ್ವಹಿಸಬೇಕು ಎಂದು ತಿಳಿಸಿದರು.

ಭಾಲ್ಕಿ ಡಿವೈಎಸ್ಪಿ ಬಲ್ಲಪ್ಪ ನಂದಗಾಂವೆ ಅವರು ಮಾತನಾಡಿ ಪತ್ರಕರ್ತರು ಗಡಿ ಭಾಗದಲ್ಲಿ ಕನ್ನಡ ಉಳಿಸಿ ಬೆಳೆಸುವ ಕಾರ್ಯ ಮಾಡುತ್ತಿರುವುದು ಶ್ಲಾಘನೀಯ, ಜವಾಬ್ದಾರಿಯುತ ಸ್ಥಾನದಲ್ಲಿರುವ ಪತ್ರಕರ್ತರು ನೈಜ ಸುದ್ದಿ ನೀಡುವತ್ತ ಗಮನ ಹರಿಸಬೇಕು ಹಾಗೂ ಸಮಯದಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡವಲ್ಲಿ ಎಲ್ಲರ ಸಹಕಾರ ಅತ್ಯಗತ್ಯವಾಗಿದೆ ಎಂದು ತಿಳಿಸಿದರು.

ಭಾಲ್ಕಿ ಹಿರೇಮಠ ಸಂಸ್ಥಾನದ ಮಹಾಲಿಂಗ ದೇವರು ಆಶೀರ್ವಚನ ನೀಡಿದರು, ಜಿಲ್ಲಾಧ್ಯಕ್ಷ ಆನಂದ ದೇವಪ್ಪ, ಪತ್ರಕರ್ತರ ಸಂಘದ ತಾಲೂಕು ಅಧ್ಯಕ್ಷ ಶಿವಾನಂದ ಮುಕ್ತೆದಾರ ಮಾತನಾಡಿದರು.

ಈ ಸಂಧರ್ಭದಲ್ಲಿ ತಹಸೀಲ್ದಾರ ಮಹೇಶ ಪಾಟೀಲ, ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಕಿರಣ ಪಾಟೀಲ, ಸಹಾಯಕ ನಿರ್ದೇಶಕ ಶಿವಕುಮಾರ ಘಾಟೆ, ಪ್ರ. ಕಾರ್ಯದರ್ಶಿ ಅನಿಲಕುಮಾರ ದೇಶಮುಖ, ವಿವಿಧ ಇಲಾಖೆಗಳ ಅಧಿಕಾರಿಗಳು ಹಾಗೂ ಸಂಘ ಸಂಸ್ಥೆಗಳ ಪ್ರಮುಖರು ಸೇರಿದಂತೆ ಇನ್ನಿತರರಿದ್ದರು.


ಬಾಬುರಾವ ಯಡ್ರಾಮಿ ಅವರಿಗೆ “ಕನ್ನಡ ಜಂಗಮ” ಪ್ರಶಸ್ತಿ ಪ್ರದಾನ

ಮೂರು ದಶಕಗಳ ಅಧಿಕ ಕಾಲದಿಂದಲು ಪತ್ರಿಕಾ ರಂಗದಲ್ಲಿ ಸಲ್ಲಿಸುತ್ತಿರುವ ಸೇವೆ ಯನ್ನು ಪರಿಗಣಿಸಿ ಸ್ಥಾನಿಕ ಸಂಪಾದಕರಾದ ಬಾಬುರಾವ ಯಡ್ರಾಮಿ ಅವರಿಗೆ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ಔರಾದ ಘಟಕದಿಂದ ನಾಡೋಜ ಬಸವಲಿಂಗ ಪಟ್ಟದೇವರ ಅಮೃತ ಮಹೋತ್ಸವ ಸ್ಮರಣಾರ್ಥ ರಾಜ್ಯ ಮಟ್ಟದ “ಕನ್ನಡ ಜಂಗಮ” ಪ್ರಶಸ್ತಿ ಪ್ರದಾನ ಮಾಡಿ ಗೌರವಿಸಲಾಯಿತು. ಈ ವೇಳೆ ತಾಲೂಕಿನ ದೃಶ್ಯ ಹಾಗೂ ಮುದ್ರಣ ಮಾಧ್ಯಮ ಮಿತ್ರರಿಗೆ ಗೌರವಿಸಲಾಯಿತು.