Home ಜಿಲ್ಲೆ ಸರ್ಕಾರ, ಜನರ ಧ್ವನಿಯಾಗಲಿ ಪತ್ರಿಕೋದ್ಯಮ: ಗುರುಬಸವ ಪಟ್ಟದ್ದೇವರು

ಸರ್ಕಾರ, ಜನರ ಧ್ವನಿಯಾಗಲಿ ಪತ್ರಿಕೋದ್ಯಮ: ಗುರುಬಸವ ಪಟ್ಟದ್ದೇವರು

ಕಮಲನಗರ: ಪ್ರಜಾಪ್ರಭುತ್ವ ಯಶಸ್ವಿಗೆ ಪತ್ರಿಕೋದ್ಯಮವು ಭದ್ರಬುನಾದಿಯಾಗಿದ್ದು ಪತ್ರಕರ್ತರು ಸರ್ಕಾರ ಮತ್ತು ಜನರ ಮಧ್ಯೆ ಧ್ವನಿಯಾಗಿ ಪತ್ರಿಕೋದ್ಯಮ ಉತ್ತಮ ಸಮಾಜ ರೂಪುಗೊಳ್ಳಲು ಕಾರಣವಾಗಬೇಕು ಎಂದು ಭಾಲ್ಕಿ ಹಿರೇಮಠ ಸಂಸ್ಥಾನ ಪೀಠಾಧಿಪತಿ ಗುರುಬಸವ ಪಟ್ಟದ್ದೇವರು ಹೇಳಿದರು.

ಪಟ್ಟಣದಲ್ಲಿ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ತಾಲೂಕು ಘಟಕ ಡಾ| ಚನ್ನಬಸವ ಪಟ್ಟದ್ದೇವರು ಪ್ರೌಢ ಶಾಲೆಯಲ್ಲಿ ಶುಕ್ರವಾರ ಆಯೋಜಿಸಿದ್ದ ಪತ್ರಿಕಾ ದಿನಾಚರಣೆ ಮತ್ತು ಮಾಧ್ಯಮ ರತ್ನ ಪ್ರಶಸ್ತಿ ಪ್ರಧಾನ ಕಾರ್ಯಕ್ರಮದಲ್ಲಿ ದಿವ್ಯ ನೇತೃತ್ವ ವಹಿಸಿ ಮಾತನಾಡಿದರು.

ಪತ್ರಕರ್ತರು ಸರ್ಕಾರಕ್ಕೆ ನೀತಿ ನಿರೂಪಣೆ ಮಾಡಲು ಸಾರ್ವಜನಿಕರ ಸಮಸ್ಯೆಗಳ ಬಗ್ಗೆ ಬೆಳಕು ಚೆಲ್ಲುತ್ತಾರೆ. ಸಾಂಪ್ರದಾಯಿಕ ಪತ್ರಿಕೋದ್ಯಮವು ಇಂದಿನ ಸಾಮಾಜಿಕ ಮಾಧ್ಯಮಗಳ ಭರಾಟೆಯ ನಡುವೆ ಸುದ್ಧಿಯ ಪಾವಿತ್ರ‍್ಯತೆ ತಿಳಿಯಲು ಸಹಕಾರಿಯಾಗಿದ್ದು, ನಾಯಕತ್ವ ನಿರ್ಮಾಣಕ್ಕೆ ಪ್ರೇರಣೆ ನೀಡುತ್ತದೆ ಎಂದರು.

ಪತ್ರಕರ್ತರು ಕೇವಲ ಪ್ರಶಂಸೆಗೆ ಮಾತ್ರ ಮೀಸಲಾಗದೆ ಕ್ರಿಯಾತ್ಮಕ ಯುವಮುಖಂಡ ಪ್ರತೀಕ ಚವಾಣ್ ಮಾತನಾಡಿ, ವಿಮರ್ಶೆ ಮತ್ತು ಟೀಕೆ ಟಿಪ್ಪಣಿಗಳನ್ನು ಮಾಡಿ ಜಿಲ್ಲಾಡಳಿತಕ್ಕೆ ಮಾರ್ಗದರ್ಶನ ನೀಡುವಂತಾದರೆ ಪತ್ರಿಕೋದ್ಯಮ ಸದೃಢವಾಗಿ ಬೆಳೆಯಲು ಸಾಧ್ಯ. ಪತ್ರಕರ್ತರು ಹಾಗೂ ಜಿಲ್ಲಾಡಳಿತ ಪೂರಕವಾಗಿ ಕೆಲಸ ಮಾಡಿದರೆ ಕ್ಷಿಪ್ರವಾಗಿ ಪ್ರಗತಿ ಹೊಂದಲು ಸಾಧ್ಯವಾಗುತ್ತದೆ ಎಂದರು.

ಆಧುನಿಕ ತಂತ್ರಜ್ಞಾನ ಮತ್ತು ಸಾಮಾಜಿಕ ಜಾಲತಾಣಗಳ ಬೆಳವಣಿಗೆಗಳಿಂದ ವೇಗವಾಗಿ ಮಾಹಿತಿ ಎಲ್ಲ ಜನರಿಗೆ ಹರಡುತ್ತಿರುವುದರಿಂದ ಪತ್ರಕರ್ತರು ಹಾಗೂ ಪೊಲೀಸರಿಗೆ ದೊಡ್ಡ ಸವಲಾಗಿದೆ. ಯಾವುದು ಸತ್ಯ, ಯಾವುದು ಸುಳ್ಳು, ಯಾವುದು ತಿರುಚಿದ ಸುದ್ಧಿ, ಯಾವುದು ಡೀಪ್ ಫೇಕ್ ಸುದ್ಧಿ ಎಂಬುದನ್ನು ವರ್ಗಿಕರಣ ಮಾಡಲು ಕಷ್ಟವಾದ ಸಂದರ್ಭದಲ್ಲಿ ಸತ್ಯ ಮತ್ತು ನಂಬಿಕೆಯಿAದ ಕೆಲಸ ಮಾಡುವ ಹೊಣೆಗಾರಿಕೆ ಇಬ್ಬರ ಮೇಲಿದ್ದು ಅಂತಹ ಸವಾಲನ್ನು ಮೆಟ್ಟಿ ನಿಲ್ಲಬೇಕಾಗಿದೆ. ಸುಳ್ಳು ಸುದ್ಧಿ ವಿರುದ್ಧ ಹಾಗೂ ಸತ್ಯಕ್ಕಾಗಿ ಒಟ್ಟಾಗಿ ಕೆಲಸ ಮಾಡುವ ಜವಾಬ್ದಾರಿ ಪತ್ರಕರ್ತರು ಹಾಗೂ ಪೊಲೀಸರು ನಿರ್ವಹಿಸಬೇಕಾಗಿದೆ ಎಂದರು.

ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶಿವಕುಮಾರ ಸ್ವಾಮಿ ವಿಶೇಷ ಆಹ್ವಾನಿತರಾಗಿ ಮಾರ್ಗದರ್ಶಿ ಮಾತುಗಳನ್ನಾಡಿ, ಪತ್ರಕರ್ತರಾಗಲು ಬದ್ಧತೆ ಮತ್ತು ಮೌಲ್ಯಗಳು ಅತ್ಯಗತ್ಯ. ಘನತೆ, ನಿಷ್ಠೆ ಹಾಗೂ ಸಾಮಾಜಿಕ ಕಾಳಜಿಯಿಂದ ಕೆಲಸ ಮಾಡಿದರೆ ರಾಷ್ಟ್ರ ನಿರ್ಮಾಣಕ್ಕೆ ಮಹತ್ತರ ಕೊಡುಗೆ ನೀಡಬಹುದು ಎಂದು ಹೇಳಿದರು.

ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ತಾಲ್ಲೂಕು ಘಟಕ ಅಧ್ಯಕ್ಷ ಮನೋಜಕುಮಾರ ಹಿರೇಮಠ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದರು.

ಯುವ ಉದ್ಯಮಿ ವಿಜಯಕುಮಾರ ಬಿರಾದಾರ, ತಹಶೀಲ್ದಾರ್ ಅಮಿತಕುಮಾರ ಕುಲಕರ್ಣಿ, ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಹಣಮಂತರಾಯ ಕೌಟಗೆ, ಕಮಲನಗರ ಸಿಪಿಐ ಶ್ರೀಕಾಂತ ಅಲ್ಲಾಪುರೆ, ಸರ್ಕಾರಿ ನೌಕರರ ಸಂಘ ಅಧ್ಯಕ್ಷ ಸುನೀಲಕುಮಾರ ಕಸ್ತೂರೆ, ಸಮುದಾಯ ಆಸ್ಪತ್ರೆಯ ವೈದ್ಯಾಧಿಕಾರಿ ಡಾ. ಶ್ರೀಮಂತ ಮಡಿವಾಳ, ಗೌರವ ಅಧ್ಯಕ್ಷ ಡಾ| ಎಸ್.ಎಸ್.ಮೈನಾಳೆ ಸೇರಿದಂತೆ ಹಲವು ಗಣ್ಯರು ಹಾಗೂ ಪತ್ರಕರ್ತರು ಕಾರ್ಯಕ್ರಮದಲ್ಲಿ ಭಾಗವಹಿಸಿದರು.

ಕಸಾಪ ಅಧ್ಯಕ್ಷ ಪ್ರಶಾಂತ ಮಠಪತಿ ಸ್ವಾಗತಿಸಿದರು. ಮಹಾದೇವ ಮಡಿವಾಳ ನಿರೂಪಿಸಿದರು. ಆಡಳಿತಾಧಿಕಾರಿ ಚನ್ನಬಸವ ಘಾಳೆ ವಂದಿಸಿದರು.

ಗಣ್ಯರಿAದ ಕಮಲನಗರ ತಾಲ್ಲೂಕು ಪತ್ರಕರ್ತರೆಲ್ಲರಿಗೂ ಸನ್ಮಾನಿಸಲಾಯಿತು.