
ವಿಜಯಪುರ, ಜು. 30: ದಕ್ಷಿಣ ಕೊರಿಯಾದ ಪ್ರಮುಖ ಮೆಟಲ್-ಕಟಿಂಗ್ ಮೆಷಿನ್ ತಯಾರಿಕಾ ಸಂಸ್ಥೆಯಾದ ಡಿ.ಎನ್. ಸಲ್ಯೂಷನ್ಸ್ ಕರ್ನಾಟಕದಲ್ಲಿ ತನ್ನ ಮಹತ್ವಾಕಾಂಕ್ಷಿ ಉತ್ಪಾದನಾ ಘಟಕವನ್ನು ಆಗಸ್ಟ್ 26ರಂದು ಉದ್ಘಾಟಿಸಲಿದ್ದು, ಮೊದಲ ಹಂತದಲ್ಲಿ 400 ಎಂಜಿನಿಯರ್‍ಗಳಿಗೆ ಉದ್ಯೋಗ ನೀಡಲಿದೆ. ಈ ಪೈಕಿ ವಿಜಯಪುರದ ಬಿ.ಎಲ್.ಡಿ.ಇ. ಎಂಜಿನಿಯರಿಂಗ್ ಕಾಲೇಜಿನ 8 ಹಾಗೂ ಶ್ರೀ ಸಂಗನಬಸವ ಮಹಾಸ್ವಾಮೀಜಿ ಪಾಲಿಟೆಕ್ನಿಕ್ ಕಾಲೇಜಿನ 12 ವಿದ್ಯಾರ್ಥಿಗಳು ಸೇರಿದಂತೆ ಒಟ್ಟು 20 ವಿದ್ಯಾರ್ಥಿಗಳು ಆಯ್ಕೆಯಾಗಿರುವುದು ಜಿಲ್ಲೆಯ ಹೆಮ್ಮೆಯ ಸಂಗತಿಯಾಗಿದೆ ಎಂದು ಕೈಗಾರಿಕೆ, ಮೂಲಸೌಕರ್ಯ ಅಭಿವೃದ್ಧಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಂ. ಬಿ. ಪಾಟೀಲ ತಿಳಿಸಿದ್ದಾರೆ.
ಈ ಸಂಸ್ಥೆಯಲ್ಲಿ ಉದ್ಯೋಗ ದೊರೆತಿರುವುದು ಯುವಕರ ಪ್ರತಿಭೆಗೆ ಸಂದ ಗೌರವವಾಗಿದೆ. ಮೊದಲ ಹಂತದಲ್ಲಿ ನೇಮಕಗೊಂಡಿರುವ 400 ಯುವಕರಲ್ಲಿ ಉತ್ತರ ಕರ್ನಾಟಕದ 117 ಮಂದಿಗೆ ಅವಕಾಶ ದೊರೆತಿರುವುದು ವಿಶೇಷ ಸಂತಸ ತಂದಿದೆ ಎಂದು ಸಚಿವರು ಹೇಳಿದ್ದಾರೆ.
ಡಿ.ಎನ್. ಸಲ್ಯೂಷನ್ಸ್ ದಕ್ಷಿಣ ಕೊರಿಯಾದ ನಂ.1 ಹಾಗೂ ವಿಶ್ವದ ಮೂರನೇ ಅತಿದೊಡ್ಡ ಮೆಟಲ್-ಕಟಿಂಗ್ ಮೆಷಿನ್ ತಯಾರಿಕಾ ಸಂಸ್ಥೆಯಾಗಿದೆ. ಸಂಸ್ಥೆಯು ಈ ವರ್ಷದ ಫೆಬ್ರವರಿಯಿಂದ ಕರ್ನಾಟಕದಲ್ಲಿ ತನ್ನ ಉತ್ಪಾದನಾ ಘಟಕದ ನಿರ್ಮಾಣ ಕಾರ್ಯ ಆರಂಭಿಸಿದ್ದು, ದೇವನಹಳ್ಳಿಯ ಐಟಿಐಆರ್ ಸಮೀಪ ಸುಮಾರು ?1,000 ಕೋಟಿ ಹೂಡಿಕೆಯೊಂದಿಗೆ 10 ಎಕರೆ ಪ್ರದೇಶದಲ್ಲಿ ಘಟಕ ನಿರ್ಮಾಣಗೊಳ್ಳುತ್ತಿದೆ.
ರಾಜ್ಯ ಸರ್ಕಾರಕ್ಕೆ ಬಂದಿರುವ ಹೂಡಿಕೆಗಳು ಕೇವಲ ಘೋಷಣೆಗಳಾಗಿ ಉಳಿಯದೆ, ನೆಲೆಯೂರಿ ಉದ್ಯೋಗ ಸೃಷ್ಟಿಸುತ್ತಿರುವುದು ರಾಜ್ಯದ ಕೈಗಾರಿಕಾ ಬೆಳವಣಿಗೆಯ ಪ್ರತೀಕವಾಗಿದೆ. ಇದರಿಂದ ಸಾವಿರಾರು ಯುವಕರಿಗೆ ಉದ್ಯೋಗಾವಕಾಶಗಳು ಸೃಷ್ಟಿಯಾಗಿ ಅವರ ಭವಿಷ್ಯ ಉಜ್ವಲವಾಗಲಿದೆ ಎಂದು ಸಚಿವ ಎಂ. ಬಿ. ಪಾಟೀಲ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಈ ಮಧ್ಯೆ, ಡಿ.ಎನ್. ಸಲ್ಯೂಷನ್ಸ್‍ನ ಭಾರತ ಮಾರಾಟ ಮತ್ತು ಮಾರುಕಟ್ಟೆ ವಿಭಾಗದ ಮುಖ್ಯಸ್ಥ ಯಂಗ್ಸಾಮ್ ಕಿಮ್ ಹಾಗೂ ಅವರ ತಂಡದ ಸದಸ್ಯರು ಬೆಂಗಳೂರಿನಲ್ಲಿ ಸಚಿವ ಎಂ. ಬಿ. ಪಾಟೀಲ ಅವರನ್ನು ಭೇಟಿ ಮಾಡಿ, ಆಗಸ್ಟ್ 26ರಂದು ನಡೆಯಲಿರುವ ಉತ್ಪಾದನಾ ಘಟಕದ ಉದ್ಘಾಟನಾ ಸಮಾರಂಭಕ್ಕೆ ಅಧಿಕೃತ ಆಹ್ವಾನ ನೀಡಿದರು.






























