Home ಜಿಲ್ಲೆ ಅಂತರರಾಷ್ಟ್ರೀಯ ಯೋಗ ದಿನಾಚರಣೆ: ಯೋಗದ ಮಹತ್ವ ಸಾರಲು ಯೋಗ ಸಪ್ತಾಹ : ಯೋಗಗುರು ಗೋರಖನಾಥ ಕುಂಬಾರ...

ಅಂತರರಾಷ್ಟ್ರೀಯ ಯೋಗ ದಿನಾಚರಣೆ: ಯೋಗದ ಮಹತ್ವ ಸಾರಲು ಯೋಗ ಸಪ್ತಾಹ : ಯೋಗಗುರು ಗೋರಖನಾಥ ಕುಂಬಾರ ಚಾಲನೆ

ಬೀದರ್ :ಜೂ.15: ವಿಶ್ವ ಯೋಗ ದಿನಾಚರಣೆಯ ಅಂಗವಾಗಿ ಉತ್ತಮ ಆರೋಗ್ಯವನ್ನು ವೃದ್ಧಿಸಲು ಮತ್ತು ದೈನಂದಿನ ಜೀವನದಲ್ಲಿ ಯೋಗದ ಮಹತ್ವವನ್ನು ಸಾರುವ ಉದ್ದೇಶದಿಂದ ಜಿಲ್ಲೆಯಾದ್ಯಂತ ಯೋಗ ಸಪ್ತಾಹ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಯೋಗಸಾಧಕ ಹಾಗೂ ಐ.ಎನ್.ಓ ಜಿಲ್ಲಾದ್ಯಕ್ಷರಾದ ಗೋರಖನಾಥ ಕುಂಬಾರ ಹೇಳಿದರು.

ಬೀದರ ತಾಲ್ಲೂಕಿನ ಘೋಡಂಪಳ್ಳಿ ಗ್ರಾಮದ ಅಟಲ್ ಬಿಹಾರಿ ವಾಜಪೇಯಿ ಶಾಲೆಯ ಆವರಣದಲ್ಲಿ ಇಂಟನ್ರ್ಯಾಷನಲ್ ನ್ಯಾಚುರೋಪತಿ ಆರ್ಗನೈಸೇಶನ್, ಸೂರ್ಯ ಫೌಂಡೇಶನ್ ಹಾಗೂ ಪತಂಜಲಿ ಯೋಗ ಸಂಸ್ಥೆಯ ಯುವ ಘಟಕದ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡ ಯೋಗ ಸಪ್ತಾಹ ಕಾರ್ಯಕ್ರಮಕ್ಕೆ ಸಸಿಗೆ ನೀರೆರೆದು ಚಾಲನೆ ನೀಡಿ ಅವರು ಮಾತನಾಡಿದರು.

ಈ ಯೋಗ ಸಪ್ತಾಹದಲ್ಲಿ ಮಕ್ಕಳಿಗೆ ಯೋಗಾಸನ, ಪ್ರಾಣಾಯಾಮ, ಧ್ಯಾನದ ತರಬೇತಿ ನೀಡುವುದರ ಜೊತೆಗೆ ಇಂದಿನ ಒತ್ತಡದ ಜೀವನಶೈಲಿಯಲ್ಲಿ ಕಾಡುವ ಮಧುಮೇಹ, ರಕ್ತದೊತ್ತಡ, ಬೆನ್ನುನೋವು ಮತ್ತು ಮಾನಸಿಕ ಒತ್ತಡಗಳನ್ನು ಯೋಗ ಮತ್ತು ನಿಸರ್ಗೋಪಚಾರದ ಮೂಲಕ ಹೇಗೆ ನಿಯಂತ್ರಿಸಬಹುದು ಎಂಬುದರ ಬಗ್ಗೆ ತಿಳಿಸಿಕೊಡಲಾಗುವುದು ಎಂದರು.

ಸೂರ್ಯ ಫೌಂಡೇಶನ್ ರಾಜ್ಯ ಸಂಚಾಲಕ ಗುರುನಾಥ ರಾಜಗೀರಾ ಮಾತನಾಡಿ ಯೋಗ ಎಂಬುದು ಕೇವಲ ದೈಹಿಕ ಕಸರತ್ತಲ್ಲ, ಅದು ದೇಹ ಮತ್ತು ಮನಸ್ಸನ್ನು ಜೋಡಿಸುವ ಅದ್ಭುತ ಕಲೆ. ಪ್ರತಿಯೊಬ್ಬರೂ ದಿನದಲ್ಲಿ ಕನಿಷ್ಠ 30 ನಿಮಿಷಗಳನ್ನು ಯೋಗಕ್ಕಾಗಿ ಮೀಸಲಿಟ್ಟರೆ ಸದೃಢ ಹಾಗೂ ಆರೋಗ್ಯವಂತ ಸಮಾಜ ನಿರ್ಮಾಣ ಸಾಧ್ಯ ಈ ನಿಟ್ಟಿನಲ್ಲಿ ವಿಶ್ವ ಯೋಗ ದಿನಾಚರಣೆಯ ಪ್ರಯುಕ್ತ ಈ ಯೋಗ ಸಪ್ತಾಹ ಹಮ್ಮಿಕೊಳ್ಳಲಾಗಿದೆ ಎಂದರು.

ಶಾಲೆಯ ಮುಖ್ಯಗುರುಗಳಾದ ಶರಣಪ್ಪಾ ಬಿರಾದರ ಮಾತನಾಡಿ ಮಕ್ಕಳಲ್ಲಿ ಉತ್ತಮ ಆರೋಗ್ಯ ಮತ್ತು ಯೋಗದ ಜಾಗೃತಿ ಮೂಡಿಸಲು ಯೋಗ ಸಪ್ತಾಹ ಕಾರ್ಯಕ್ರಮ ಹಮ್ಮಿಕೊಂಡಿರುವುದು ಅತ್ಯಂತ ಶ್ಲಾಘನೀಯ ಕಾರ್ಯವಾಗಿದೆ ಮಕ್ಕಳೆಲ್ಲರು ಈ ಸಪ್ತಾಹದಲ್ಲಿ ಸಕ್ರಿಯವಾಗಿ ಹಾಗೂ ಉತ್ಸಾಹಭರಿತದಿಂದ ಪಾಲ್ಗೊಂಡು ಯೋಗ ಸಪ್ತಾಹದ ಲಾಭ ಪಡೆದುಕೊಳ್ಳಬೇಕೆಂದರು.

ಈ ಸಂದರ್ಭದಲ್ಲಿ ಶಾಲೆಯ ಶಿಕ್ಷಕರಾದ ದೇವಿದಾಸ ಜೋಶಿ, ರಘುನಾಥ ರೆಡ್ಡಿ ಸೇರಿದಂತೆ ಇತರರಿದ್ದರು.