
ಕಲಬುರಗಿ,ಆ.16-ಉತ್ತರಾಖಂಡದ ಹಲ್ಮಾನಿಯಲ್ಲಿ ರಾಜ್ಯಸಭೆಯ ವಿರೋಧ ಪಕ್ಷದ ನಾಯಕ ಹಾಗೂ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಭಾಗವಹಿಸಿದ್ದ ಬಹಿರಂಗ ಸಭೆ ನಡೆದ ಸ್ಥಳವನ್ನು ಬಳಿಕ ಶುದ್ಧಿಕರಣ ಮಾಡಿರುವ ಘಟನೆ ಪ್ರಜಾಪ್ರಭುತ್ವದ ಮೌಲ್ಯಗಳನ್ನೇ ಪ್ರಶ್ನಿಸುವಂತಿದೆ. ಇದು ಖರ್ಗೆ ಅವರಿಗೆ ಮಾಡಿದ ಅವಮಾನ ಮಾತ್ರವಲ್ಲ, ಸಂವಿಧಾನ ಪ್ರತಿಪಾದಿಸುವ ಸಮಾನತೆ ಮತ್ತು ಸಾಮಾಜಿಕ ನ್ಯಾಯಕ್ಕೆ ಮಾಡಿದ ಅಪಮಾನ ಎಂದು ಕೆಪಿಸಿಸಿ ಪದವೀಧರ ವಿಭಾಗದ ರಾಜ್ಯ ಪ್ರಧಾನ ಕಾರ್ಯದರ್ಶಿ ಡಾ.ಕೃಷ್ಣಮೂರ್ತಿ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ದೇಶದ ಪ್ರಮುಖ ವಿರೋಧ ಪಕ್ಷದ ನಾಯಕರೊಬ್ಬರು ಭಾಗವಹಿಸಿದ ಸಭೆಯ ಸ್ಥಳವನ್ನು ಜಾತಿ ಹಾಗೂ ಧರ್ಮದ ಪೂರ್ವಗ್ರಹದಿಂದ ಶುದ್ದೀಕರಣ ಮಾಡಲಾಗಿದೆ ಎಂಬ ಆರೋಪ ನಿಜವಾಗಿದ್ದರೆ, ಇದು ನಾಗರಿಕ ಸಮಾಜ ತಲೆತಗ್ಗಿಸುವಂತಹ ಕೃತ್ಯ. ಜಾತಿಯ ಆಧಾರದ ಮೇಲೆ ಮನುಷ್ಯರನ್ನು ಮೇಲು-ಕೀಳು ಎಂದು ನೋಡುವ ಮನಸ್ಥಿತಿ ಇನ್ನೂ ಜೀವಂತವಾಗಿರುವುದಕ್ಕೆ ಈ ಘಟನೆ ಸಾಕ್ಷಿಯಾಗಿದೆ ಎಂದು ಅವರು ಕಿಡಿಕಾರಿದ್ದಾರೆ.
“ದೇಶದ ವಿರೋಧ ಪಕ್ಷದ ನಾಯಕರಿಗೇ ಈ ರೀತಿಯ ಅವಮಾನ ನಡೆಯುವುದಾದರೆ, ಸಾಮಾನ್ಯ ದಲಿತರು, ಬಡವರು ಮತ್ತು ದುರ್ಬಲ ವರ್ಗಗಳ ಪರಿಸ್ಥಿತಿ ಏನಾಗಬಹುದು ? ಅಧಿಕಾರ ಮತ್ತು ಪ್ರಭಾವ ಹೊಂದಿರುವವರನ್ನೇ ಗುರಿಯಾಗಿಸುವ ಇಂತಹ ಮನೋಭಾವವನ್ನು ಸಹಿಸಲು ಸಾಧ್ಯವಿಲ್ಲ” ಎಂದು ಡಾ.ಕೃಷ್ಣಮೂರ್ತಿ ಹೇಳಿದ್ದಾರೆ.
ಬಾಬಾಸಾಹೇಬ್ ಡಾ.ಬಿ.ಆರ್.ಅಂಬೇಡ್ಕರ್ ಅವರು ನೀಡಿದ ಸಂವಿಧಾನವು ಪ್ರತಿಯೊಬ್ಬ ಭಾರತೀಯನಿಗೂ ಸಮಾನತೆ, ಸ್ವಾತಂತ್ರ್ಯ ಮತ್ತು ಸಹೋದರತ್ವದ ಹಕ್ಕು ನೀಡಿದೆ. ಸಂವಿಧಾನ ದೇಶದ ದಾರಿದೀಪವಾಗಿರುವಾಗ ಜಾತಿ-ಧರ್ಮದ ಪೂರ್ವಗ್ರಹಕ್ಕೆ ಜಾಗ ನೀಡುವುದು ಸಂವಿಧಾನದ ಆಶಯಗಳಿಗೇ ಸವಾಲು ಹಾಕಿದಂತಾಗಿದೆ ಎಂದು ಅವರು ಆರೋಪಿಸಿದ್ದಾರೆ.
ಶ್ರೀರಾಮಸೇನೆಯವರು ಸ್ಥಳ ಶುದ್ದೀಕರಣ ಮಾಡಿರುವುದು ಖಂಡನೀಯ. ಘಟನೆಯ ಕುರಿತು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಅವರು ತನಿಖೆಗೆ ಆದೇಶಿಸಿರುವುದು ಬಾಲಿಶತನದಿಂದ ಕೂಡಿದೆ. ಘಟನೆ ಬಹಿರಂಗವಾಗಿದ್ದು, ಎಲ್ಲವೂ ಜನರ ಕಣ್ಣ ಮುಂದೆಯೇ ಇರುವಾಗ ತನಿಖೆಯ ಹೆಸರಿನಲ್ಲಿ ಕಾಲಹರಣ ಮಾಡುವ ಬದಲು ತಪ್ಪಿತಸ್ಥರ ವಿರುದ್ಧ ತಕ್ಷಣ ಕ್ರಮ ಕೈಗೊಳ್ಳಬೇಕು ಎಂದು ಅವರು ಒತ್ತಾಯಿಸಿದ್ದಾರೆ.
ಉತ್ತರಾಖಂಡದ ಮುಖ್ಯಮಂತ್ರಿ ಹಾಗೂ ದೇಶದ ಪ್ರಧಾನಮಂತ್ರಿಗಳು ಈ ಘಟನೆಗೆ ಸ್ಪಷ್ಟ ಉತ್ತರ ನೀಡಬೇಕು, ಪ್ರಜಾಪ್ರಭುತ್ವದ ಮೌಲ್ಯಗಳು ಮತ್ತು ಸಂವಿಧಾನದ ಆಶಯಗಳನ್ನು ಗೌರವಿಸುವ ನಿಟ್ಟಿನಲ್ಲಿ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಡಾ.ಕೃಷ್ಣಮೂರ್ತಿ ಆಗ್ರಹಿಸಿದ್ದಾರೆ.































