
ಕೋಲಾರ,ಸೆ,೮- ಜಿಲ್ಲೆಯಲ್ಲಿ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ ಕಾರ್ಯ ನಡೆಯುತ್ತಿದ್ದು, ಹಿಂದಿನ ದತ್ತಸಂಚಯದೊಂದಿಗೆ ಮಾಹಿತಿಯು ಹೊಂದಿಕೆಯಾಗದ ಹಾಗೂ ಮ್ಯಾಪಿಂಗ್ ಇಲ್ಲದ ಬರೋಬ್ಬರಿ ೧,೪೨,೧೮೧ ಮತದಾರರಿಗೆ ವಿಚಾರಣಾ ನೋಟಿಸ್ ಸೃಜಿಸಿ ವಿತರಿಸಲಾಗುತ್ತಿದೆಂದು ಜಿಲ್ಲಾಧಿಕಾರಿ ಎಂ.ಆರ್. ರವಿಕುಮಾರ್ ಅವರು ತಿಳಿಸಿದ್ದಾರೆ.
ನಗರದ ಜಿಲ್ಲಾಧಿಕಾರಿಗಳ ಕಚೇರಿಯ ಕೇಸ್ವಾನ್ ಸಭಾಂಗಣದಲ್ಲಿ ಸೆಪ್ಟೆಂಬರ್ ೭ರಂದು ಜಿಲ್ಲೆಯ ಪ್ರಮುಖ ರಾಜಕೀಯ ಪಕ್ಷಗಳ ಪ್ರತಿನಿಧಿಗಳೊಂದಿಗೆ ಹಮ್ಮಿಕೊಂಡಿದ್ದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಎಸ್‌ಐಆರ್ ಹಂತದ ಚಟುವಟಿಕೆಗಳ ಭಾಗವಾಗಿ ೧,೦೫,೫೦೧ ಮ್ಯಾಪಿಂಗ್ ಇಲ್ಲದ ಹಾಗೂ ೩೬,೬೯೬ ಹೊಂದಿಕೆಯಾಗದ ವ್ಯತ್ಯಾಸಗಳಿರುವ ಮತದಾರರಿಗೆ ನೋಟಿಸ್ ಸೃಜಿಸಲಾಗಿದ್ದು, ಈ ಪೈಕಿ ಶೇ.೫೩.೪೧ರಷ್ಟು ಅಂದರೆ ೭೫,೯೩೮ ನೋಟಿಸ್‌ಗಳನ್ನು ಈಗಾಗಲೇ ವಿತರಿಸಲಾಗಿದೆ.
ಶ್ರೀನಿವಾಸಪುರದಲ್ಲಿ ೯,೨೭೫, ಮುಳಬಾಗಿಲಿನಲ್ಲಿ ೯,೧೯೩, ಕೆಜಿಎಫ್‌ನಲ್ಲಿ ೧೩,೨೮೯, ಬಂಗಾರಪೇಟೆಯಲ್ಲಿ ೧೧,೬೭೬, ಕೋಲಾರದಲ್ಲಿ ೧೫,೪೮೫ ಮತ್ತು ಮಾಲೂರು ಕ್ಷೇತ್ರದಲ್ಲಿ ೧೭,೦೨೦ ನೋಟಿಸ್‌ಗಳನ್ನು ವಿತರಿಸಲಾಗಿದೆ. ಇವುಗಳ ವಿಚಾರಣೆ ನಡೆಸಲು ಜಿಲ್ಲೆಯಾದ್ಯಂತ ೧೩೩ ಹೆಚ್ಚುವರಿ ಸಹಾಯಕ ಮತದಾರರ ನೋಂದಣಾಧಿಕಾರಿಗಳನ್ನು ನೇಮಿಸಲಾಗಿದೆ, ಇದರಲ್ಲಿ ಶ್ರೀನಿವಾಸಪುರಕ್ಕೆ ೨೩, ಮುಳಬಾಗಿಲಿಗೆ ೨೦, ಕೆಜಿಎಫ್‌ಗೆ ೨೦, ಬಂಗಾರಪೇಟೆಗೆ ೨೦, ಕೋಲಾರಕ್ಕೆ ೩೦ ಹಾಗೂ ಮಾಲೂರು ಕ್ಷೇತ್ರಕ್ಕೆ ೨೦ ಅಧಿಕಾರಿಗಳನ್ನು ನಿಯೋಜಿಸಲಾಗಿದೆ.
ನೋಟಿಸ್ ಸ್ವೀಕರಿಸಿದ ಹಾಗೂ ೨೦೦೨ರ ಮತದಾರರ ಪಟ್ಟಿಯಲ್ಲಿ ಹೆಸರಿಲ್ಲದ ವ್ಯಕ್ತಿಗಳು ವಿಚಾರಣೆ ವೇಳೆ ಭಾರತ ಚುನಾವಣಾ ಆಯೋಗ ಸೂಚಿಸಿರುವ ೧೨ ಬಗೆಯ ದಾಖಲೆಗಳ ಪೈಕಿ ಯಾವುದಾದರೂ ಒಂದನ್ನು ಕಡ್ಡಾಯವಾಗಿ ಸಲ್ಲಿಸಬೇಕು.
ಕೇಂದ್ರ ಅಥವಾ ರಾಜ್ಯ ಸರ್ಕಾರ, ಸಾರ್ವಜನಿಕ ವಲಯದ ಖಾಯಂ ಉದ್ಯೋಗಿ ಅಥವಾ ಪಿಂಚಣಿದಾರರಿಗೆ ನೀಡಲಾದ ಗುರುತಿನ ಚೀಟಿ, ಪಿಂಚಣಿ ಆದೇಶ, ಜುಲೈ ೧, ೧೯೮೭ಕ್ಕೂ ಮೊದಲು ಸರ್ಕಾರ, ಸ್ಥಳೀಯ ಪ್ರಾಧಿಕಾರ, ಬ್ಯಾಂಕ್, ಅಂಚೆ ಕಚೇರಿ ಅಥವಾ ಎಲ್‌ಐಸಿ ನೀಡಿರುವ ಯಾವುದೇ ಗುರುತಿನ ಚೀಟಿ ಅಥವಾ ಪ್ರಮಾಣಪತ್ರ, ಸಕ್ಷಮ ಪ್ರಾಧಿಕಾರದಿಂದ ನೀಡಲಾದ ಜನನ ಪ್ರಮಾಣಪತ್ರ, ಪಾಸ್‌ಪೋರ್ಟ್, ಮಾನ್ಯತೆ ಪಡೆದ ಮಂಡಳಿ ಅಥವಾ ವಿಶ್ವವಿದ್ಯಾಲಯ ನೀಡಿದ ಮೆಟ್ರಿಕ್ಯುಲೇಷನ್ ಮತ್ತು ಶೈಕ್ಷಣಿಕ ಪ್ರಮಾಣಪತ್ರಗಳನ್ನು ಸಲ್ಲಿಸಬಹುದು.
ಇದರ ಜೊತೆಗೆ ಸಕ್ಷಮ ಪ್ರಾಧಿಕಾರದಿಂದ ನೀಡಲಾದ ಖಾಯಂ ನಿವಾಸ ಪ್ರಮಾಣಪತ್ರ, ಅರಣ್ಯ ಹಕ್ಕು ಪ್ರಮಾಣಪತ್ರ, ಒಬಿಸಿ, ಪರಿಶಿಷ್ಟ ಜಾತಿ ಅಥವಾ ಪರಿಶಿಷ್ಟ ಪಂಗಡದ ಜಾತಿ ಪ್ರಮಾಣಪತ್ರ, ರಾಷ್ಟ್ರೀಯ ಪೌರತ್ವ ರಿಜಿಸ್ಟರ್ ದಾಖಲೆ, ರಾಜ್ಯ ಅಥವಾ ಸ್ಥಳೀಯ ಪ್ರಾಧಿಕಾರಗಳು ಸಿದ್ಧಪಡಿಸಿದ ಕುಟುಂಬ ರಿಜಿಸ್ಟರ್ ಹಾಗೂ ಸರ್ಕಾರದಿಂದ ನೀಡಿದ ಯಾವುದೇ ಜಮೀನು ಅಥವಾ ಮನೆ ಹಂಚಿಕೆ ಪ್ರಮಾಣಪತ್ರವನ್ನು ಒದಗಿಸಬಹುದು. ಆಧಾರ್ ಕಾರ್ಡ್ ಅನ್ನು ಕೇವಲ ಗುರುತನ್ನು ಸಾಬೀತುಪಡಿಸುವ ದಾಖಲೆಯಾಗಿ ಮಾತ್ರ ಪರಿಗಣಿಸಲಾಗುವುದು ಎಂದು ಸುಪ್ರೀಂ ಕೋರ್ಟ್ ಆದೇಶದ ಅನ್ವಯ ಸ್ಪಷ್ಟಪಡಿಸಲಾಗಿದೆ.
ವಿಚಾರಣೆ ನಡೆಸಿ ಸ್ಪೀಕಿಂಗ್ ಆರ್ಡರ್ ಹೊರಡಿಸಲಾಗುವುದು ಹಾಗೂ ಅಂತಿಮವಾಗಿ ನಮೂನೆ-೧೬ರಲ್ಲಿ ಅಂತಿಮ ಮತದಾರರ ಪಟ್ಟಿ ಪ್ರಕಟವಾಗಲಿದೆ. ಚುನಾವಣಾ ಆಯೋಗದ ನಿರ್ದೇಶನದಂತೆ ಅಕ್ಟೋಬರ್ ೧, ೨೦೨೬ರ ಅರ್ಹತಾ ದಿನಾಂಕಕ್ಕೆ ಅನುಗುಣವಾಗಿ ಆಗಸ್ಟ್ ೨೪ರಂದು ಕರಡು ಮತದಾರರ ಪಟ್ಟಿಯನ್ನು ಪ್ರಕಟಿಸಲಾಗಿದ್ದು, ಹಕ್ಕು ಮತ್ತು ಆಕ್ಷೇಪಣೆಗಳನ್ನು ಸಲ್ಲಿಸಲು ಸೆಪ್ಟೆಂಬರ್ ೨೩ರವರೆಗೆ ಕಾಲಾವಕಾಶವಿದೆ.
ಪ್ರಸ್ತುತ ಕರಡು ಪಟ್ಟಿಯಂತೆ ಜಿಲ್ಲೆಯ ಆರು ವಿಧಾನಸಭಾ ಕ್ಷೇತ್ರಗಳ ವ್ಯಾಪ್ತಿಯ ೧,೫೭೮ ಮತಗಟ್ಟೆಗಳಲ್ಲಿ ಒಟ್ಟು ೧೧,೨೪,೨೩೧ ಮತದಾರರಿದ್ದಾರೆ (೫,೫೮,೬೮೦ ಪುರುಷರು, ೫,೬೫,೪೬೧ ಮಹಿಳೆಯರು, ೯೦ ಇತರೆ). ಕ್ಷೇತ್ರವಾರು ಗಮನಿಸಿದರೆ ಶ್ರೀನಿವಾಸಪುರದಲ್ಲಿ ೧,೯೭,೦೪೪, ಮುಳಬಾಗಿಲಿನಲ್ಲಿ ೧,೯೬,೩೮೦,
ಕೆಜಿಎಫ್‌ನಲ್ಲಿ ೧,೬೩,೩೨೬, ಬಂಗಾರಪೇಟೆಯಲ್ಲಿ ೧,೮೦,೮೮೫, ಕೋಲಾರದಲ್ಲಿ ೨,೦೮,೪೬೬ ಮತ್ತು ಮಾಲೂರು ಕ್ಷೇತ್ರದಲ್ಲಿ ೧,೭೮,೧೩೦ ಮತದಾರರಿದ್ದಾರೆ. ಆಗಸ್ಟ್ ೨೪ ರಿಂದ ಸೆಪ್ಟೆಂಬರ್ ೭ರವರೆಗೆ ಜಿಲ್ಲೆಯಲ್ಲಿ ಹೊಸ ಸೇರ್ಪಡೆಗೆ ೧,೬೧೪ ಹಾಗೂ ತಿದ್ದುಪಡಿ ಸೇರಿದಂತೆ ಒಟ್ಟು ೩,೩೮೩ ಅರ್ಜಿಗಳು ಸ್ವೀಕೃತವಾಗಿವೆ. ಅಕ್ಟೋಬರ್ ೧ಕ್ಕೆ ೧೮ ವರ್ಷ ತುಂಬುವ ಯುವಕ-ಯುವತಿಯರು ಕಡ್ಡಾಯವಾಗಿ ನಮೂದಿಸಿಕೊಳ್ಳಬೇಕು, ಹಾಗೂ ಕರಡು ಪಟ್ಟಿಯನ್ನು ceo.karnataka.gov.in ಮತ್ತು Û kolar.nic.in/en/ ಜಾಲತಾಣಗಳಲ್ಲಿ ಪ್ರಕಟಿಸಲಾಗಿದ್ದು, ಸಾರ್ವಜನಿಕರು ಆನ್‌ಲೈನ್ (voters.eci.gov.in ಇಸಿಐನೆಟ್ ಪ್, ಬಿಎಲ್‌ಒ ಅಪ್) ಮೂಲಕವೂ ಅರ್ಜಿ ಸಲ್ಲಿಸಬಹುದು ಎಂದು ವಿವರಿಸಲಾಯಿತು.
































