
ಕಲಬುರಗಿ,ಸೆ.9-ಜಿಲ್ಲೆಯ ಸಾರ್ವಜನಿಕರ ಸುರಕ್ಷತೆ ಹಾಗೂ ರಸ್ತೆಗಳಲ್ಲಿ ಸುಗಮ, ಶಿಸ್ತುಬದ್ಧ ಸಂಚಾರವನ್ನು ಖಾತರಿಪಡಿಸುವ ಉದ್ದೇಶದಿಂದ ಜಿಲ್ಲಾ ಪೊಲೀಸ್ ಇಲಾಖೆಯು ಮಹತ್ವದ ಹೆಜ್ಜೆಯನ್ನಿಟ್ಟಿದೆ.
ರಸ್ತೆ ಸುರಕ್ಷತೆ ಎಂಬುದು ಪ್ರತಿಯೊಬ್ಬ ನಾಗರಿಕನ ಜೀವ ಹಾಗೂ ಕುಟುಂಬದ ಹಿತದೃಷ್ಟಿಯಿಂದ ಅತ್ಯಂತ ಮಹತ್ವದ್ದಾಗಿದ್ದು, ಸಂಚಾರ ನಿಯಮಗಳನ್ನು ಪಾಲಿಸುವ ಮೂಲಕ ಪ್ರತಿಯೊಬ್ಬರೂ ತಮ್ಮ ಹಾಗೂ ಇತರರ ಸುರಕ್ಷತೆಗೆ ಕೊಡುಗೆ ನೀಡಬಹುದಾಗಿದೆ. ಈ ನಿಟ್ಟಿನಲ್ಲಿ ಸಾರ್ವಜನಿಕರಿಗೆ ಇನ್ನಷ್ಟು ಸುರಕ್ಷಿತ ಹಾಗೂ ವ್ಯವಸ್ಥಿತ ಸಂಚಾರ ವಾತಾವರಣವನ್ನು ಒದಗಿಸುವ ಸಲುವಾಗಿ ಅತ್ಯಾಧುನಿಕ ಎಐ ಆಧಾರಿತ ಕ್ಯಾಮೆರಾಗಳನ್ನು ಅಳವಡಿಸಲಾಗಿದ್ದು, ಸಂಚಾರ ನಿಯಮ ಉಲ್ಲಂಘಿಸುವವರ ವಿರುದ್ಧ ಐಟಿಎಂಎಸ್( ಇಂಟೆಲಿಜೆಂಟ್ ಟ್ರಾಫಿಕ್ ಮ್ಯಾನೇeಮೆಂಟ್ ಸಿಸ್ಟಮ್) ತಂತ್ರಾಂಶದ ಮೂಲಕ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಡ್ಡೂರು ಶ್ರೀನಿವಾಸಲು ತಿಳಿಸಿದ್ದಾರೆ.
ಈ ಯೋಜನೆಯಡಿ ಕಲಬುರಗಿ ಜಿಲ್ಲೆಯ ಗೊಬ್ಬೂರವಾಡಿ-ಚೌಡಾಪೂರ ಹೆದ್ದಾರಿ, ಜೇವರ್ಗಿ-ಸಿಂಧಗಿ ಹೆದ್ದಾರಿ, ಕಲಬುರಗಿ-ಹುಮನಾಬಾದ ಹೆದ್ದಾರಿ, ಕಲಬುರಗಿ-ಸೇಡಂ ಹೆದ್ದಾರಿ, ಕಲಬುರಗಿ-ಆಳಂದ ಹೆದ್ದಾರಿ, ಶಹಾಬಾದ-ಯಾದಗಿರಿ ಹೆದ್ದಾರಿಗಳಲ್ಲಿ ಒಟ್ಟು 12 ಎಐ ಆಧಾರಿತ ಕ್ಯಾಮೆರಾಗಳನ್ನು ಅಳವಡಿಸಲಾಗಿದ್ದು, ಪ್ರಸ್ತುತ ಈ ಕ್ಯಾಮೆರಾಗಳ ಪ್ರಾಯೋಗಿಕ (ಟ್ರಯಲ್ ರನ್) ಚಾಲನೆಯು ಈಗಾಗಲೇ ಪ್ರಾರಂಭವಾಗಿದ್ದು, ಈ ಪ್ರಾಯೋಗಿಕ ಹಂತ ಪೂರ್ಣಗೊಂಡ ನಂತರ ಇವುಗಳನ್ನು ರಿಯಲ್-ಟೈಮ್ (ನೈಜ ಸಮಯ) ಆಧಾರದಲ್ಲಿ ಪೂರ್ಣ ಪ್ರಮಾಣದಲ್ಲಿ ಜಾರಿಗೊಳಿಸಲಾಗುವುದು ಎಂದು ಅವರು ತಿಳಿಸಿದ್ದಾರೆ.
ಹೆಲ್ಮೆಟ್ ಧರಿಸದೆ ವಾಹನ ಚಾಲನೆ, ಟ್ರಿಪಲ್ ರೈಡಿಂಗ್, ವಾಹನ ಚಾಲನೆ ಸಮಯದಲ್ಲಿ ಮೊಬೈಲ್ ಫೋನ್ ಬಳಕೆ, ಸೀಟ್ ಬೆಲ್ಟ್ ಧರಿಸದಿರುವುದು, ಅತಿ ವೇಗದ ಚಾಲನೆ (ಓವರ್‍ಸ್ಪೀಡಿಂಗ್), ತಪ್ಪು ಪಥದಲ್ಲಿ ವಾಹನ ಚಾಲನೆ-ಈ ಸಂಚಾರ ನಿಯಮಗಳನ್ನು ಉಲ್ಲಂಘಿಸುವ ವಾಹನ ಸವಾರರ ಮೇಲೆ ಈ ಕ್ಯಾಮೆರಾಗಳ ಮೂಲಕ ದಂಡ ವಿಧಿಸಲಾಗುವುದು ಹಾಗೂ ಸಂಬಂಧಪಟ್ಟ ವಾಹನದ ನೋಂದಣಿ ಮೊಬೈಲ್ ಸಂಖ್ಯೆಗೆ ದಂಡದ ಚಲನ್ (ಚಲಾನ್) ಲಿಂಕ್ ಕಳುಹಿಸಲಾಗುವುದು. ಸಾರ್ವಜನಿಕರು ಈ ದಂಡವನ್ನು ಸಂಬಂಧಪಟ್ಟ ವ್ಯಾಪ್ತಿಯ ಪೊಲೀಸ್ ಠಾಣೆಗೆ ಖುದ್ದಾಗಿ ಭೇಟಿ ನೀಡಿ ಪಾವತಿಸಬಹುದು ಅಥವಾ ಮೊಬೈಲ್‍ಗೆ ಸ್ವೀಕರಿಸಿದ ಲಿಂಕ್ ಮೂಲಕ ಆನ್‍ಲೈನ್‍ನಲ್ಲಿಯೂ ಸುಲಭವಾಗಿ ಪಾವತಿಸುವ ಅವಕಾಶವಿರುತ್ತದೆ ಎಂದು ಅವರು ತಿಳಿಸಿದ್ದಾರೆ.
ಸಾರ್ವಜನಿಕರ ಸುರಕ್ಷತೆ ಮತ್ತು ಶಿಸ್ತುಬದ್ಧ ಸಂಚಾರ ವ್ಯವಸ್ಥೆ ನಿರ್ಮಾಣದಲ್ಲಿ ಎಲ್ಲರೂ ಸಹಕರಿಸುವಂತೆ ಅವರು ಮನವಿ ಮಾಡಿದ್ದಾರೆ.






























