
ಸಂಜೆವಾಣಿ ವಾರ್ತೆ,
ವಿಜಯಪುರ, ಜು. ೨೯: ದಿವಂಗತ ಡಾ. ಬಿ.ಎಂ. ಪಾಟೀಲರ ಪುಣ್ಯಸ್ಮರಣೆಯ ಅಂಗವಾಗಿ ಬಬಲೇಶ್ವರ ತಾಲೂಕಿನ ಮಮದಾಪುರದಲ್ಲಿ ಬಿ.ಎಲ್.ಡಿ.ಇ. ಡೀಮ್ಡ್ ವಿಶ್ವವಿದ್ಯಾಲಯದ ಶ್ರೀ ಬಿ.ಎಂ. ಪಾಟೀಲ ವೈದ್ಯಕೀಯ ಮಹಾವಿದ್ಯಾಲಯ, ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರದ ವತಿಯಿಂದ ನೂತನ ಗ್ರಾಮೀಣ ಆರೋಗ್ಯ ಕೇಂದ್ರವನ್ನು ಉದ್ಘಾಟಿಸಿ, ಉಚಿತ ಆರೋಗ್ಯ ತಪಾಸಣೆ ಶಿಬಿರವನ್ನು ಸೋಮವಾರ ಆಯೋಜಿಸಲಾಯಿತು.
ಮಮದಾಪುರ ವಿರಕ್ತಮಠದ ಶ್ರೀ ಅಭಿನವ ಮುರುಘೇಂದ್ರ ಮಹಾಸ್ವಾಮಿಗಳು ನೂತನ ಗ್ರಾಮೀಣ ಆರೋಗ್ಯ ಕೇಂದ್ರವನ್ನು ಉದ್ಘಾಟಿಸಿದರು.
ಕಾರ್ಯಕ್ರಮದಲ್ಲಿ ಮಾತನಾಡಿದ ಡಾ. ತೇಜಸ್ವಿನಿ ವಲ್ಲಭ, ಗ್ರಾಮೀಣ ಜನತೆಗೆ ಗುಣಮಟ್ಟದ ಆರೋಗ್ಯ ಸೇವೆಗಳನ್ನು ಅವರ ಮನೆಬಾಗಿಲಿನಲ್ಲೇ ತಲುಪಿಸುವ ಉದ್ದೇಶದಿಂದ ಈ ಆರೋಗ್ಯ ಕೇಂದ್ರವನ್ನು ಆರಂಭಿಸಲಾಗಿದೆ. ಗ್ರಾಮೀಣ ಭಾಗಗಳಲ್ಲಿ ಆರೋಗ್ಯ ಸೇವೆಗಳ ವಿಸ್ತರಣೆಗೆ ಬಿ.ಎಲ್.ಡಿ.ಇ. ಸಂಸ್ಥೆ ನಿರಂತರವಾಗಿ ಬದ್ಧವಾಗಿದೆ ಎಂದು ತಿಳಿಸಿದರು.
ಇದಕ್ಕೂ ಮುನ್ನ ಗಣ್ಯರು ದಿವಂಗತ ಡಾ. ಬಿ.ಎಂ. ಪಾಟೀಲ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಗೌರವ ನಮನ ಅರ್ಪಿಸಿದರು.
ಈ ಸಂದರ್ಭದಲ್ಲಿ ಡೀಮ್ಡ್ ವಿಶ್ವವಿದ್ಯಾಲಯದ ಕುಲಾಧಿಪತಿ ಬಿ.ಎಂ. ಪಾಟೀಲ, ಕುಲಪತಿ ಡಾ. ಅರುಣ ಚಂದ್ರ ಇನಾಮದಾರ, ಹಿರಿಯ ಉಪಪ್ರಾಂಶುಪಾಲ ಡಾ. ವಿಜಯಕುಮಾರ ಟಿ. ಕಲ್ಯಾಣಪ್ಪಗೋಳ, ಉಪವೈದ್ಯಕೀಯ ಅಧೀಕ್ಷಕ ಡಾ. ರವಿಕುಮಾರ ಬಿರಾದಾರ, ಮುಖಂಡರಾದ ಮಲ್ಲಿಕಾರ್ಜುನ ಗಂಗೂರ, ಮಧ್ವಾಚಾರ ಕುಲಕರ್ಣಿ, ಡಾ. ಕೌಸರ್ ನಿಯಾಜ್ ಅತ್ತಾರ, ಪ್ರಶಾಂತ ದೇಸಾಯಿ, ಲಕ್ಷ್ಮಣ ತೇಲಿ, ಪ್ರಕಾಶ ಸೊನ್ನದ, ಹನುಮಂತ ಎಚ್. ಹಾಗೂ ಗ್ರಾಮೀಣ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ. ಚಂದು ರಾಠೋಡ ಸೇರಿದಂತೆ ಹಲವರು ಉಪಸ್ಥಿತರಿದ್ದರು.
೨೭೬ ಮಂದಿಗೆ ಆರೋಗ್ಯ ತಪಾಸಣೆ
ಬೆಳಿಗ್ಗೆ ೧೦ರಿಂದ ಸಂಜೆ ೪.೩೦ರವರೆಗೆ ನಡೆದ ಉಚಿತ ಆರೋಗ್ಯ ತಪಾಸಣೆ ಶಿಬಿರದಲ್ಲಿ ವಿವಿಧ ವಿಭಾಗಗಳ ತಜ್ಞ ವೈದ್ಯರು ಸಾರ್ವಜನಿಕರ ಆರೋಗ್ಯ ತಪಾಸಣೆ ನಡೆಸಿ ಅಗತ್ಯ ಸಲಹೆ ಹಾಗೂ ಉಚಿತ ಔಷಧಿಗಳನ್ನು ವಿತರಿಸಿದರು. ಶಿಬಿರದಲ್ಲಿ ಒಟ್ಟು ೨೭೬ ಮಂದಿ ಆರೋಗ್ಯ ತಪಾಸಣೆ ಮಾಡಿಸಿಕೊಂಡಿದ್ದು, ಅವರಲ್ಲಿ ೪೦ ಮಂದಿಗೆ ಹೆಚ್ಚಿನ ಚಿಕಿತ್ಸೆಗಾಗಿ ವಿಜಯಪುರದ ಬಿ.ಎಲ್.ಡಿ.ಇ. ಆಸ್ಪತ್ರೆಗೆ ಭೇಟಿ ನೀಡುವಂತೆ ವೈದ್ಯರು ಶಿಫಾರಸು ಮಾಡಿದರು






























