Home ಜಿಲ್ಲೆ ಕರ್ನಾಟಕ ಅಭಿವೃದ್ಧಿ ದೃಷ್ಟಿಯಿಂದ ಖರ್ಗೆ, ದರ್ಶನಾಪೂರರಿಗೆ ಡಿಸಿಎಂ; ತುನ್ನೂರರಿಗೆ ಸಚಿವ ಸ್ಥಾನ ನೀಡಲು ಹೈಕಮಾಂಡ್‌ಗೆ ಮನವಿ

ಕರ್ನಾಟಕ ಅಭಿವೃದ್ಧಿ ದೃಷ್ಟಿಯಿಂದ ಖರ್ಗೆ, ದರ್ಶನಾಪೂರರಿಗೆ ಡಿಸಿಎಂ; ತುನ್ನೂರರಿಗೆ ಸಚಿವ ಸ್ಥಾನ ನೀಡಲು ಹೈಕಮಾಂಡ್‌ಗೆ ಮನವಿ

ಯಾದಗಿರಿ:ಜೂ.೧: ರಾಜ್ಯದಲ್ಲಿ ನೂತನ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಲಿರುವ ಡಿ.ಕೆ.ಶಿವಕುಮಾರ ಅವರ ನೇತೃತ್ವದ ಸಚಿವ ಸಂಪುಟದಲ್ಲಿ ಕಲ್ಯಾಣ ಕರ್ನಾಟಕ ಭಾಗಕ್ಕೆ ಹೆಚ್ಚಿನ ಪ್ರಾತಿನಿಧ್ಯ ನೀಡುವ ಉದ್ದೇಶದಿಂದ, ಹಿರಿಯ ನಾಯಕರು ಪ್ರಿಯಾಂಕ್ ಖರ್ಗೆ ಹಾಗೂ ಶರಣಬಸಪ್ಪ ದರ್ಶನಾಪೂರ ಅವರಿಗೆ ಉಪ ಮುಖ್ಯಮಂತ್ರಿ (ಡಿಸಿಎಂ) ಸ್ಥಾನ ಮತ್ತು ಹಿರಿಯ ಶಾಸಕ ಚನ್ನಾರೆಡ್ಡಿ ಪಾಟೀಲ್ ತುನ್ನೂರ ಅವರಿಗೆ ಸಚಿವ ಸ್ಥಾನ ನೀಡಬೇಕೆಂದು ಕಾಂಗ್ರೆಸ್ ಹೈಕಮಾಂಡ್‌ಗೆ ಮನವಿ ಸಲ್ಲಿಸಲಾಗಿದೆ.

ನಗರದ ಪತ್ರಿಕಾ ಭವನದಲ್ಲಿ ನಡೆದ ಜಂಟಿ ಸುದ್ದಿಗೋಷ್ಠಿಯಲ್ಲಿ ಕಾಂಗ್ರೆಸ್ ಪಕ್ಷದ ಹಿರಿಯ ಮುಖಂಡರಾದ ಡಾ. ಅಮರಣ್ಣ ಗಡ್ಡೆಸೂಗೂರ ಹಾಗೂ ಶರಣಪ್ಪಗೌಡ ಮಾಲಿ ಪಾಟೀಲ್ ಕೌಳೂರ ಮಾತನಾಡಿ, ಕಲ್ಯಾಣ ಕರ್ನಾಟಕ ಭಾಗದ ಸಮಗ್ರ ಅಭಿವೃದ್ಧಿ, ಆಡಳಿತಾತ್ಮಕ ಬಲವರ್ಧನೆ ಹಾಗೂ ಪ್ರಾದೇಶಿಕ ಸಮತೋಲನದ ದೃಷ್ಟಿಯಿಂದ ಈ ಭಾಗದ ಸಮರ್ಥ ನಾಯಕರಿಗೆ ಸಚಿವ ಸಂಪುಟದಲ್ಲಿ ಉನ್ನತ ಸ್ಥಾನಮಾನ ನೀಡುವುದು ಅಗತ್ಯವಾಗಿದೆ ಎಂದು ಅಭಿಪ್ರಾಯಪಟ್ಟರು.

ಈಗಾಗಲೇ ರಾಜ್ಯ ಸಚಿವ ಸಂಪುಟದಲ್ಲಿ ವಿವಿಧ ಸಮುದಾಯಗಳಿಗೆ ಉಪ ಮುಖ್ಯಮಂತ್ರಿ ಸ್ಥಾನ ನೀಡುವ ಕುರಿತು ಚರ್ಚೆಗಳು ನಡೆಯುತ್ತಿರುವ ಸಂದರ್ಭದಲ್ಲಿ, ಕಲ್ಯಾಣ ಕರ್ನಾಟಕ ಭಾಗದ ಅಭಿವೃದ್ಧಿಗೆ ಮಹತ್ವದ ಕೊಡುಗೆ ನೀಡಿರುವ ನಾಯಕರಾದ ಪ್ರಿಯಾಂಕ್ ಖರ್ಗೆ ಹಾಗೂ ಶರಣಬಸಪ್ಪ ದರ್ಶನಾಪೂರ ಅವರಿಗೆ ಡಿಸಿಎಂ ಸ್ಥಾನ ನೀಡಿದಲ್ಲಿ ಪ್ರದೇಶದ ಸಾಮಾಜಿಕ, ಶೈಕ್ಷಣಿಕ, ಕೈಗಾರಿಕಾ ಹಾಗೂ ಮೂಲಸೌಕರ್ಯ ಅಭಿವೃದ್ಧಿಗೆ ಹೊಸ ಚೈತನ್ಯ ದೊರೆಯಲಿದೆ ಎಂದು ಅವರು ತಿಳಿಸಿದರು.

ಅದೇ ರೀತಿ, ಯಾದಗಿರಿ ಕ್ಷೇತ್ರದ ಶಾಸಕ ಚನ್ನಾರೆಡ್ಡಿ ಪಾಟೀಲ್ ತುನ್ನೂರ ಅವರು ಎಪಿಎಂಸಿ ಸದಸ್ಯ, ಜಿಲ್ಲಾ ಪಂಚಾಯಿತಿ ಸದಸ್ಯ, ವಿಧಾನ ಪರಿಷತ್ ಸದಸ್ಯ ಸೇರಿದಂತೆ ವಿವಿಧ ಹುದ್ದೆಗಳಲ್ಲಿ ಕಾರ್ಯನಿರ್ವಹಿಸಿ ಅಪಾರ ಆಡಳಿತಾತ್ಮಕ ಅನುಭವ ಗಳಿಸಿರುವ ನಾಯಕರು. ಪ್ರಸ್ತುತ ಶಾಸಕರಾಗಿ ಜನಸಾಮಾನ್ಯರ ಸಮಸ್ಯೆಗಳಿಗೆ ಸ್ಪಂದಿಸುತ್ತಾ, ಶಾಶ್ವತ ಅಭಿವೃದ್ಧಿ ಕಾಮಗಾರಿಗಳಿಗೆ ಆದ್ಯತೆ ನೀಡುತ್ತಿರುವ ಅವರು ಸರಳತೆ, ಸಜ್ಜನಿಕೆ ಹಾಗೂ ಜನಪರ ಧೋರಣೆಯಿಂದ ಜನರ ಮೆಚ್ಚುಗೆ ಪಡೆದಿದ್ದಾರೆ ಎಂದು ಶ್ಲಾಘಿಸಿದರು.

ಯಾದಗಿರಿ ಜಿಲ್ಲೆಗೆ ಸಚಿವ ಸಂಪುಟದಲ್ಲಿ ಪ್ರಾತಿನಿಧ್ಯ ದೊರಕಿಸುವ ನಿಟ್ಟಿನಲ್ಲಿ ಚನ್ನಾರೆಡ್ಡಿ ಪಾಟೀಲ್ ತುನ್ನೂರ ಅವರಿಗೆ ಸಚಿವ ಸ್ಥಾನ ನೀಡುವುದು ಸೂಕ್ತವಾಗಿದ್ದು, ಇದು ಜಿಲ್ಲೆಯ ಅಭಿವೃದ್ಧಿಗೆ ಹೊಸ ದಿಕ್ಕು ನೀಡುವ ಜೊತೆಗೆ ಪ್ರಾದೇಶಿಕ ಸಮತೋಲನಕ್ಕೂ ಸಹಕಾರಿಯಾಗಲಿದೆ ಎಂದು ಅವರು ಒತ್ತಾಯಿಸಿದರು.

ಕಲ್ಯಾಣ ಕರ್ನಾಟಕ ಭಾಗದ ಜನರ ಆಶೋತ್ತರಗಳನ್ನು ಪರಿಗಣಿಸಿ, ಪಕ್ಷದ ರಾಷ್ಟ್ರೀಯ ಹಾಗೂ ರಾಜ್ಯ ಮಟ್ಟದ ನಾಯಕರು ಈ ಬೇಡಿಕೆಯನ್ನು ಗಂಭೀರವಾಗಿ ಪರಿಶೀಲಿಸಿ ನ್ಯಾಯ ಒದಗಿಸಬೇಕು ಎಂದು ಅವರು ಆಗ್ರಹಿಸಿದರು.

ಸುದ್ದಿಗೋಷ್ಠಿಯಲ್ಲಿ ಶರಣಬಸಪ್ಪ ಪಾಟೀಲ್ ಕುರಕುಂದಿ ಅಮರಣ್ಣ ಸಾಹುಕಾರ್ ಗಡ್ಡೆಸೂಗೂರ

ಸೇರಿದಂತೆ ಹಲವಾರು ಮುಖಂಡರು ಉಪಸ್ಥಿತರಿದ್ದರು.