Home ಜಿಲ್ಲೆ ಪ್ರಜಾಪ್ರಭುತ್ವದಲ್ಲಿ ಹಕ್ಕುಗಳ ಬಗ್ಗೆ ಮಾತನಾಡುವಷ್ಟೇ ಕರ್ತವ್ಯಗಳ ಅರಿವು ಹೊಂದುವುದು ಅಗತ್ಯ:ಶಾಸಕ ಕಟಕದೊಂಡ

ಪ್ರಜಾಪ್ರಭುತ್ವದಲ್ಲಿ ಹಕ್ಕುಗಳ ಬಗ್ಗೆ ಮಾತನಾಡುವಷ್ಟೇ ಕರ್ತವ್ಯಗಳ ಅರಿವು ಹೊಂದುವುದು ಅಗತ್ಯ:ಶಾಸಕ ಕಟಕದೊಂಡ

ವಿಜಯಪುರ, ಸೆ.16:
ಪ್ರಜಾಪ್ರಭುತ್ವವೆಂದರೆ ಐದು ವರ್ಷಕ್ಕೊಮ್ಮೆ ಮತ ಚಲಾಯಿಸುವುದಷ್ಟೇ ಅಲ್ಲ; ಅದು ಪ್ರತಿಯೊಬ್ಬ ನಾಗರಿಕನ ಜವಾಬ್ದಾರಿಯಾಗಿದೆ. ಸಂವಿಧಾನದ ಆಶಯದಂತೆ ಪರಸ್ಪರ ಚರ್ಚೆ, ಸಮಾಲೋಚನೆ, ಸಹಕಾರ, ಸಮಾನತೆ ಹಾಗೂ ಭ್ರಾತೃತ್ವದೊಂದಿಗೆ ಎಲ್ಲರನ್ನು ಒಗ್ಗೂಡಿಸಿಕೊಂಡು ಸಾಗುವುದೇ ಪ್ರಜಾಪ್ರಭುತ್ವದ ನಿಜವಾದ ಸೌಂದರ್ಯ ಎಂದು ನಾಗಠಾಣ ಶಾಸಕ ವಿಠ್ಠಲ ಕಟಕದೊಂಡ ಹೇಳಿದರು.
ನಗರದ ಕಂದಗಲ್ ಹನುಮಂತರಾಯ ರಂಗಮಂದಿರದಲ್ಲಿ ಮಂಗಳವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ಹಾಗೂ ವಿವಿಧ ಇಲಾಖೆಗಳ ಸಹಯೋಗದಲ್ಲಿ ಆಯೋಜಿಸಿದ್ದ ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಹಾಗೂ ಯುವ ಸಂಸತ್ತು ಸಭೆ ಉದ್ಘಾಟಿಸಿ ಅವರು ಮಾತನಾಡಿದರು.
ಪ್ರಜಾಪ್ರಭುತ್ವದಲ್ಲಿ ಹಕ್ಕುಗಳ ಬಗ್ಗೆ ಮಾತನಾಡುವಷ್ಟೇ ಕರ್ತವ್ಯಗಳ ಅರಿವು ಹೊಂದುವುದು ಅಗತ್ಯ. ಪ್ರತಿಯೊಬ್ಬ ನಾಗರಿಕನೂ ತನ್ನ ಹಕ್ಕುಗಳ ಜತೆಗೆ ಜವಾಬ್ದಾರಿಯನ್ನೂ ಅರ್ಥಮಾಡಿಕೊಂಡು ನಡೆದುಕೊಳ್ಳಬೇಕು. ಜನರೇ ಪ್ರಭುಗಳಾಗಿರುವ ವ್ಯವಸ್ಥೆಯಲ್ಲಿ ಜನರ ಅಭಿಪ್ರಾಯವನ್ನು ಆಲಿಸಿ, ಒಮ್ಮತದ ನಿರ್ಣಯ ಕೈಗೊಳ್ಳುವುದೇ ಪ್ರಜಾಪ್ರಭುತ್ವದ ಯಶಸ್ಸಿಗೆ ಮೂಲವಾಗಿದೆ ಎಂದರು.
ಯುವಕರು ದೇಶದ ಭವಿಷ್ಯವಾಗಿದ್ದು, ಅವರು ಮುಂದೆ ಬಂದಾಗ ಮಾತ್ರ ದೇಶ ಅಭಿವೃದ್ಧಿಯತ್ತ ಸಾಗಲು ಸಾಧ್ಯ. ಯುವಜನರು ತಮ್ಮ ಹಕ್ಕು ಮತ್ತು ಕರ್ತವ್ಯಗಳನ್ನು ಅರಿತು ದೇಶದ ಪ್ರಗತಿಗೆ ಕೈಜೋಡಿಸಬೇಕು ಎಂದು ಕರೆ ನೀಡಿದರು.
ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಲಕ್ಷ್ಮಣ ನಿಂಬರಗಿ ಮಾತನಾಡಿ, ವಿದ್ಯಾರ್ಥಿಗಳು ಪ್ರಜಾಪ್ರಭುತ್ವ ವ್ಯವಸ್ಥೆ, ಶಾಸಕಾಂಗ, ಕಾಯಾರ್ಂಗ ಮತ್ತು ನ್ಯಾಯಾಂಗದ ಕಾರ್ಯವೈಖರಿಯನ್ನು ಅರ್ಥಮಾಡಿಕೊಳ್ಳಬೇಕು. ಹಕ್ಕು ಹಾಗೂ ಕರ್ತವ್ಯಗಳನ್ನು ಪಾಲಿಸುವ ಮೂಲಕ ದೇಶದ ಅಭಿವೃದ್ಧಿಯಲ್ಲಿ ಯುವಕರು ಸಕ್ರಿಯವಾಗಿ ಭಾಗವಹಿಸಬೇಕು ಎಂದರು.
ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಅವರು ದೇಶದ ವೈವಿಧ್ಯತೆಯನ್ನು ಗಮನದಲ್ಲಿಟ್ಟುಕೊಂಡು ಶ್ರೇಷ್ಠ ಸಂವಿಧಾನ ರೂಪಿಸಿದ್ದಾರೆ. ಅದರ ಆಶಯಗಳನ್ನು ಅರಿತುಕೊಂಡು ಯುವಜನತೆ ರಾಷ್ಟ್ರ ನಿರ್ಮಾಣದಲ್ಲಿ ತಮ್ಮ ಕೊಡುಗೆ ನೀಡಬೇಕು ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಜಿಲ್ಲಾಧಿಕಾರಿ ಡಾ. ಆನಂದ ಕೆ. ಮಾತನಾಡಿ, ದೇಶದಲ್ಲಿ ಯಾವುದೂ ಸರ್ವೋಚ್ಚವಲ್ಲ; ಸಂವಿಧಾನವೇ ಸರ್ವೋಚ್ಚ. ಸಂವಿಧಾನದ ಆಶಯದಡಿ ಪ್ರತಿಯೊಬ್ಬರಿಗೂ ಸಮಾನತೆ, ಮತದಾನದ ಹಕ್ಕು ಹಾಗೂ ಮೂಲಭೂತ ಕರ್ತವ್ಯಗಳನ್ನು ನೀಡಲಾಗಿದೆ ಎಂದರು.
ಹಿಂದಿನ ವರ್ಷಗಳಲ್ಲಿ ಮಾನವ ಸರಪಳಿ ಹಾಗೂ ಬೈಕ್ ರ್ಯಾಲಿ ಮೂಲಕ ಪ್ರಜಾಪ್ರಭುತ್ವ ದಿನ ಆಚರಿಸಲಾಗಿತ್ತು. ಈ ಬಾರಿ ಯುವ ಸಂಸತ್ತು ಪರಿಕಲ್ಪನೆಯಡಿ ಕಾರ್ಯಕ್ರಮ ಆಯೋಜಿಸಲಾಗಿದ್ದು, ವಿದ್ಯಾರ್ಥಿ ದೆಸೆಯಿಂದಲೇ ಮಕ್ಕಳು ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಅರಿತುಕೊಳ್ಳುವ ಉದ್ದೇಶ ಹೊಂದಿದೆ. ತಾಲೂಕು ಹಾಗೂ ಜಿಲ್ಲಾ ಮಟ್ಟದಲ್ಲಿ ಯುವ ಸಂಸತ್ತು ನಡೆಸಿ, ಆಯ್ಕೆಯಾದ ವಿದ್ಯಾರ್ಥಿಗಳನ್ನು ರಾಜ್ಯ ಮಟ್ಟಕ್ಕೆ ಕಳುಹಿಸುವ ಅವಕಾಶವಿದೆ ಎಂದರು.
ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯದ ಪತ್ರಿಕೋದ್ಯಮ ಮತ್ತು ಸಮೂಹ ಮಾಧ್ಯಮ ವಿಭಾಗದ ಹಿರಿಯ ಪ್ರಾಧ್ಯಾಪಕ ಡಾ. ಓಂಕಾರ ಕಾಕಡೆ ವಿಶೇಷ ಉಪನ್ಯಾಸ ನೀಡಿ, ಪ್ರಜಾಪ್ರಭುತ್ವ ದಿನಾಚರಣೆ ಕೇವಲ ಆಚರಣೆಯಾಗದೆ, ಪ್ರಜಾಪ್ರಭುತ್ವದ ಮೌಲ್ಯಗಳನ್ನು ನಾವು ಎಷ್ಟರ ಮಟ್ಟಿಗೆ ಜೀವನದಲ್ಲಿ ಅಳವಡಿಸಿಕೊಂಡಿದ್ದೇವೆ ಎಂಬುದನ್ನು ಆತ್ಮಾವಲೋಕನ ಮಾಡಿಕೊಳ್ಳುವ ದಿನವಾಗಬೇಕು ಎಂದರು.
ಭಾರತದ ವೈವಿಧ್ಯತೆಯನ್ನು ಒಗ್ಗೂಡಿಸುವ ಶಕ್ತಿ ಸಂವಿಧಾನ ಮತ್ತು ಪ್ರಜಾಪ್ರಭುತ್ವಕ್ಕಿದೆ. ಹಕ್ಕುಗಳನ್ನು ಪ್ರತಿಪಾದಿಸುವ ಜತೆಗೆ ಕರ್ತವ್ಯಗಳನ್ನು ಮರೆಯಬಾರದು. ಪ್ರಶ್ನಿಸುವ ಹಕ್ಕು ಎಲ್ಲರಿಗೂ ಇದೆ; ಆದರೆ ವಿವೇಕದಿಂದ ಪ್ರಶ್ನಿಸಿ, ಸಾರ್ವಜನಿಕ ಆಸ್ತಿ-ಪಾಸ್ತಿಯನ್ನು ರಕ್ಷಿಸುವ ಜವಾಬ್ದಾರಿಯನ್ನೂ ನಾಗರಿಕರು ನಿರ್ವಹಿಸಬೇಕು ಎಂದರು.
ಕಾರ್ಯಕ್ರಮದಲ್ಲಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಡಾ. ಗಂಗಾಧರ ಸಂಬಣ್ಣಿ, ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ವಸಂತ ಹೊನಮೊಡೆ, ಜಿಪಂ ಸಿಇಒ ರಿಷಿ ಆನಂದ, ಉಪವಿಭಾಗಾಧಿಕಾರಿ ಜುಫಿಶನ್ ಹಕ್, ಜಿಲ್ಲಾ ಆರೋಗ್ಯಾಧಿಕಾರಿ ಡಾ. ಮಲ್ಲನಗೌಡ ಬಿರಾದಾರ, ಪಾಲಿಕೆ ಆಯುಕ್ತ ವಿಜಯ ಮೆಕ್ಕಳಕಿ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.
ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕ ಮಹೇಶ ಪೆÇೀತದಾರ ಸಂವಿಧಾನ ಪೀಠಿಕೆ ವಾಚಿಸಿ ಸ್ವಾಗತಿಸಿದರು. ತಾಲೂಕು ಸಮಾಜ ಕಲ್ಯಾಣಾಧಿಕಾರಿ ಎಂ.ಜೆ. ಇಂಡಿ ವಂದಿಸಿದರು. ರಾಷ್ಟ್ರಗೀತೆಯೊಂದಿಗೆ ಕಾರ್ಯಕ್ರಮ ಮುಕ್ತಾಯಗೊಂಡಿತು.