
ಕಲಬುರಗಿ: ‘ಬಜಾರ್ ಪೇಂಟಿಂಗ್ಸ್’ ಪರಂಪರೆಗೆ ಮಠಮಾನ್ಯಗಳ ಕೊಡುಗೆ ಅಪಾರವಿದ್ದು, ನಾಡಿನ ಮಠಾಧೀಶರು, ಶ್ರೀಮಂತರು, ಅಧಿಕಾರಿಗಳ ಆಶ್ರಯ ಮತ್ತು ಪ್ರೋತ್ಸಾಹದಿಂದ ‘ಬಜಾರ್ ಪೇಂಟಿಂಗ್ಸ್’ (ಜನಪ್ರಿಯ ಕಲೆ) ಬೆಳೆದಿದೆ ಎಂದು ಗುಲಬರ್ಗಾ ವಿಶ್ವವಿದ್ಯಾಲಯದ ದೃಶ್ಯಕಲಾ ವಿಭಾಗದ ಅಧ್ಯಾಪಕ ಡಾ. ಮಲ್ಲಿಕಾರ್ಜುನ ಸಿ. ಬಾಗೋಡಿ ಹೇಳಿದರು.
ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ಧನಸಹಾಯ ಅಡಿಯಲ್ಲಿ ರಾಮಮಂದಿರ ಹಿಂಭಾಗದಲ್ಲಿರುವ ಬಿಸಿಲು ಆರ್ಟ್ ಗ್ಯಾಲರಿಯಲ್ಲಿ ಆಯೋಜಿಸಿದ ಯುವ ಚಿತ್ರಕಲಾವಿದೆ ಕು. ಸವಿತಾ ಹಿರೇಮಠ ಅವರ ಏಕವ್ಯಕ್ತಿ ಚಿತ್ರಕಲಾ ಪ್ರದರ್ಶನದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿ ಕಲಬುರಗಿಯ ಶರಣಬಸವೇಶ್ವರ ಸಂಸ್ಥಾನ, ಸೇಡಂನ ಶಿವಶಂಕರಸ್ವಾಮಿ ಮಠ ಮತ್ತು ಹುಮನಬಾದಿನ ಮಾಣಿಕನಗರ ‘ಬಜಾರ್ ಪೇಂಟಿಂಗ್ಸ್’ನ ಪ್ರಮುಖ ಕೇಂದ್ರಗಳಾಗಿದ್ದವು. ಈ ಹಂತದ ಚಿತ್ರ ಪ್ರಕಾರಗಳು ವ್ಯವಹಾರಿಕ ನೆಲೆಯಲ್ಲಿ ದೇವಾಲಯ ಮತ್ತು ಮಠದೊಳಗಿನ ಆವರಣದಲ್ಲಿ ಅಂಗಡಿಯನ್ನಿಟ್ಟುಕೊಂಡು ಬಂದಂತ ಭಕ್ತಾಧಿಗಳಿಗೆ ಚಿತ್ರಿ ರಚಿಸಿಕೊಡುವ ವ್ಯವಸ್ಥೆಯಿತ್ತು ಎಂದು ಅನೇಕ ದಾಖಲೆಗಳಲ್ಲಿ ಉಲ್ಲೇಖಗಳಿವೆ ಎಂದರು.
ಶರಣಬಸವ ವಿಶ್ವವಿದ್ಯಾಲಯದ ಲಲಿತಕಲಾ ವಿಭಾಗದ ಡೀನ್ ಡಾ. ಶಾಂತಲಾ ಎಸ್. ನಿಷ್ಟಿ ಕಲಾಪ್ರದರ್ಶನಕ್ಕೆ ಚಾಲನೆ ನೀಡಿ ಮಾತನಾಡಿ ಶರಣಬಸವೇಶ್ವರ ಸಂಸ್ಥಾನವು ಕಲ್ಯಾಣ ಕರ್ನಾಟಕ ಭಾಗದಲ್ಲಿ ಸಂಗೀತ, ಸಾಹಿತ್ಯ ಮತ್ತು ಚಿತ್ರಕಲೆಗಳ ಬೆಳವಣಿಗೆಗೆ ಮಹತ್ವದ ಕೊಡುಗೆಯನ್ನು ನೀಡಿದೆ. ಪೂಜ್ಯ ಶರಣಬಸವಪ್ಪ ಅಪ್ಪಾಜಿ ಅವರ ಆಸಕ್ತಿ ಮತ್ತು ಪೋಷಣೆಯಿಂದ ಶರಣಬಸವೇಶ್ವರ ಶಿಕ್ಷಣ ಸಂಸ್ಥೆಯಲ್ಲಿ 70ರ ದಶಕದಲ್ಲಿ ಚಿತ್ರಕಲೆಯಲ್ಲಿ ಸ್ನಾತಕೋತ್ತರ ಪದವಿ ಪ್ರಾರಂಭಿಸಿ, ಈ ಭಾಗದ ಕಲಾ ಬೆಳವಣಿಗೆಗೆ ಕಾರಣಿಭೂತರಾಗಿದ್ದಾರೆ ಎಂದರು.
ಬಿಸಿಲು ಕಲಾ ಗ್ಯಾಲರಿ ಮುಖ್ಯಸ್ಥ ವ್ಹಿ. ಬಿ. ಬಿರಾದಾರ ಅಧ್ಯಕ್ಷತೆ ವಹಿಸಿ ಮಾತನಾಡಿ ಯುವ ಕಲಾವಿದೆ ಕು. ಸವಿತಾ ಹಿರೇಮಠ ಇವರು ರಚಿಸಿ ಪ್ರದರ್ಶಿಸಿದ ವಿವಿಧ ಪ್ರಕಾರದ ಕಲಾಕೃತಿಗಳಲ್ಲಿ ರೇಖೆಗಳು ಪ್ರಮುಖ ಪಾತ್ರವಹಿಸಿವೆ. ಇವರು ಇನ್ನು ಬಣ್ಣಗಳ ಸಮತೋಲನ, ಸಂಯೋಜನೆ ಮುಂತಾದ ಕಲೆಯ ಮೂಲ ತತ್ವಗಳನ್ನು ಅಧ್ಯಯನ ಮಾಡಿ ಅತ್ಯುತ್ತಮ ಕಲಾಕೃತಿಗಳನ್ನು ರಚಿಸಲೆಂದು ಆಶಿಸಿದರು. ಯುವ ಚಿತ್ರಕಲಾವಿದೆ ಕು. ಸವಿತಾ ಹಿರೇಮಠ ಪ್ರಾಸ್ತಾವಿಕವಾಗಿ ಮಾತನಾಡಿದರು. ಕಾರ್ಯಕ್ರಮದಲ್ಲಿ ಶೈಲಜಾ ಬಿರಾದಾರ, ಶಾಂತಮಲ್ಲ ಶಿವಬೋ, ಶ್ರೀಶೈಲ ಪಾಟೀಲ, ಡಾ. ಪರಶುರಾಮ ಪಿ, ಡಾ. ಕೆ. ಎಂ. ಕುಮಾರಸ್ವಾಮಿ, ಸಂಗಮೇಶ ಚಿಲಶೆಟ್ಟಿ, ಪ್ರದೀಪಸಿಂಗ್, ಅಮೃತಾ ಬಿರಾದಾರ, ಕವಿತಾ ಕಟ್ಟೆ, ಗೌತಮ ಈರಣ್ಣ ಮುಂತಾದವರಿದ್ದರು. ಕಲಾಶಿಕ್ಷಕ ಮಲ್ಲಿಕಾರ್ಜುನ ಕೋರಳ್ಳಿ ಅತಿಥಿ ಗಣ್ಯರನ್ನು ಸ್ವಾಗತಿಸಿ ವಂದಿಸಿದರು.































