Home ಜಿಲ್ಲೆ ಕಲಬುರಗಿ ಟೀಕಿಸುವುದಕ್ಕಿಂತ ಜನರ ಸಮಸ್ಯೆಗಳಿಗೆ ಪರಿಹಾರ ಕಲ್ಪಿಸಿ ; ಮಲ್ಲಿಕಾರ್ಜುನ ಸಿಂಗೆ

ಟೀಕಿಸುವುದಕ್ಕಿಂತ ಜನರ ಸಮಸ್ಯೆಗಳಿಗೆ ಪರಿಹಾರ ಕಲ್ಪಿಸಿ ; ಮಲ್ಲಿಕಾರ್ಜುನ ಸಿಂಗೆ

ಅಫಜಲಪುರ:ಪಟ್ಟಣದ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಯಲ್ಲಿ ಬಡ ರೋಗಿಗಳಿಗೆ ದೊರೆಯಬೇಕಾದ ಪಥ್ಯಹಾರ ಸೌಲಭ್ಯಕ್ಕೆ ಸಂಬಂಧಿಸಿದಂತೆ ಸುಮಾರು 77 ಲಕ್ಷ ಅವ್ಯವಹಾರ ನಡೆದಿದೆ ಎಂದು ದಾಖಲೆಗಳು ಸಮೇತ ಜೆಡಿಎಸ್ ಹಿಂದುಳಿದ ವರ್ಗಗಳ ರಾಜ್ಯಾಧ್ಯಕ್ಷ ಶಿವಕುಮಾರ ನಾಟೀಕಾರ ಹೇಳಿರುವುದರಿಂದ ಶಾಸಕರ ತಪ್ಪು ಮರೆಮಾಚಲು ಶಾಸಕರ ಬೆಂಬಲಿಗರು ಇಲ್ಲಸಲ್ಲದ ಹೇಳಿಕೆಗಳು ನೀಡುತ್ತಿರುವುದು ಖಂಡನೀಯವಾಗಿದೆ ಎಂದು ಜೆಡಿಎಸ್ ತಾಲೂಕಾಧ್ಯಕ್ಷ ಮಲ್ಲಿಕಾರ್ಜುನ ಸಿಂಗೆ ಹೇಳಿದರು.

ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಅವರು,ಆಸ್ಪತ್ರೆಗೆ ಬರುವವರಲ್ಲಿ ಬಹುತೇಕರು ಬಡವರು,ರೈತರು, ದಲಿತರು,ಶೋಷಿತರು ಹಾಗೂ ಹಿಂದುಳಿದ ವರ್ಗಗಳಿಗೆ ಸೇರಿದವರಾಗಿದ್ದಾರೆ.ಆದರೆ ಅವರಿಗೆ ಅಗತ್ಯವಾದ ಶುದ್ಧ ಕುಡಿಯುವ ನೀರು,ಸ್ವಚ್ಛ ಶೌಚಾಲಯ,ಸಮರ್ಪಕ ಔಷಧಿ,ಪಥ್ಯಾಹಾರ ಹಾಗೂ ಸ್ವಚ್ಛತಾ ಸೌಲಭ್ಯಗಳು ಸಮರ್ಪಕವಾಗಿ ದೊರೆಯುತ್ತಿಲ್ಲ ಎಂದು ಶಿವಕುಮಾರ ನಾಟೀಕಾರ ಆರೋಪಿಸಿದ್ದರು.ಜನರ ಸಮಸ್ಯೆಗಳನ್ನು ಪ್ರಶ್ನಿಸಿದ ನಾಟೀಕಾರ್ ಅವರ ವಿರುದ್ಧ ವೈಯಕ್ತಿಕ ಟೀಕೆ ಮಾಡುವ ಬದಲು,ಸಂಬಂಧಪಟ್ಟವರು ಆಸ್ಪತ್ರೆಗೆ ಭೇಟಿ ನೀಡಿ ಅಲ್ಲಿನ ವಾಸ್ತವ ಪರಿಸ್ಥಿತಿಯನ್ನು ಪರಿಶೀಲಿಸಬೇಕು. ಇದು ಯಾವುದೇ ವ್ಯಕ್ತಿಯ ವಿರುದ್ಧದ ವೈಯಕ್ತಿಕ ವಿಚಾರವಲ್ಲ;ಬಡ ಜನರ ಆರೋಗ್ಯ,ಸಾರ್ವಜನಿಕ ಹಣದ ಸದ್ಬಳಕೆ ಮತ್ತು ಸಾರ್ವಜನಿಕ ಹಿತಾಸಕ್ತಿಗೆ ಸಂಬಂಧಿಸಿದ ಗಂಭೀರ ವಿಷಯವಾಗಿದೆ.ಅದೇ ರೀತಿ, ಅಫಜಲಪುರ ಶಾಸಕರಾದ ಎಂ.ವೈ.ಪಾಟೀಲ್ ಅವರ ಬೆಂಬಲಿಗರು ಜನರ ಸಮಸ್ಯೆಗಳನ್ನು ಎತ್ತಿಹಿಡಿಯುವವರನ್ನು ಟೀಕಿಸುತ್ತಿರುವುದನ್ನು ನಾವು ಖಂಡಿಸುತ್ತೇವೆ.

ನಿಜವಾಗಿಯೂ ಜನರ ಹಾಗೂ ಸರ್ಕಾರಿ ವ್ಯವಸ್ಥೆಯ ಬಗ್ಗೆ ಕಾಳಜಿ ಇದ್ದರೆ,ಟೀಕೆಗಳಲ್ಲಿ ತೊಡಗಿಕೊಳ್ಳುವುದನ್ನು ಬಿಟ್ಟು ಅಫಜಲಪುರ ಸರ್ಕಾರಿ ಆಸ್ಪತ್ರೆಗೆ ಭೇಟಿ ನೀಡಿ,ಅಲ್ಲಿನ ಅವ್ಯವಸ್ಥೆಗಳನ್ನು ಸರಿಪಡಿಸಲು ಪ್ರಾಮಾಣಿಕವಾಗಿ ಮುಂದಾಗಬೇಕು.ಜನರ ಆರೋಗ್ಯ ಮತ್ತು ಮೂಲಭೂತ ಸೌಲಭ್ಯಗಳ ವಿಚಾರದಲ್ಲಿ ರಾಜಕೀಯ ಆರೋಪ-ಪ್ರತ್ಯಾರೋಪಗಳಿಗಿಂತ ಕಾರ್ಯಪ್ರವೃತ್ತಿಯೇ ಮುಖ್ಯವಾಗಿದೆ.

ಈ ಕುರಿತು ಹಲವು ಬಾರಿ ದೂರುಗಳು ಹಾಗೂ ಮನವಿಗಳನ್ನು ಸಲ್ಲಿಸಿದರೂ ಸಮಸ್ಯೆಗಳಿಗೆ ಸೂಕ್ತ ಸ್ಪಂದನೆ ಶಾಸಕ ಎಂ.ವೈ.ಪಾಟೀಲರು ನೀಡಿಲ್ಲ.ಆದ್ದರಿಂದ ಶಾಸಕರು ಹಾಗೂ ಸಂಬಂಧಪಟ್ಟ ಅಧಿಕಾರಿಗಳು ಮೇಲೆ ಗಂಭೀರವಾಗಿ ಆರೋಪಗಳಿವೆ.ಜನರ ಸಮಸ್ಯೆಗಳನ್ನು ಪ್ರಶ್ನಿಸುವವರನ್ನು ಟೀಕಿಸುವುದಕ್ಕಿಂತ,ಜನರ ಸಮಸ್ಯೆಗಳಿಗೆ ಪರಿಹಾರ ಕಲ್ಪಿಸುವುದು ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳ ಕರ್ತವ್ಯವಾಗಿದೆ.ಅಫಜಲಪುರ ಸರ್ಕಾರಿ ಆಸ್ಪತ್ರೆಯನ್ನು ಬಡ ಜನರಿಗೆ ನಿಜವಾದ ಆರೋಗ್ಯದ ಆಶ್ರಯವಾಗಿಸುವ ನಿಟ್ಟಿನಲ್ಲಿ ತಕ್ಷಣ ಅಗತ್ಯ ಕ್ರಮ ಕೈಗೊಳ್ಳಬೇಕು.