
ಕಲಬುರಗಿ: ಅನೇಕ ಯುವಕರು ಸರ್ಕಾರಿ ನೌಕರಿಗಾಗಿಯೇ ಇಡೀ ತಮ್ಮ ವಯಸ್ಸು ಸವೆಸಿ, ನೌಕರಿ ದೊರೆಯದೆ ನಿರುದ್ಯೋಗಿಗಳಾಗುತ್ತಿದ್ದಾರೆ. ಸರ್ಕಾರ ಎಲ್ಲರಿಗೂ ನೌಕರಿ ನೀಡಲು ಸಾಧ್ಯವಿಲ್ಲ ಎಂಬುದನ್ನು ಮನಗಂಡು, ನೀವು ಸೂಕ್ತ ತರಬೇತಿ, ಅನುಭವ ಪಡೆದು ಸ್ವಂತ ಉದ್ಯೋಗವನ್ನು ಪ್ರಾರಂಭಿಸಿ, ಉದ್ಯಮಪತಿಯಾಗಿ ಉದ್ಯೋಗವನ್ನು ನೀಡುವ ಕಾರ್ಯ ಮಾಡುವ ಮೂಲಕ ನಿರುದ್ಯೋಗ ಸಮಸ್ಯೆಯನ್ನು ನಿವಾರಿಸುವುದ ಜೊತೆಗೆ ರಾಷ್ಟ್ರದ ಅಭಿವೃದ್ಧಿಗೆ ಕೈಜೋಡಿಸಬೇಕು ಎಂದು ಜಿಲ್ಲಾ ಸಣ್ಣ ಕೈಗಾರಿಕೆಗಳ ಮಾಲಿಕರ ಸಂಘದ ಅಧ್ಯಕ್ಷ ಭೀಮಾಶಂಕರ ಬಿ.ಪಾಟೀಲ್ ನಿರುದ್ಯೋಗ ಯುವಕರು-ಪದವಿದರರಿಗೆ ಸಲಹೆ ನೀಡಿದರು.
ನಗರದ ಬೇಲೂರ ಕೈಗಾರಿಕಾ ಪ್ರದೇಶದಲ್ಲಿರುವ ‘ಶ್ರೀ ಮಹಾ ಗಣೇಶ ಕೈಗಾರಿಕೆ’ಯ ಸಮೂಹದ ‘ಅಕ್ಷಯ ತೃತೀಯ ಗೋಧಿ ಹಿಟ್ಟಿನ ತಯಾರಿಕಾ ಕಾರ್ಖಾನೆ’ಯಲ್ಲಿ ‘ಬಸವೇಶ್ವರ ಸಮಾಜ ಸೇವಾ ಬಳಗ’ದ ವತಿಯಿಂದ ಭಾನುವಾರ ಜರುಗಿದ ’26ನೇ ರಾಷ್ಟ್ರೀಯ ಸಣ್ಣ ಕೈಗಾರಿಕೆಗಳ ದಿನಾಚರಣೆ’ಯನ್ನು ಉದ್ಘಾಟಿಸಿ, ಅವರು ಮಾತನಾಡುತ್ತಿದ್ದರು.
ನಮ್ಮ ಭಾಗದಲ್ಲಿ ಇನ್ನೂ ಹೆಚ್ಚಿನ ಪ್ರಮಾಣದಲ್ಲಿ ಕೈಗಾರಿಕೆಗಳ ಸ್ಥಾಪನೆಯಾಗಬೇಕಾಗಿದೆ. ಸರ್ಕಾರದ ಯೋಜನೆಗಳು, ಬ್ಯಾಂಕ್ ಸಾಲದ ಮಾಹಿತಿ ಪಡೆಯಬೇಕು. ಇದಕ್ಕೆ ನಮ್ಮ ಕಾಶಿಯಾ ಸಹಕಾರ ನೀಡುತ್ತದೆ. ಸರ್ಕಾರದ ಸೌಲಭ್ಯಗಳಿಂದ ಪಡೆದ ಆರ್ಥಿಕ ಸಹಾಯ ಅನಾವಶ್ಯಕವಾಗಿ ವೆಚ್ಚ ಮಾಡದೆ, ನಿರಂತರವಾಗಿ ಶ್ರಮ ಹಾಕಿ, ಸಮಯ ಮತ್ತು ಕಾಯಕ ಪ್ರಜ್ಞೆಯಿಂದ, ನಿಮ್ಮ ಸಾಮಥ್ರ್ಯ ಅರಿತು, ಯೋಜನಾಬದ್ದತೆಯಿಂದ ಕಾರ್ಯನಿರ್ವಹಿಸಿದರೆ ಮಾತ್ರ ಕೈಗಾರಿಕೆಗಳು ಸಫಲವಾಗಲು ಸಾಧ್ಯವಾಗುತ್ತವೆ. ನಮ್ಮ ಸಂಘವು ಈ ಭಾಗದ ನಿರುದ್ಯೋಗಿ ಯುವಕರಿಗೆ ಅವರ ಅರ್ಹತೆಗೆ ಪೂರಕವಾಗಿ ಉದ್ಯೋಗಾವಕಾಶಗಳನ್ನು ದೊರಕಿಸಿಕೊಡುವ ಕಾರ್ಯಮಾಡಲಾಗುತ್ತಿದೆ. ಯುವಕರು ಇದರ ಸದುಪಯೋಗವನ್ನು ಮಡೆದುಕೊಳ್ಳಬೇಕು ಎಂದರು.
ಬಸವೇಶ್ವರ ಸಮಾಜ ಸೇವಾ ಬಳಗದ ಅಧ್ಯಕ್ಷ ಹಾಗೂ ಅರ್ಥಶಾಸ್ತ್ರ ಅರ್ಥಶಾಸ್ತ್ರ ಉಪನ್ಯಾಸಕ ಎಚ್.ಬಿ.ಪಾಟೀಲ್ ಮಾತನಾಡಿ, ರಾಷ್ಟ್ರ ಮತ್ತು ರಾಜ್ಯದ ಆರ್ಥಿಕ ಅಭಿವೃದ್ಧಿಯಲ್ಲಿ ಸಣ್ಣ ಪ್ರಮಾಣದ ಕೈಗಾರಿಕೆಗಳು ಪ್ರಮುಖ ಹಾಗೂ ನಿರ್ಣಾಯಕ ಪಾತ್ರವನ್ನು ವಹಿಸುತ್ತವೆ. ಇವುಗಳು ಕಡಿಮೆ ಬಂಡವಾಳದೊಂದಿಗೆ ಹೆಚ್ಚಿನ ಜನರಿಗೆ, ವಿಶೇಷವಾಗಿ ಗ್ರಾಮೀಣ ಪ್ರದೇಶಗಳಲ್ಲಿ ಉದ್ಯೋಗ ಅವಕಾಶಗಳನ್ನು ಕಲ್ಪಿಸಿಕೊಡುವ ಮೂಲಕ ಗ್ರಾಮೀಣ ಅಭಿವೃದ್ಧಿಗೆ ಪೂರಕವಾಗಿವೆ. ಸ್ಥಳೀಯ ಸಂಪನ್ಮೂಲಗಳನ್ನು ಬಳಸಿ, ಪ್ರಾದೇಶಿಕ ಅಸಮತೋಲನ ನಿವಾರಣೆಗೆ ಅಗತ್ಯವಾಗಿವೆ. ದೊಡ್ಡ ಕೈಗಾರಿಕೆಗಳಿಗೆ ಬೇಕಾದ ಬಿಡಿಭಾಗಗಳು ಮತ್ತು ಕಚ್ಚಾ ವಸ್ತುಗಳನ್ನು ಪೂರೈಸುವ ಸಹಾಯಕ ಘಟಕಗಳಾಗಿ ಕಾರ್ಯನಿರ್ವಹಿಸುತ್ತವೆ. ಸ್ಥಳೀಯವಾಗಿ ತಯಾರಾಗುವ ಹಸ್ತಶಿಲ್ಪ, ಜವಳಿ ಮತ್ತು ಇತರೆ ಉತ್ಪನ್ನಗಳನ್ನು ರಫ್ತು ಮಾಡುವ ಮೂಲಕ ವಿದೇಶಿ ವಿನಿಮಯ ಗಳಿಕೆಗೆ ಕೊಡುಗೆ ನೀಡುತ್ತವೆ. ಸಣ್ಣ ಪ್ರಮಾಣದ ಬಂಡವಾಳ ಹೊಂದಿರುವ ಸ್ಥಳೀಯ ಯುವಕರಿಗೆ ಸ್ವಾವಲಂಬನೆ ಮತ್ತು ಹೊಸ ಉದ್ಯಮಗಳನ್ನು ಪ್ರಾರಂಭಿಸಲು ಸ್ಪೂರ್ತಿ ನೀಡುತ್ತವೆ ಎಂದು ಸಣ್ಣ ಕೈಗಾರಿಕೆಗಳ ಪಾತ್ರದ ಬಗ್ಗೆ ವಿವರಿಸಿದರು.
ಕಾರ್ಯಕ್ರಮದಲ್ಲಿ ಸಮಾಜ ಸೇವಕ ಶಿವಯೋಗೆಪ್ಪಾ ಎಸ್.ಬಿರಾದಾರ, ಉದ್ಯಮಿಗಳಾದ ಮೊಹಮ್ಮದ್ ಅಕ್ರಮ್ ಸಿದ್ದಿಕಿ, ಅಬ್ದುಲ್ ಅಕ್ರಮ್ ಸಿದ್ದಿಕಿ, ಪ್ರಮುಖರಾದ ಸಿದ್ದಲಿಂಗಯ್ಯ ಹಿರೇಮಠ, ರುದ್ರಗೌಡ ಪಾಟೀಲ್, ಬಾಬು ಸರಡಗಿ, ವೀರಶೆಟ್ಟಿ ಹುಡಗಿ, ಅಂಕಿತ್, ಮಹಾಬಲಿ, ಅಕ್ರಮ್ ಸೇರಿದಂತೆ ಇನ್ನಿತರರಿದ್ದರು.





























