Home ಮುಖಪುಟ ಸುದ್ದಿ ಅನರ್ಹ ಪಡಿತರ ಚೀಟಿಗಳ ಕಡಿವಾಣಕ್ಕೆ ಕ್ರಮ

ಅನರ್ಹ ಪಡಿತರ ಚೀಟಿಗಳ ಕಡಿವಾಣಕ್ಕೆ ಕ್ರಮ

ಬೆಂಗಳೂರು, ಆ. ೧೩- ರಾಜ್ಯ ಸರ್ಕಾರದ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ನೂತನ ಸಚಿವರಾಗಿ ಅಧಿಕಾರ ವಹಿಸಿಕೊಂಡಿರುವ ರಿಜ್ವಾನ್ ಅರ್ಷದ್ ಅವರು, ಆಹಾರ ಧಾನ್ಯ ವಿತರಣಾ ವ್ಯವಸ್ಥೆಯನ್ನು ಬಡವರ ಮನೆ ಬಾಗಿಲಿಗೆ ತಲುಪಿಸುವ ಜೊತೆಗೆ ಅನರ್ಹರ ಪಡಿತರ ಚೀಟಿಗಳಿಗೆ ಕಡಿವಾಣ ಹಾಕಲು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವುದಾಗಿ ಘೋಷಿಸಿದ್ದಾರೆ.

ಅಧಿಕಾರ ವಹಿಸಿಕೊಂಡ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಸಚಿವರು, “ನಮಗೆ ಆಹಾರ ಇಲಾಖೆಯ ಹೊಸ ಜವಾಬ್ದಾರಿಯನ್ನು ಸರ್ಕಾರ ವಹಿಸಿಕೊಟ್ಟಿದೆ. ಈ ಜವಾಬ್ದಾರಿಯನ್ನು ಅತ್ಯಂತ ಸಂತೋಷದಿಂದ ನಿಭಾಯಿಸುತ್ತೇನೆ. ಶೀಘ್ರದಲ್ಲೇ ಇಲಾಖೆಯ ಹಿರಿಯ ಅಧಿಕಾರಿಗಳೊಂದಿಗೆ ಸಭೆ ನಡೆಸಿ, ಇಲಾಖೆಯ ಕಾರ್ಯವೈಖರಿಯನ್ನು ಪೂರ್ಣ ಪ್ರಮಾಣದಲ್ಲಿ ಅರ್ಥ ಮಾಡಿಕೊಳ್ಳಲಿದ್ದೇನೆ” ಎಂದರು.

ಈ ಇಲಾಖೆಯು ನೇರವಾಗಿ ಬಡ ವರ್ಗದ ಮನೆ ಮನೆಗೆ ತಲುಪುವ ಅತ್ಯಂತ ಸಂವೇದನಾಶೀಲ ಇಲಾಖೆಯಾಗಿದೆ. ಬಡವರಿಗೆ ಹೆಚ್ಚಿನ ಶಕ್ತಿ ತುಂಬುವುದು ನಮ್ಮ ಸರ್ಕಾರದ ಮುಖ್ಯ ಉದ್ದೇಶ. ಇಲಾಖೆಯಲ್ಲಿ ಹಲವು ಸವಾಲುಗಳಿದ್ದು, ಪಡಿತರ ಚೀಟಿ ವಿತರಣೆಯಲ್ಲಿ ನೈಜ ಫಲಾನುಭವಿಗಳಿಗೆ ಯಾವುದೇ ರೀತಿಯ ತೊಂದರೆಯಾಗಬಾರದು. ಅದೇ ಸಮಯದಲ್ಲಿ ಅನಧಿಕೃತವಾಗಿ ಅಥವಾ ಅಕ್ರಮವಾಗಿ ಪಡಿತರ ಪಡೆಯುತ್ತಿರುವವರನ್ನು ಗುರುತಿಸಿ, ಅವರಿಗೆ ಪಡಿತರ ತಲುಪುವುದನ್ನು ತಕ್ಷಣದಿಂದಲೇ ನಿಲ್ಲಿಸಲಾಗುವುದು ಎಂದು ಅವರು ಸ್ಪಷ್ಟಪಡಿಸಿದರು.

ರಾಜ್ಯದಲ್ಲಿ ತಂಬಾಕು ಹಾಗೂ ನಿಕೋಟಿನ್‌ಯುಕ್ತ ಉತ್ಪನ್ನಗಳ ನಿಷೇಧದ ಕುರಿತು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, “ರಾಜ್ಯದ ಪ್ರತಿಯೊಬ್ಬ ಪ್ರಜೆಯ ಆರೋಗ್ಯ ಕಾಪಾಡುವುದು ಸರ್ಕಾರದ ಪ್ರಾಥಮಿಕ ಕರ್ತವ್ಯ. ಜನರ ಆರೋಗ್ಯವೇ ನಮಗೆ ಅತ್ಯಂತ ಮುಖ್ಯ. ಅವರ ಆರೋಗ್ಯ ರಕ್ಷಣೆಗೆ ಸರ್ಕಾರ ಯಾವೆಲ್ಲಾ ಕಠಿಣ ಕ್ರಮಗಳನ್ನು ತೆಗೆದುಕೊಳ್ಳಬೇಕೋ, ಅವುಗಳನ್ನು ಯಾವುದೇ ಮುಲಾಜಿಲ್ಲದೆ ತೆಗೆದುಕೊಳ್ಳುತ್ತದೆ” ಎಂದರು.

ಜನರ ದೈಹಿಕ ಹಾಗೂ ಮಾನಸಿಕ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುವ ಯಾವುದೇ ಚಟುವಟಿಕೆಗಳಿಗೆ ರಾಜ್ಯದಲ್ಲಿ ಅವಕಾಶ ನೀಡುವುದಿಲ್ಲ. ಸಾರ್ವಜನಿಕರ ಹಿತದೃಷ್ಟಿಯಿಂದ ಈಗಾಗಲೇ ಸರ್ಕಾರ ಈ ನಿಟ್ಟಿನಲ್ಲಿ ದಿಟ್ಟ ಮತ್ತು ಕಠಿಣ ಕ್ರಮಗಳನ್ನು ಕೈಗೊಂಡಿದ್ದು, ಮುಂದೆಯೂ ಇದನ್ನು ಮುಂದುವರಿಸಲಾಗುವುದು ಎಂದು ಅವರು ಹೇಳಿದರು.