
ಬೆಂಗಳೂರು,ಆ.೧೩-ಪರಪ್ಪನ ಅಗ್ರಹಾರ ಕಾರಾಗೃಹದ ಮೇಲೆ ಸಿಸಿಬಿ ಪೊಲೀಸರು ದಾಳಿಯ ಪ್ರಜ್ವಲ್ ರೇವಣ್ಣ ಬ್ಯಾರಕ್‌ನಲ್ಲಿ ಮೊಬೈಲ್ ಪತ್ತೆಯಾದ ತನಿಖೆಗೆ ಕಾರಾಗೃಹ ಮತ್ತು ಸುಧಾರಣೆ ಇಲಾಖೆ ಡಿಐಜಿಪಿ ಜಿನೇಂದ್ರ ಖನಗಾವಿ ನೇತೃತ್ವದ ತಂಡ ರಚನೆ ಮಾಡಲಾಗಿದೆ.
ಪರಪ್ಪನ ಅಗ್ರಹಾರ ಜೈಲಿನ ಬ್ಯಾರಕ್‌ನಲ್ಲಿ ಮೊಬೈಲ್ ಹೇಗೆ ಬಂತು ಎಂಬ ಬಗ್ಗೆ ಎಲ್ಲಾ ಆಯಾಮದಲ್ಲೂ ತನಿಖೆ ನಡೆಸಿ ವರದಿ ಸಲ್ಲಿಸಲು ಖನಗಾವಿ ಅವರಿಗೆ ಕಾರಾಗೃಹ ಡಿಜಿಪಿ ಅಲೋಕ್ ಕುಮಾರ್ ಸೂಚನೆ ನೀಡಿದ್ದಾರೆ. ಈ ಸಂಬಂಧ ಅಲೋಕ್ ಕುಮಾರ್ ಭೇಟಿಯಾಗಿ ಜಿನೇಂದ್ರ ಅವರು ಕೂಡ ಚರ್ಚೆ ನಡೆಸಿದ್ದಾರೆ.
ಪರಪ್ಪನ ಅಗ್ರಹಾರ ಜೈಲಿನ ಸುತ್ತಮುತ್ತ ಜಾಮರ್ ಅಳವಡಿಸಲಾಗಿದ್ದು, ಸ್ಥಳೀಯರಿಗೆ ಟವರ್ ಸಿಗದೆ ನಿತ್ಯ ಪರದಾಡುತ್ತಾರೆ. ಹೀಗಿರುವಾಗ ಜೈಲಿನ ಒಳಗೆ ಏರ್‌ಟೆಲ್ ಕಂಪನಿಯ ಸಿಮ್ ಬಳಕೆಯಾಗುತ್ತಿದೆ. ಅದರಲ್ಲೂ ಆಂಧ್ರಪ್ರದೇಶದ ಏರ್‌ಟೆಲ್ ಸಿಮ್‌ಗಳು ಪತ್ತೆಯಾಗಿವೆ,
ಈ ಬಗ್ಗೆ ಅನೇಕ ಬಾರಿ ಎಚ್ಚರಿಕೆ ನೀಡಲಾಗಿದ್ದರೂ ಸಿಮ್‌ಗಳು ಪತ್ತೆ ಆಗುತ್ತಿವೆ. ಹೀಗಾಗಿ ಈ ಕುರಿತು ತನಿಖೆ ನಡೆಸಿ ವರದಿ ನೀಡಲು ಸೂಚಿಸಲಾಗಿದೆ ಎಂದು ರಾಜ್ಯ ಕಾರಾಗೃಹ ಡಿಜಿಪಿ ಅಲೋಕ್ ಕುಮಾರ್ ತಿಳಿಸಿದ್ದಾರೆ. ಇಷ್ಟೆಲ್ಲಾ ಭದ್ರತೆ ಇದ್ದರೂ ಜೈಲಿನೊಳಗೆ ಹೇಗೆ ಮೊಬೈಲ್ ಹೋಗ್ತಿದೆ. ಇದರಲ್ಲಿ ಅಧಿಕಾರಿಗಳು ಏನಾದರೂ ಭಾಗಿಯಾಗಿದ್ದಾರೆಂಬ ಬಗ್ಗೆ ತನಿಖೆ ನಡೆಸ್ತೇವೆ. ಅಧಿಕಾರಿಗಳು ಭಾಗಿಯಾಗಿದ್ದರೆ, ಅಂತವರ ವಿರುದ್ಧ ಕ್ರಮಕ್ಕೆ ಆದೇಶ ಮಾಡೋದಾಗಿ ತಿಳಿಸಿದ್ದಾರೆ.
ಪ್ರಜ್ವಲ್ ರೇವಣ್ಣಗೆ ಫೋನ್ ತಂದು ಕೊಟ್ಟವರು ಯಾರು? ಎಷ್ಟು ದಿನಗಳಿಂದ ಮೊಬೈಲ್ ಬಳಕೆ ಮಾಡುತ್ತಿದ್ದಾನೆ? ಇದರಲ್ಲಿ ಯಾರೆಲ್ಲಾ ಕೈವಾಡ ಇದೆ ಎಂಬುದರ ಪತ್ತೆಗೂ ಸೂಚಿಸಲಾಗಿದೆ.
ಕಾರಾಗೃಹದಲ್ಲಿ ಆಗಬಾರದ ಚಟುವಟಿಕೆಗಳು ನಡೆದಾಗ ಕ್ರಮ ಆಗಬೇಕು. ವೈರಲ್ ಆಗಿರುವ ಪ್ರಜ್ವಲ್ ವಿಡಿಯೋ ಸ್ವಲ್ಪ ಹಳೆಯದಾಗಿದ್ದು, ಯಾರು ಅದನ್ನು ಮಾಡಿದ್ದಾರೆ ಎಂಬ ಬಗ್ಗೆ ಹೇಳೋಕಾಗುತ್ತಾ ಎಂದು ಗೃಹ ಸಚಿವ ಪ್ರಿಯಾಂಕ್ ಖರ್ಗೆ ಪ್ರಶ್ನಿಸಿದ್ದಾರೆ. ಯಾರು ಕೊಟ್ಟರು, ಏನ್ ಕೊಟ್ಟರು ಎಂಬ ಬಗ್ಗೆ ಹೇಳಲು ಆಗಲ್ಲ. ಆದರೆ ಯಾರೇ ಸಹಕಾರ ಕೊಟ್ಟರು ಅವರ ಮೇಲೆ ಕ್ರಮ ಆಗುತ್ತದೆ. ಪೇದೆಯಿಂದ ಹಿಡಿದು ಐಪಿಎಸ್ ವರೆಗೆ ಯಾರನ್ನೂ ನನ್ನ ಕಾಲದಲ್ಲಿ ರಕ್ಷಣೆ ಮಾಡಲ್ಲ ಎಂದವರು ತಿಳಿಸಿದ್ದಾರೆ.
ಜನರಲ್ ಸೆಲ್‌ಗೆ ಎತ್ತಂಗಡಿ:
ಮೊಬೈಲ್ ಪತ್ತೆಯಾದ ಬೆನ್ನಲ್ಲೇ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗಿದ್ದು, ವಿಐಪಿ ಸೆಲ್‌ನಿಂದ ಮಾಜಿ ಸಂಸದ ಪ್ರಜ್ವಲ್ ರೇವಣ್ಣನನ್ನು ಜನರಲ್ ಕೈದಿಗಳಿರುವ ಸೆಲ್‌ಗೆ ಎತ್ತಂಗಡಿ ಮಾಡಲಾಗಿದೆ. ೨೦ ಕೈದಿಗಳಿರುವ ಬ್ಯಾರಕ್‌ಗೆ ಪ್ರಜ್ವಲ್ ರೇವಣ್ಣನನ್ನ ಶಿಫ್ಟ್ ಮಾಡಲಾಗಿದ್ದು, ಸಿಸಿಟಿವಿ ಕಣ್ಣಾವಲಿನಲ್ಲಿ ಇರಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.
೯೦ ಅಶ್ಲೀಲ ವಿಡಿಯೋ ಪತ್ತೆ
ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಬಳಿ ಸಿಕ್ಕ ಮೊಬೈಲ್‌ನಲ್ಲಿ ಸುಮಾರು ೯೦ ಅಶ್ಲೀಲ ವಿಡಿಯೋಗಳು ಪತ್ತೆಯಾಗಿವೆ. ಹಾಗೇ ಪ್ರಜ್ವಲ್ ಪರಿಚಿತರೊಂದಿಗೆ ಮಾತನಾಡಿದ ಆಡೀಯೋ ರೆಕಾರ್ಡ್ ಸಹ ಸಿಕ್ಕಿದೆ. ಜೈಲಿನಲ್ಲಿ ಸಿಕ್ಕ ಮೊಬೈಲ್ ಮೂಲಕ ಪ್ರಜ್ವಲ್ ರೇವಣ್ಣ ಅಪರಿಚಿತ ವ್ಯಕ್ತಿಯೊಂದಿಗಿನ ಸಂಭಾಷಣೆ ಸಿಕ್ಕಿದೆ.
ಇನ್ನು ಅತ್ಯಾಚಾರ ಪ್ರಕರಣದ ಅಪರಾಧಿ ಪ್ರಜ್ವಲ್ ರೇವಣ್ಣ ಜೈಲಿನ ಕೊಠಡಿಯೊಳಗೆ ವೈಯಕ್ತಿಕ ಉಡುಪು ಧರಿಸಿ, ಜೈಲು ಸಮವಸ್ತ್ರವಿಲ್ಲದೇ ಆರಾಮವಾಗಿ ಮೊಬೈಲ್ ಫೋನ್‌ನಲ್ಲಿ ಮಾತನಾಡುತ್ತಿರುವುದು ಕಂಡುಬಂದಿದೆ.
ಈ ವಿಡಿಯೋ ಯಾವಾಗ ಚಿತ್ರೀಕರಿಸಲಾಗಿದೆ ಎಂಬುದು ನಿಖರವಾಗಿ ತಿಳಿದುಬಂದಿಲ್ಲ. ನಿನ್ನೆ ಸಿಸಿಬಿ ಅಧಿಕಾರಿಗಳು ಜೈಲು ಕೊಠಡಿಯ ಮೇಲೆ ದಾಳಿ ನಡೆಸಿದಾಗ, ಒಂದು ಮೊಬೈಲ್ ಫೋನ್ ಪತ್ತೆಯಾಗಿತ್ತು.































