
ಬೆಂಗಳೂರು.ಜೂ೬: ತಮಗೆ ನೀಡಿರುವ ಖಾತೆ ಕುರಿತು ತೀವ್ರ ಬೇಸರಗೊಂಡಿರುವ ಹಿರಿಯ ಸಚಿವ ರಾಮಲಿಂಗಾರೆಡ್ಡಿ ಅವರು, ಕಾಂಗ್ರೆಸ್ ರಾಜ್ಯ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಾ ಅವರನ್ನು ಭೇಟಿಯಾಗಿ ತಮ್ಮ ನಿಲುವು ಸ್ಪಷ್ಟಪಡಿಸಿದ್ದಾರೆ. ಈ ಮಧ್ಯೆ ಮುಖ್ಯಮಂತ್ರಿ ಹಾಗೂ ಉಪಮುಖ್ಯಮಂತ್ರಿಗಳು ರೆಡ್ಡಿ ಅವರ ರಾಜೀನಾಮೆಯನ್ನು ಅಂಗೀಕರಿಸುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ ಎನ್ನಲಾಗಿದೆ.
ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವ ರಾಮಲಿಂಗಾರೆಡ್ಡಿ, ತಮ್ಮ ಮನಸ್ಸಿನಲ್ಲಿರುವ ಎಲ್ಲ ವಿಚಾರಗಳನ್ನು ಹೈಕಮಾಂಡ್ ಮತ್ತು ರಾಜ್ಯ ನಾಯಕರ ಮುಂದೆ ತೆರೆದಿಟ್ಟಿರುವುದಾಗಿ ತಿಳಿಸಿದರು.
“ನಾನು ಎಂದಿಗೂ ಖಾತೆಗಾಗಿ ಲಾಬಿ ಮಾಡಿದವನಲ್ಲ”೧೯೯೩ ರಿಂದಲೂ ನಾನು ಸಚಿವ ಸ್ಥಾನಕ್ಕಾಗಿ ಅಥವಾ ಯಾವುದೇ ನಿರ್ದಿಷ್ಟ ಖಾತೆಗಾಗಿ ಲಾಬಿ ಮಾಡಿದವನಲ್ಲ. ಅವರಾಗಿಯೇ ಆಫರ್ ನೀಡಿ, ಈಗ ಕೊಟ್ಟ ಮಾತಿನಂತೆ ನಡೆದುಕೊಂಡಿಲ್ಲ. ನನಗೆ ನೀಡಿರುವ ನೀರಾವರಿ ಇಲಾಖೆಯ ಬಗ್ಗೆ ಹೆಚ್ಚು ಮಾಹಿತಿ ಇಲ್ಲ. ಹೀಗಾಗಿ ಹೆಚ್ಚುವರಿ ಖಾತೆ ಅಥವಾ ನೀರಾವರಿ ಇಲಾಖೆ ಕುರಿತು ನಾನೇನೂ ಮಾತನಾಡಲ್ಲ. ಖಾತೆ ಹಂಚಿಕೆ ವಿಚಾರದಲ್ಲಿ ಯಾವ ಹಂತದಲ್ಲಿ ಏನಾಯ್ತು ಎಂಬುದು ನನಗೆ ಗೊತ್ತಿಲ್ಲ.”
ಎಂದು ಹೇಳಿದರು.
“ನಿನ್ನೆ ನಾನು ವೈಯಕ್ತಿಕ ಕಾರ್ಯಕ್ರಮದಲ್ಲಿದ್ದ ಕಾರಣ ಯಾರಿಗೂ ಸಿಕ್ಕಿರಲಿಲ್ಲ. ರಣದೀಪ್ ಸಿಂಗ್ ಸುರ್ಜೇವಾಲಾ ಮತ್ತು ಬಿ.ಕೆ. ಹರಿಪ್ರಸಾದ್ ಅವರು ಕರೆ ಮಾಡಿ ಮಾತನಾಡಿದ್ದರು. ಇಂದು ಸುರ್ಜೇವಾಲಾ ಅವರನ್ನು ಭೇಟಿಯಾಗಿ ಸುದೀರ್ಘ ಚರ್ಚೆ ನಡೆಸಿದ್ದೇನೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಸುರ್ಜೇವಾಲಾ ಅವರು ನನ್ನ ರಾಜೀನಾಮೆ ಅಂಗೀಕರಿಸುವುದಿಲ್ಲ ಎಂದು ಹೇಳಿದ್ದಾರೆ. ಸದ್ಯಕ್ಕೆ ಪಾಸಿಟಿವ್ ಆಗಿಯೇ ಇರೋಣ, ನೆಗೆಟಿವ್ ಯೋಚನೆ ಬೇಡ” ಎಂದು ರಾಮಲಿಂಗಾರೆಡ್ಡಿ ತಿಳಿಸಿದರು.
ಡಿಸಿಎಂ ಡಿ.ಕೆ. ಶಿವಕುಮಾರ್ ಎದುರು ಕೂಡ ಎಲ್ಲವನ್ನು ಹೇಳಿದ್ದೇನೆ ನಾನು ಹೇಳಬೇಕಿರುವುದನ್ನು ಹೇಳಿ ಬಂದಿದ್ದೇನೆ. ಅವರು ಭರವಸೆ ನೀಡಿದ್ದಾರೆ. ಸಿಎಂ, ಡಿಕೆಶಿ ಹಾಗೂ ಸುರ್ಜೇವಾಲಾ ಅವರು ಚರ್ಚಿಸಿ ಏನು ನಿರ್ಧಾರ ಕೈಗೊಳ್ಳುತ್ತಾರೋ ನೋಡೋಣ. ಎಲ್ಲ ಗೊಂದಲಗಳು ಸಂಜೆಯೊಳಗೆ ಇತ್ಯರ್ಥವಾಗುವ ಭರವಸೆ ಇದೆ. ಹಿರಿಯ ನಾಯಕರ ಕರೆಯ ಬಂದ ಬಳಿಕ ಮುಂದಿನ ಭೇಟಿ ನಿರ್ಧಾರವಾಗಲಿದೆ” ಎಂದು ಹೇಳುವ ಮೂಲಕ ಚೆಂಡನ್ನು ಹೈಕಮಾಂಡ್ ಅಂಗಳಕ್ಕೆ ಎಸೆದಿದ್ದಾರೆ.




























