
ಬೆಂಗಳೂರು,ಆ.೮- ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಏನೇ ತೀರ್ಮಾನ ತೆಗೆದುಕೊಂಡರೂ ಅದಕ್ಕೆ ನಾವು ಬದ್ಧರಾಗಿದ್ದೇವೆ.ಪಕ್ಷದ ಹಿತದೃಷ್ಟಿಯಿಂದ ನಾವು ಅದಕ್ಕೆ ತಲೆಬಾಗುತ್ತೇವೆ ಎಂದು ಸಚಿವ ಹೆಚ್.ಸಿ. ಬಾಲಕೃಷ್ಣ ಸ್ಪಷ್ಟಪಡಿಸಿದ್ದಾರೆ.
ಬೆಂಗಳೂರಿನ ವಿಜಯನಗರದ ಆದಿಚುಂಚನಗಿರಿ ಮಠಕ್ಕೆ ಭೇಟಿ ನೀಡಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿ,ಅಧಿಕಾರ ಕೊಟ್ಟವರು ಮುಖ್ಯಮಂತ್ರಿ. ಅವರ ತೀರ್ಮಾನಕ್ಕೆ ತಲೆ ಬಾಗುತ್ತೇನೆ ಎಂದು ಹೇಳಿದರು
ವಿಜಯನಗರ ಕ್ಷೇತ್ರದ ಶಾಸಕ ಎಂ.ಕೃಷ್ಣಪ್ಪ ನಮ್ಮ ಪಕ್ಷದ ಪ್ರಮುಖ ಹಾಗೂ ಪವರ್ಫುಲ್ ಮುಖಂಡರು. ನಮ್ಮ ಪಕ್ಷದಲ್ಲಿ ೧೦೦ಕ್ಕೂ ಹೆಚ್ಚು ಪವರ್ಫುಲ್ ಶಾಸಕರಿದ್ದಾರೆ. ಆದರೆ, ಸಚಿವ ಸ್ಥಾನ ನೀಡಲು ೩೩ ಮಂದಿಗೆ ಮಾತ್ರ ಅವಕಾಶವಿದೆ. ಹೀಗಾಗಿ ಎಲ್ಲರೂ ಹೊಂದಿಕೊಂಡು ಹೋಗಬೇಕಾಗಿದೆ.ಇಂದು ಏನಾದರೂ ತಪ್ಪಾಗಿದೆ ಎಂದರೆ, ಮುಂದೆ ಒಳ್ಳೆಯದು ಆಗಬಹುದು. ಈಗ ನಮಗೆ ತೊಂದರೆಯಾಗಿದ್ದರೆ, ಮುಂದಿನ ದಿನಗಳಲ್ಲಿ ಒಳ್ಳೆಯ ಅವಕಾಶ ಕಾದಿರಬಹುದು ಎಂಬ ಭಾವನೆಯಿಂದ ಕೆಲಸ ಮಾಡಬೇಕು. ಹೈಕಮಾಂಡ್ ಹಾಗೂ ಮುಖ್ಯಮಂತ್ರಿ ಈ ವಿಚಾರವನ್ನು ತೀರ್ಮಾನ ಮಾಡುತ್ತಾರೆ ಎಂದು ತಿಳಿಸಿದರು.
ನಾಳೆಯಿಂದ ಜೆಡಿಎಸ್ ನಿಂದ ಬಿಡದಿ ಪಾದಯಾತ್ರೆ ನಡೆಯುತ್ತಿರುವ ಬಗ್ಗೆ ಪ್ರತಿಕ್ರಿಯಿಸಿದ ಅವರು,ಪಾದಯಾತ್ರೆಯಲ್ಲಿ ಭಾಗವಹಿಸುವವರು ಆ ಭಾಗದ ರೈತರಲ್ಲ. ಜೆಡಿಎಸ್ ಮತ್ತು ಬಿಜೆಪಿ ಕಾರ್ಯಕರ್ತರು ಹಾಗೂ ಮುಖಂಡರು ಪಾದಯಾತ್ರೆಯಲ್ಲಿ ಭಾಗವಹಿಸುತ್ತಿದ್ದಾರೆ,ಇದು ಪಾದಯಾತ್ರೆಯಲ್ಲ, ಪ್ರಾಯಶ್ಚಿತ್ತ ಯಾತ್ರೆ ಎಂದು ಟೀಕಿಸಿದರು.
ಬಿಡದಿ ಟೌನ್ಶಿಪ್ ಯೋಜನೆ ಕುಮಾರಸ್ವಾಮಿ ಹಾಗೂ ಯಡಿಯೂರಪ್ಪ ಕಾಲದಲ್ಲೇ ಆರಂಭವಾಗಿತ್ತು.ಕೇಂದ್ರ ಸಚಿವ ಕುಮಾರಸ್ವಾಮಿ ಎರಡನೇ ಭಾರಿ ಮುಖ್ಯಮಂತ್ರಿಯಾಗಿದ್ದಾಗಲೂ ಈ ಯೋಜನೆಯನ್ನು ಕೈಬಿಡಬಹುದಿತ್ತು.ಆದರೆ ಸ್ಥಳೀಯ ರೈತರು ಮನವಿ ಮಾಡಿದಾಗ,ಇದು ತಮ್ಮ ಕನಸಿನ ಕೂಸು ಎಂದು ಹೇಳಿ ಯೋಜನೆಯನ್ನು ಮುಂದುವರಿಸುವುದಾಗಿ ತಿಳಿಸಿದ್ದರು ಎಂದು ಹೇಳಿದರು.
ಕೆಲವು ರೈತರಿಗೆ ನಿಜವಾಗಿಯೂ ಅನ್ಯಾಯವಾಗಿದ್ದರೆ ಅದನ್ನು ಸರಿಪಡಿಸಲು ಮುಖ್ಯಮಂತ್ರಿ ಕಮಿಟಿ ರಚಿಸುವುದಾಗಿ ಹೇಳಿದ್ದಾರೆ. ಈ ಸಮಸ್ಯೆಯನ್ನು ಪರಿಶೀಲಿಸಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು. ಈಗ ರೈತರ ಒತ್ತಾಯದ ಮೇರೆಗೆ ಸರ್ಕಾರ ಷೇರಿಂಗ್ ಪ್ರಮಾಣವನ್ನು ೫೦%ಕ್ಕೆ ಹೆಚ್ಚಿಸಿದೆ. ಹಿಂದೆ ಹಣದ ಮೊತ್ತ ಕಡಿಮೆ ಇತ್ತು. ಇದೀಗ ಎರಡು ಕೋಟಿ ರೂ.ಗೂ ಹೆಚ್ಚು ನೀಡುವಂತೆ ತೀರ್ಮಾನಿಸಿ ಹಣ ನೀಡಲಾಗಿದೆ ಎಂದು ಮಾಹಿತಿ ನೀಡಿದರು.

































