Home ಜಿಲ್ಲೆ ಬೆಂಗಳೂರು ಬೆಂಗಳೂರು ಮುಖ್ಯ ಪೊಲೀಸ್ ಆಯಕ್ತರಾಗಿ ಹಿತೇಂದ್ರ

ಬೆಂಗಳೂರು ಮುಖ್ಯ ಪೊಲೀಸ್ ಆಯಕ್ತರಾಗಿ ಹಿತೇಂದ್ರ

ಬೆಂಗಳೂರು, ನ.18- ರಾಜ್ಯ ಪೊಲೀಸ್ ಇಲಾಖೆಯಲ್ಲಿ ಭಾರಿ ಆಡಳಿತಾತ್ಮಕ ಬದಲಾವಣೆ ಮಾಡಿರುವ ರಾಜ್ಯ ಸರ್ಕಾರ, 32 ಐಪಿಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಿ ಆದೇಶ ಹೊರಡಿಸಿದೆ. ಈ ಮೂಲಕ ಬೆಂಗಳೂರು ನಗರ ಪೊಲೀಸ್ ವ್ಯವಸ್ಥೆಯಲ್ಲಿ ಮಹತ್ವದ ಪುನರ್‌ರಚನೆ ಮಾಡಲಾಗಿದ್ದು, ಹಿರಿಯ ಐಪಿಎಸ್ ಅಧಿಕಾರಿ ಆರ್. ಹಿತೇಂದ್ರ ಅವರನ್ನು ಬೆಂಗಳೂರಿನ ನೂತನ ಮುಖ್ಯ ಪೊಲೀಸ್ ಆಯುಕ್ತರನ್ನಾಗಿ ನೇಮಕ ಮಾಡಲಾಗಿದೆ.


ಈವರೆಗೆ ಬೆಂಗಳೂರು ನಗರ ಪೊಲೀಸ್ ಆಯುಕ್ತರಾಗಿದ್ದ ಸೀಮಂತ್ ಕುಮಾರ್ ಸಿಂಗ್ ಅವರನ್ನು ರಾಜ್ಯ ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ವಿಭಾಗದ ಎಡಿಜಿಪಿಯಾಗಿ ವರ್ಗಾವಣೆ ಮಾಡಲಾಗಿದೆ. ಅವರ ಸ್ಥಾನಕ್ಕೆ ಕಾನೂನು ಮತ್ತು ಸುವ್ಯವಸ್ಥೆ ವಿಭಾಗದ ಎಡಿಜಿಪಿಯಾಗಿದ್ದ ಆರ್. ಹಿತೇಂದ್ರ ಅವರನ್ನು ನಿಯೋಜಿಸಲಾಗಿದೆ.


ಪ್ರತ್ಯೇಕ ಪೊಲೀಸ್ ಆಯುಕ್ತರು:
ಬೆಂಗಳೂರು ನಗರ ಪೊಲೀಸ್ ವ್ಯವಸ್ಥೆಯನ್ನು ಐದು ವಲಯಗಳಾಗಿ ವಿಭಜಿಸಿ, ಪ್ರತಿ ವಲಯಕ್ಕೂ ಪ್ರತ್ಯೇಕ ಪೊಲೀಸ್ ಆಯುಕ್ತರನ್ನು ನೇಮಕ ಮಾಡಲಾಗಿದೆ.


ಕೇಂದ್ರ:ಲಾಭೂರಾಮ್,ಪೂರ್ವ: ಡಾ. ಪಿ.ಎಸ್. ಹರ್ಷ,ಪಶ್ಚಿಮ:ವಿಕಾಸ್ ಕುಮಾರ್ ವಿಕಾಸ್,ಉತ್ತರ: ಡಾ. ಎಂ.ಬಿ. ಬೋರಲಿಂಗಯ್ಯ ದಕ್ಷಿಣ ಬೆಂಗಳೂರು:ಸಿ. ವಂಶಿ ಕೃಷ್ಣ (ಹೆಚ್ಚುವರಿ ಜವಾಬ್ದಾರಿ) ಅವರನ್ನು ನಿಯೋಜನೆ ಮಾಡಲಾಗಿದೆ.


ಬೆಂಗಳೂರು ಆಡಳಿತ ವಿಭಾಗದ ಜಂಟಿ ಪೊಲೀಸ್ ಆಯುಕ್ತರಾಗಿ ಸಿ. ವಂಶಿ ಕೃಷ್ಣ ಅವರನ್ನು ನೇಮಕ ಮಾಡಲಾಗಿದ್ದು, ದಕ್ಷಿಣ ಬೆಂಗಳೂರು ಪೊಲೀಸ್ ಆಯುಕ್ತರ ಹೆಚ್ಚುವರಿ ಹೊಣೆಯನ್ನೂ ನೀಡಲಾಗಿದೆ.


ಸಂಚಾರ ಹೊಸ ಆಯುಕ್ತರು:


ಹಿರಿಯ ಐಪಿಎಸ್ ಅಧಿಕಾರಿ ಎಡಿಜಿಪಿ‌ಹೇಮಂತ್ ಎಂ. ನಿಂಬಾಳ್ಕರ್ ಅವರನ್ನು ಬೆಂಗಳೂರು ನಗರ ಸಂಚಾರ ಪೊಲೀಸ್ ಆಯುಕ್ತರನ್ನಾಗಿ ನೇಮಕ ಮಾಡಲಾಗಿದೆ. ಮೇಲ್ದರ್ಜೆಗೇರಿಸಿರುವ ರೌಡಿ ನಿಗ್ರಹ ದಳದ ಆಯುಕ್ತ ಹುದ್ದೆಯ ಹೆಚ್ಚುವರಿ ಜವಾಬ್ದಾರಿಯನ್ನೂ ಅವರಿಗೆ ವಹಿಸಲಾಗಿದೆ.


ರಾಜ್ಯ ಮಟ್ಟದಲ್ಲೂ ಬದಲಾವಣೆ:
ಸಿಐಡಿ ಎಡಿಜಿಪಿಯಾಗಿದ್ದ ಬಿಜಯ್ ಕುಮಾರ್ ಸಿಂಗ್ ಅವರನ್ನು ಕಾನೂನು ಮತ್ತು ಸುವ್ಯವಸ್ಥೆ ವಿಭಾಗದ ಎಡಿಜಿಪಿಯಾಗಿ ನೇಮಿಸಲಾಗಿದೆ. ಲೋಕಾಯುಕ್ತ ಎಡಿಜಿಪಿಯಾಗಿದ್ದ ಮನೀಶ್ ಖರ್ಬಿಕರ್ ಅವರನ್ನು ಸಂವಹನ, ಲಾಜಿಸ್ಟಿಕ್ಸ್ ಮತ್ತು ಆಧುನೀಕರಣ ವಿಭಾಗಕ್ಕೆ ವರ್ಗಾಯಿಸಲಾಗಿದೆ. ಈ ಹಿಂದೆ ಈ ಹುದ್ದೆಯಲ್ಲಿದ್ದ ಎಸ್. ಮುರುಗನ್ ಅವರನ್ನು ಲೋಕಾಯುಕ್ತ ಎಡಿಜಿಪಿಯಾಗಿ ನೇಮಕ ಮಾಡಲಾಗಿದೆ.


ಕೆಎಸ್‌ಆರ್‌ಪಿ ಐಜಿಪಿ:
ಎನ್. ಶಶಿಕುಮಾರ್ ಅವರನ್ನು ಮಂಗಳೂರು ಪಶ್ಚಿಮ ವಲಯದ ಐಜಿಪಿಯಾಗಿ ಹಾಗೂ ಅನುಪಮ್ ಅಗರ್ವಾಲ್ ಅವರನ್ನು ಕೆಎಸ್‌ಆರ್‌ಪಿ ಐಜಿಪಿಯಾಗಿ ವರ್ಗಾವಣೆ ಮಾಡಲಾಗಿದೆ. ಕಲಬುರಗಿ ಪೊಲೀಸ್ ಆಯುಕ್ತರಾಗಿದ್ದ ಡಾ. ಶರಣಪ್ಪ ಎಸ್.ಡಿ. ಅವರನ್ನು ರೈಲ್ವೆ ವಿಭಾಗದ ಡಿಐಜಿಯಾಗಿ ನೇಮಿಸಲಾಗಿದೆ. ಅವರ ಸ್ಥಾನಕ್ಕೆ ಕುಲದೀಪ್ ಕುಮಾರ್ ಆರ್. ಜೈನ್ ಅವರನ್ನು ಕಲಬುರಗಿ ಪೊಲೀಸ್ ಆಯುಕ್ತರನ್ನಾಗಿ ನಿಯೋಜಿಸಲಾಗಿದೆ.


ಡಿಸಿಪಿಗಳ ವರ್ಗಾವಣೆ:
ಬೆಂಗಳೂರು ನಗರದ ವಿವಿಧ ಪೊಲೀಸ್ ವಿಭಾಗಗಳ ಡಿಸಿಪಿ ಹುದ್ದೆಗಳಲ್ಲಿಯೂ ಬದಲಾವಣೆ ಮಾಡಲಾಗಿದೆ.


ವೈಟ್‌ಫೀಲ್ಡ್ ವಿಭಾಗದ ಡಿಸಿಪಿಯಾಗಿದ್ದ ಸೈದುಲು ಅದಾವತ್ ಅವರನ್ನು ಆಂತರಿಕ ಭದ್ರತಾ ವಿಭಾಗದ ಎಸ್‌ಪಿಯಾಗಿ ವರ್ಗಾವಣೆ ಮಾಡಲಾಗಿದೆ.


ಸಂಚಾರದಲ್ಲೂ ಹೊಸ ನೇಮಕ:
ಬೆಂಗಳೂರು ಸಂಚಾರ ವಿಭಾಗದ ಪೂರ್ವ ವಲಯದ ಡಿಸಿಪಿಯಾಗಿ ಡಾ. ಅನೂಪ್ ಎ. ಶೆಟ್ಟಿ, ಕೇಂದ್ರ ವಲಯದ ಡಿಸಿಪಿಯಾಗಿ ಲೋಕೇಶ್ ಬಿ. ಜಗಲಾಸರ್ ಹಾಗೂ ಪಶ್ಚಿಮ ವಲಯದ ಡಿಸಿಪಿಯಾಗಿ ಪಿ.ವಿ. ಸ್ನೇಹಾ ಅವರನ್ನು ನೇಮಕ ಮಾಡಲಾಗಿದೆ.