
ಕಲಬುರಗಿ,ನ.18-ಬಸ್ ಹತ್ತುವ ವೇಳೆ ಮಹಿಳೆಯರಿಬ್ಬರ ಚಿನ್ನಾಭರಣ ಕಳವು ಮಾಡಿರುವ ಘಟನೆ ನಗರದ ಆಳಂದ ಚೆಕ್ಪೋಸ್ಟ್ ಮತ್ತು ಜಗತ್ ಬಳಿ ನಡೆದಿದೆ.
ಆಳಂದ ಚೆಕ್ಪೋಸ್ಟ್ ಬಳಿ ಆಳಂದಗೆ ಹೋಗುವ ಬಸ್ ಹತ್ತುವಾಗ ಮಹಾರಾಷ್ಟ್ರ ರಾಜ್ಯದ ಉಮ್ಮರಗಾ ತಾಲ್ಲೂಕಿನ ಶಿವಪೂರದ ನಿವಾಸಿ ಶೋಭಾ ಅಣ್ಣಾರಾವ ದಳಗೇಡಿ ಎಂಬುವವರ ಬ್ಯಾಗ್ನಲ್ಲಿದ್ದ 4 ಲಕ್ಷ ರೂ.ಮೌಲ್ಯದ 40 ಗ್ರಾಂ.ಬಂಗಾರದ 2 ಬಳೆ, 4.50 ಲಕ್ಷ ರೂ.ಮೌಲ್ಯದ 45 ಗ್ರಾಂ.ಬಂಗಾರದ ತಾಳಿ ಸರ ಕಳವಾಗಿದೆ.
ಇವರು ತಮ್ಮ ಅತ್ತಿಗೆಯ ತಮ್ಮನ ಮದುವೆ ಕಾರ್ಯಕ್ರಮಕ್ಕೆಂದು ಮಹಾರಾಷ್ಟ್ರದಿಂದ ಕಲಬುರಗಿಗೆ ಆಗಮಿಸಿ ಮದುವೆ ಸಮಾರಂಭ ಮುಗಿಸಿಕೊಂಡು ಮರಳಿ ತಮ್ಮ ಊರಿಗೆ ಹೋಗಲು ಆಳಂದ ಚೆಕ್ಪೋಸ್ಟ್ ಬಳಿ ಆಳಂದ್ಗೆ ಹೋಗುವ ಬಸ್ ಹತ್ತುವಾಗ ಅವರ ಬ್ಯಾಗ್ನಲ್ಲಿದ್ದ ಚಿನ್ನಾಭರಣವನ್ನು ಕಳ್ಳರು ಕಳವು ಮಾಡಿದ್ದಾರೆ.
ಇನ್ನೊಂದು ಪ್ರಕರಣದಲ್ಲಿ ಸೇಡಂ ತಾಲ್ಲೂಕಿನ ಬಿಲಕಲ್ಲ ಗ್ರಾಮದಲ್ಲಿರುವ ಸರಕಾರಿ ಶಾಲೆಯಲ್ಲಿ ಅಡುಗೆಗಾರತಿಯಾಗಿ ಕೆಲಸ ಮಾಡುತ್ತಿರುವ ರೇಣುಕಾ ನಾಗಪ್ಪ ಹೊಟ್ಟಿ ಎಂಬುವವರ 1.50 ಲಕ್ಷ ರೂ.ಮೌಲ್ಯದ 10 ಗ್ರಾಂ.ಬಂಗಾರದ 2 ತಾಳಿ, 3 ಗುಂಡು ಮತ್ತು 12 ಕೊಯಪತ್ತಿ ಕಳವಾಗಿವೆ.
ಇವರು ನ.16 ರಂದು ಕ್ಲಸ್ಟರ್ ಕಿಚನ್ ಸೆಂಟರ್ ಆದೇಶ ರದ್ದುಪಡಿಸಲು ಆಗ್ರಹಿಸಿ ಕಲಬುರಗಿ ಜಿಲ್ಲಾ ಪಂಚಾಯಿತಿ ಮುಂದೆ ನಡೆದ ಹೋರಾಟದಲ್ಲಿ ಭಾಗವಹಿಸಿ ಮರಳಿ ಊರಿಗೆ ಹೋಗಲು ಜಗತ್ ವೃತ್ತದ ಬಳಿ ಬಸ್ ಹತ್ತುವಾಗ ಕಳ್ಳರು ಇವರ ಕೊರಳಲ್ಲಿದ್ದ ಚಿನ್ನಾಭರಣ ಕಳವು ಮಾಡಿದ್ದಾರೆ.
ಈ ಸಂಬಂಧ ಸಬ್-ಅರ್ಬನ್ ಮತ್ತು ಬ್ರಹ್ಮಪುರ ಪೊಲೀಸ್ ಠಾಣೆಗಳಲ್ಲಿ ಪ್ರತ್ಯೇಕ ಪ್ರಕರಣ ದಾಖಲಾಗಿದ್ದು, ತನಿಖೆ ನಡೆದಿದೆ.




















