
ಬಸವನಬಾಗೇವಾಡಿ, ಜು. ೩೦: ಹನ್ನೆರಡನೇ ಶತಮಾನದಲ್ಲಿ ಬಸವಣ್ಣನವರ ಆಪ್ತ ಸಹಾಯಕರಾಗಿದ್ದ ಹಡಪದ ಅಪ್ಪಣ್ಣನವರು ಕಾಯಕ, ದಾಸೋಹ, ಸಮಾನತೆ ಮತ್ತು ಮಾನವೀಯ ಮೌಲ್ಯಗಳನ್ನು ತಮ್ಮ ವಚನಗಳ ಮೂಲಕ ಪ್ರತಿಪಾದಿಸುವುದರ ಜೊತೆಗೆ ಬಸವಣ್ಣನವರ ಕ್ರಾಂತಿಯ ಪ್ರಭಾವಕ್ಕೆ ಒಳಗಾಗಿ ಹಡಪದ ಅಪ್ಪಣ್ಣ ಅವರು ಸಹ ಅನುಭವ ಮಂಟಪವನ್ನು ಸೇರಿಕೊಂಡು ಸಾಮಾಜಿಕ ಕ್ರಾಂತಿಗೆ ಧುಮುಕಿದರು ಎಂದು ರಾಷ್ಟ್ರೀಯ ಬಸವಸೈನ್ಯದ ಸಂಸ್ಥಾಪಕ ಅಧ್ಯಕ್ಷ ಶಂಕರಗೌಡ ಬಿರಾದಾರ ,ಹೇಳಿದರು.
ಶಿವಶರಣ ಹಡಪದ ಅಪ್ಪಣ್ಣನವರ ಜಯಂತಿಯನ್ನು ಬಸವನಬಾಗೇವಾಡಿಯ ವೀರ ರಾಣಿ ಚನ್ನಮ್ಮ ವೃತ್ತದಲ್ಲಿ ರಾಷ್ಟ್ರೀಯ ಬಸವಸೈನ್ಯ ಸಂಘಟನೆಯ ವತಿಯಿಂದ ಆಚರಿಸಲಾಯಿತು.
ಹಡಪದ ಅಪ್ಪಣ್ಣನವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿ ಮಾತನಾಡಿದ ಅವರು
“ಕಾಯಕವೇ ಕೈಲಾಸ” ಎಂಬ ತತ್ವವನ್ನು ತಮ್ಮ ಜೀವನದಲ್ಲಿ ಅನುಸರಿಸಿದ ಹಡಪದ ಅಪ್ಪಣ್ಣನವರು ಶ್ರಮದ ಗೌರವ ಮತ್ತು ಸಾಮಾಜಿಕ ಸಮಾನತೆಯ ಸಂದೇಶವನ್ನು ನೀಡಿದ್ದರು ಎಂದು ಅವರು ಹೇಳಿದರು. ಅವರ ವಚನಗಳು ಇಂದಿಗೂ ಪ್ರಸ್ತುತವಾಗಿದ್ದು, ಯುವಜನತೆ ಅವುಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಅವರು ಅಭಿಪ್ರಾಯಪಟ್ಟರು.
ಅವರು ಮುಂದುವರಿದು ಮಾತನಾಡಿ, ಹಡಪದ ಅಪ್ಪಣ್ಣನವರ ಜನ್ಮಸ್ಥಳ ಮಸಬಿನಾಳ ಗ್ರಾಮದಲ್ಲಿ ಸ್ಮಾರಕ ನಿರ್ಮಾಣಕ್ಕೆ ರಾಜ್ಯ ಸರ್ಕಾರ ಅನುದಾನ ಬಿಡುಗಡೆ ಮಾಡಬೇಕು ಎಂದು ಒತ್ತಾಯಿಸಿದರು.
ಹಡಪದ ಸಮಾಜದ ಮುಖಂಡ ಪತ್ರಕರ್ತ ನಾಗೇಶ ನಾಗೂರ ಹಾಗೂ ರಾಷ್ಟ್ರೀಯ ಬಸವಸೈನ್ಯದ ಮುಖಂಡ ಶ್ರೀಕಾಂತ ಕೊಟ್ರಶೆಟ್ಟಿ ಮಾತನಾಡಿ, ಹಡಪದ ಅಪ್ಪಣ್ಣನವರ ವಚನಗಳು ಸಮಾಜದಲ್ಲಿ ಸಮಾನತೆ ಮತ್ತು ಶ್ರಮದ ಗೌರವವನ್ನು ಉತ್ತೇಜಿಸುವಲ್ಲಿ ಪಾತ್ರವಹಿಸಿವೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಜಟ್ಟಿಂಗರಾಯ ಮಾಲಗಾರ, ಪ್ರಶಾಂತ ಮುಂಜಾನೆ, ಸಂಗಮೇಶ ಜಾಲಗೇರಿ, ರಾಷ್ಟ್ರೀಯ ಬಸವಸೈನ್ಯದ ತಾಲೂಕ ಅಧ್ಯಕ್ಷ ಸಂಜು ಬಿರಾದಾರ,ಮುಖಂಡರಾದ ಭದ್ರಣ್ಣ ಮಣ್ಣೂರ,ಆನಂದ ವನರೊಟ್ಟಿ,ಹಡಪದ ಸಮಾಜದ ತಾಲೂಕು ಅಧ್ಯಕ್ಷ ಮಾಂತೇಶ ಹಡಪದ, ಅಪ್ಪು ಗಬ್ಬೂರ,ರಾಜು ಹಡಪದ, ಮುತ್ತಪ್ಪ ಇವಣಗಿ,ಚಂದ್ರಮ ಹಡಪದ, ಮಲ್ಲಿಕಾರ್ಜುನ ಇವಣಗಿ,ಮಾಂತೇಶ ಹೆಬ್ಬಾಳ,ಮಲ್ಲು ಬನಾಸಿ,ಪ್ರಲ್ಹಾದ ಹಡಪದ ಮಹಾದೇವ ನಾಯ್ಕೋಡಿ,ಸೇರಿದಂತೆ ಸಮಾಜದ ಸದಸ್ಯರು, ಸಂಘಟನೆಗಳ ಪದಾಧಿಕಾರಿಗಳು ಸೇರಿದಂತೆ ಅನೇಕರು ಭಾಗವಹಿಸಿದ್ದರು.






























