Home ಜಿಲ್ಲೆ ಕಲಬುರಗಿ ನ.22ರಂದು ಗುರುವಂದನಾ ಸುಮಧುರ ಸಂಗೀತೋತ್ಸವ

ನ.22ರಂದು ಗುರುವಂದನಾ ಸುಮಧುರ ಸಂಗೀತೋತ್ಸವ

ಕಲಬುರಗಿ,ನ20: ಸಂಗೀತ ಮಹರ್ಷಿ ಲಿಂ. ಪಂ. ಶಾಂತಾರಾಮ ಚಿಗರಿ ಹಾಗೂ ವಿದುಷಿ ಲಿಂ. ಶಕುಂತಲಾದೇವಿ ಚಿಗರಿ ಲಾತೂರ ಅವರ ಸ್ಮರಣಾರ್ಥ ಗುರುವಂದನಾ ಸುಮಧುರ ಸಂಗೀತೋತ್ಸವವನ್ನು ನ.22ರಂದು ನಗರದಲ್ಲಿ ಆಯೋಜಿಸಲಾಗಿದೆ ಎಂದು ಸಂಗೀತ ಮಹರ್ಷಿ ಪಂ. ಶಾಂತಾರಾಮ ಚಿಗರಿ ಕಲಾ ಸಂಸ್ಥೆ ಅಧ್ಯಕ್ಷ ಉದಯಕುಮಾರ ಫುಲಾರಿ ತಿಳಿಸಿದರು.
ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಂಗೀತ ಮಹರ್ಷಿ ಪಂ. ಶಾಂತಾರಾಮ ಚಿಗರಿ ಕಲಾ ಸಂಸ್ಥೆ ಹಾಗೂ ಸೂರ್ ತಾಲ್ ಸಂಗೀತ ಅಕಾಡೆಮಿ ಸಹಯೋಗದಲ್ಲಿ ಜಿಲ್ಲಾ ನ್ಯಾಯಾಲಯದ ಎದುರಿನ ಸರ್. ಎಂ. ವಿಶ್ವೇಶ್ವರಯ್ಯ ಎಂಜಿನಿಯರಿಂಗ್ ಭವನದಲ್ಲಿ ಬೆಳಗ್ಗೆ 10ರಿಂದ ರಾತ್ರಿ 9ರವರೆಗೆ ಕಾರ್ಯಕ್ರಮ ನಡೆಯಲಿದೆ ಎಂದರು.
ಬೆಳಗ್ಗೆ 10ಕ್ಕೆ ಪ್ರಸಿದ್ಧ ತಬಲಾ ವಾದಕ ಪಂ. ಸಿದ್ದಣ್ಣ ದೇಸಾಯಿ ಕಲ್ಲೂರ ಕಾರ್ಯಕ್ರಮ ಉದ್ಘಾಟಿಸಲಿದ್ದು, ಪಂ. ಜಯರಾವ ಕುಲಕರ್ಣಿ ಅಧ್ಯಕ್ಷತೆ ವಹಿಸುವರು. ಯುವ ಕಲಾವಿದ ಪ್ರಶಾಂತ ಗೋಲ್ಡಸ್ಮಿತ್ ಅವರ ಶಾಸ್ತ್ರೀಯ ಬಾನ್ಸುರಿ ವಾದನವೂ ನಡೆಯಲಿದೆ.ಸಂಜೆ 5.30ರಿಂದ ಪುಣೆಯ ಪಂ. ಮುಕೇಶ ಜಾಧವ ಅವರ ತಬಲಾ ಸೋಲೋ ಹಾಗೂ ಡಾ. ರಾಧಿಕಾ ಪಾಠಕ್ ಅವರ ಹಿಂದೂಸ್ತಾನಿ ಶಾಸ್ತ್ರೀಯ ಗಾಯನ ಪ್ರಸ್ತುತಗೊಳ್ಳಲಿದೆ. ವಿವಿಧ ಕಲಾವಿದರು ಹಾಗೂ ಸೂರ್ ತಾಲ್ ಸಂಗೀತ ಅಕಾಡೆಮಿ ವಿದ್ಯಾರ್ಥಿಗಳು ಸಂಗೀತ ಕಾರ್ಯಕ್ರಮ ನೀಡಲಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಸುಹಾಸಿನಿ ಫುಲಾರಿ, ಸಂಜೀವಕುಮಾರ್ ಡೊಂಗರಾಗಾಂವ, ಪ್ರಶಾಂತ್ ಗೋಲ್ಡಸ್ಮಿತ,ಡಾ. ನಮ್ರತಾ ರಾವುತ್ ಮುಂತಾದವರು ಉಪಸ್ಥಿತರಿದ್ದರು.