Home ಜಿಲ್ಲೆ ಕಲಬುರಗಿ ಗಾಂಜಾ ಪೆಡ್ಲರ್ ರಮೇಶ ಕಾಳೆ ಬಂಧನ

ಗಾಂಜಾ ಪೆಡ್ಲರ್ ರಮೇಶ ಕಾಳೆ ಬಂಧನ

ಕಲಬುರಗಿ,ಜೂ.6-ರೂಡಿಗತ ಗಾಂಜಾ ಪೆಡ್ಲರ್ ರಮೇಶ ಕಾಳೆಯನ್ನು ಪಿಐಟಿ ಎನ್‍ಡಿಪಿಎಸ್ ಕಾಯ್ದೆ ಅಡಿಯಲ್ಲಿ ಬಂಧಿಸಿ ಶಿವಮೊಗ್ಗದ ಕೇಂದ್ರ ಕಾರಾಗೃಹದಲ್ಲಿ ಬಂಧನದಲ್ಲಿಡಲು ರಾಜ್ಯ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕರು (ಎಎನ್‍ಟಿಎಫ್) ಆದೇಶಿಸಿದ್ದಾರೆ.
ನಗರದ ಬಾಪೂ ನಗರದ ನಿವಾಸಿಯಾದ ರಮೇಶ ತಂದೆ ವಿಜಯಕುಮಾರ ಕಾಳೆ (58) ಮೇಲೆ ನಗರದ ವಿವಿಧ ಪೊಲೀಸ್ ಠಾಣೆಗಳಲ್ಲಿ ಮಾದಕ ವಸ್ತುಗಳ ಸಂಗ್ರಹಣೆ, ಸರಬರಾಜು, ಸಾಗಾಣಿಕೆ ಮತ್ತು ಮಾರಾಟದಂತಹ ಒಟ್ಟು 17 ಪ್ರಕರಣಗಳು ಎನ್‍ಡಿಪಿಎಸ್ ವಿವಿಧ ಕಾಯ್ದೆ ಅಡಿಯಲ್ಲಿ ದಾಖಲಾಗಿವೆ. ಆರೋಪಿಯನ್ನು 2022ನೇ ಸಾಲಿನಲ್ಲಿ ಕೊಡಗು ಜಿಲ್ಲೆಯ ಭಾಗಮಂಡಲ ಪೊಲೀಸ್ ಠಾಣೆಗೆ ಗಡಿಪಾರು ಮಾಡಲು ಆದೇಶಿಸಲಾಗಿದ್ದು, ನ್ಯಾಯಾಲಯಕ್ಕೆ ಸಾಕ್ಷಿ ನುಡಿಯಲು ಹಾಜರಾದ ಸಂದರ್ಭದಲ್ಲಿ ಪುನ: ಗಾಂಜಾ ಮಾರಾಟ ಮಾಡುತ್ತಿದ್ದಾಗ 2 ಬಾರಿ ದಾಳಿ ಮಾಡಿ 2 ಪ್ರತ್ಯೇಕ ಪ್ರಕರಣ ದಾಖಲಾಗಿರುತ್ತದೆ. ಬ್ರಹ್ಮಪುರ ಪೊಲೀಸ್ ಠಾಣೆಯಲ್ಲಿ ದಾಖಲಾದ ಪ್ರಕರಣಕ್ಕೆ ಸಂಬಂಧಿಸಿದಂತೆ 1 ವರ್ಷದ ಅವಧಿಗೆ ಯಾವುದೇ ರೀತಿಯ ಕಾನೂನು ಸುವ್ಯವಸ್ಥೆಗೆ ಧಕ್ಕೆ ಬಾರದಂತೆ ಸದ್ವರ್ತನೆಯಿಂದ ಇದ್ದುದ್ದಕ್ಕಾಗಿ ಮುಚ್ಚಳಿಕೆ ಪತ್ರ ಬರೆದುಕೊಟ್ಟಿದ್ದು, 27.1.2024 ರಂದು ಬ್ರಹ್ಮಪುರ ಪೊಲೀಸ್ ಠಾಣೆಯಲ್ಲಿ ದಾಖಲಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಚ್ಚಳಿಕೆ ಷರತ್ತುಗಳನ್ನು ಉಲ್ಲಂಘನೆ ಮಾಡಿದ್ದಾಗಿ 25 ಸಾವಿರ ದಂಡ ವಿಧಿಸಲಾಗಿದೆ. ನಿಷೇಧಿತ ಮಾದಕ ವಸ್ತುಗಳ ಸಂಗ್ರಹಣೆ ಮಾರಾಟ ಮಾಡುತ್ತಿರುವುದರಿಂದ ಸಮಾಜದ ಸ್ವಾಸ್ಥ್ಯ, ಯುವ ಜನತೆಯ ಭವಿಷ್ಯ ಮತ್ತು ಆರೋಗ್ಯದ ಮೇಲೆ ದುಷ್ಪರಿಣಾಮ ಉಂಟು ಮಾಡುವುದರಿಂದ ಈ ಕಾನೂನು ಬಾಹಿರ ಚಟುವಟಿಕೆಗಳನ್ನು ನಿಯಂತ್ರಿಸಲು ಆರೋಪಿಯನ್ನು ಪಿಐಟಿ, ಎನ್‍ಡಿಪಿಎಸ್ ಕಾಯ್ದೆ ಅಡಿಯಲ್ಲಿ ಬಂಧಿಸಿ ಬಂಧನದಲ್ಲಿ ಇಡಲು ಬ್ರಹ್ಮಪುರ ಪಿಐ ಮಹಾಂತೇಶ ಪಾಟೀಲ ಅವರು ವರದಿ ನೀಡಿದ ಹಿನ್ನೆಲೆಯಲ್ಲಿ ನಗರ ಪೊಲೀಸ್ ಆಯುಕ್ತರಾದ ಡಾ.ಶರಣಪ್ಪ ಎಸ್.ಡಿ.ಅವರ ಶಿಫಾರಸ್ಸಿನ ಮೇರೆಗೆ ಆರೋಪಿಯನ್ನು ಶಿವಮೊಗ್ಗದ ಕೇಂದ್ರ ಕಾರಾಗೃಹದಲ್ಲಿ ಬಂಧನದಲ್ಲಿ ಇಡಲು ಎಎನ್‍ಟಿಎಫ್ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕರು ಆದೇಶಿಸಿದ್ದಾರೆ.