Home ಜಿಲ್ಲೆ ಉತ್ತರ ಕರ್ನಾಟಕದ ಸಮಸ್ಯೆಗಳ ಕುರಿತು ಸಿಎಂ ಜೊತೆ ಫಲಪ್ರದ ಚರ್ಚೆ: ರಾಘವ್ ಅಣ್ಣಿಗೇರಿ

ಉತ್ತರ ಕರ್ನಾಟಕದ ಸಮಸ್ಯೆಗಳ ಕುರಿತು ಸಿಎಂ ಜೊತೆ ಫಲಪ್ರದ ಚರ್ಚೆ: ರಾಘವ್ ಅಣ್ಣಿಗೇರಿ

ಸಂಜೆವಾಣಿ ವಾರ್ತೆ,
ವಿಜಯಪುರ, ಆ. ೨: ಉತ್ತರ ಕರ್ನಾಟಕದ ಜನತೆಯನ್ನು ಕಾಡುತ್ತಿರುವ ವಿವಿಧ ಜ್ವಲಂತ ಸಮಸ್ಯೆಗಳ ಕುರಿತು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರೊಂದಿಗೆ ಸುದೀರ್ಘ ಹಾಗೂ ಫಲಪ್ರದ ಚರ್ಚೆ ನಡೆಸಲಾಗಿದೆ ಎಂದು ಸಾಮಾಜಿಕ ಹೋರಾಟಗಾರ ರಾಘವ್ ಅಣ್ಣಿಗೇರಿ ತಿಳಿಸಿದ್ದಾರೆ.
ಪತ್ರಿಕಾ ಪ್ರಕಟಣೆಯಲ್ಲಿ ಅವರು, ಕೃಷ್ಣಾ ನದಿ ಮುಳುಗಡೆ ಪ್ರದೇಶದ ಸಾವಿರಾರು ಸಂತ್ರಸ್ತರು ಫಲವತ್ತಾದ ಕೃಷಿಭೂಮಿಯನ್ನು ಕಳೆದುಕೊಂಡಿದ್ದರೂ ಇಂದಿಗೂ ಸಮರ್ಪಕ ಪರಿಹಾರ ದೊರೆತಿಲ್ಲ. ಅವರಿಗೆ ನ್ಯಾಯಸಮ್ಮತ ಪರಿಹಾರ ಹಾಗೂ ಪುನರ್ವಸತಿ ಕಲ್ಪಿಸಲು ತುರ್ತು ಕ್ರಮ ಕೈಗೊಳ್ಳುವಂತೆ ಮುಖ್ಯಮಂತ್ರಿಗಳಿಗೆ ಮನವಿ ಮಾಡಲಾಗಿದೆ ಎಂದು ತಿಳಿಸಿದ್ದಾರೆ.
ವಿಜಯಪುರ ಜಿಲ್ಲೆಯ ಅಭಿವೃದ್ಧಿ ವಿಚಾರಗಳನ್ನೂ ಮುಖ್ಯಮಂತ್ರಿಗಳ ಗಮನಕ್ಕೆ ತರಲಾಗಿದ್ದು, ಜಿಲ್ಲಾಧಿಕಾರಿ ಕಚೇರಿ ಸೇರಿದಂತೆ ಅನೇಕ ಸರ್ಕಾರಿ ಕಚೇರಿಗಳು ಸ್ವಂತ ಕಟ್ಟಡಗಳಿಲ್ಲದೆ ಹಳೆಯ ಸ್ಮಾರಕ ಕಟ್ಟಡಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ಸ್ಥಿತಿಯನ್ನು ವಿವರಿಸಲಾಗಿದೆ. ಇದಕ್ಕೆ ಸ್ಪಂದಿಸಿದ ಮುಖ್ಯಮಂತ್ರಿ ವಿಜಯಪುರದಲ್ಲಿ ಶೀಘ್ರವೇ ಮಿನಿ ವಿಧಾನಸೌಧ ನಿರ್ಮಿಸಿ, ವಿವಿಧ ಸರ್ಕಾರಿ ಕಚೇರಿಗಳನ್ನು ಒಂದೇ ಸೂರಿನಡಿ ತರಲು ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ್ದಾರೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಇದೇ ವೇಳೆ ವಿಜಯಪುರ ನಗರದ ೨೪್ಠ೭ ಕುಡಿಯುವ ನೀರಿನ ಯೋಜನೆ, ಭೂಗತ ಒಳಚರಂಡಿ ವ್ಯವಸ್ಥೆ, ಭೂಗತ ವಿದ್ಯುತ್ ಕೇಬಲ್ ಕಾಮಗಾರಿ, ವರ್ಷಗಳಿಂದ ನೆನೆಗುದಿಗೆ ಬಿದ್ದಿರುವ ಮಾಸ್ಟರ್ ಪ್ಲಾನ್, ನಮೋ ನಗರದ ಕಳಪೆ ಕಾಮಗಾರಿ ಹಾಗೂ ಮೂಲಸೌಕರ್ಯಗಳ ಕೊರತೆ, ಸರ್ಕಾರಿ ಕನ್ನಡ ಶಾಲೆಗಳ ದುಸ್ಥಿತಿ ಸೇರಿದಂತೆ ಜಿಲ್ಲೆಯ ಹಲವು ಅಭಿವೃದ್ಧಿ ಯೋಜನೆಗಳು ಭ್ರಷ್ಟಾಚಾರ ಮತ್ತು ಆಡಳಿತಾತ್ಮಕ ನಿರ್ಲಕ್ಷ್ಯದಿಂದ ಸ್ಥಗಿತಗೊಂಡಿರುವ ವಿಚಾರವನ್ನು ಮುಖ್ಯಮಂತ್ರಿಗಳ ಗಮನಕ್ಕೆ ತರಲಾಗಿದೆ ಎಂದು ಅವರು ಹೇಳಿದ್ದಾರೆ.
ಜಿಲ್ಲೆಯಲ್ಲಿ ವ್ಯಾಪಕವಾಗಿ ಹರಡಿರುವ ಭ್ರಷ್ಟಾಚಾರದ ಬಗ್ಗೆ ಸಾರ್ವಜನಿಕರಲ್ಲಿ ಅಸಮಾಧಾನ ವ್ಯಕ್ತವಾಗುತ್ತಿರುವುದನ್ನೂ ವಿವರಿಸಲಾಗಿದ್ದು, ಈ ಕುರಿತು ಸಮಗ್ರ ಮಾಹಿತಿ ಪಡೆದು ತಪ್ಪಿತಸ್ಥರ ವಿರುದ್ಧ ಕಾನೂನುಬದ್ಧ ಹಾಗೂ ಕಠಿಣ ಕ್ರಮ ಕೈಗೊಳ್ಳುವುದಾಗಿ ಮುಖ್ಯಮಂತ್ರಿ ಭರವಸೆ ನೀಡಿದ್ದಾರೆ ಎಂದು ಪ್ರಕಟಣೆಯಲ್ಲಿ ಉಲ್ಲೇಖಿಸಲಾಗಿದೆ.
ಉತ್ತರ ಕರ್ನಾಟಕದ ಜನರ ಸಮಸ್ಯೆಗಳನ್ನು ಆಲಿಸಿ, ಅವುಗಳ ಶೀಘ್ರ ಪರಿಹಾರಕ್ಕೆ ಸಕಾರಾತ್ಮಕ ಭರವಸೆ ನೀಡಿದ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರಿಗೆ ರಾಘವ್ ಅಣ್ಣಿಗೇರಿ ಕೃತಜ್ಞತೆ ಸಲ್ಲಿಸಿದ್ದಾರೆ.
ಇದೇ ಸಂದರ್ಭದಲ್ಲಿ, ಮುಂಬರುವ ವಿಧಾನಮಂಡಲ ಅಧಿವೇಶನದಲ್ಲಿ ಎಲ್ಲ ಜನಪ್ರತಿನಿಧಿಗಳು ಪಕ್ಷಾತೀತವಾಗಿ ಜನಸಮಸ್ಯೆಗಳಿಗೆ ಆದ್ಯತೆ ನೀಡಿ, ಅರ್ಥಪೂರ್ಣ ಚರ್ಚೆ ನಡೆಸಿ ಶಾಶ್ವತ ಪರಿಹಾರಕ್ಕೆ ಮುಂದಾಗಬೇಕು. ಸದನದಲ್ಲಿ ಅನಗತ್ಯ ಗದ್ದಲ ಮತ್ತು ರಾಜಕೀಯ ಆರೋಪ-ಪ್ರತ್ಯಾರೋಪಗಳಿಗೆ ಅವಕಾಶ ನೀಡದೆ, ಸಾರ್ವಜನಿಕರ ತೆರಿಗೆ ಹಣದಿಂದ ನಡೆಯುವ ಅಧಿವೇಶನವನ್ನು ಜನಪರ ನಿರ್ಣಯಗಳು ಹಾಗೂ ಅಭಿವೃದ್ಧಿ ಕಾರ್ಯಗಳಿಗೆ ಬಳಸಿಕೊಳ್ಳಬೇಕು ಎಂದು ಅವರು ಆಗ್ರಹಿಸಿದ್ದಾರೆ.