
ವಿಜಯಪುರ, ಜು. 30: ಬಹುನಿರೀಕ್ಷಿತ ವಿಜಯಪುರ ವಿಮಾನ ನಿಲ್ದಾಣ ಕಾರ್ಯಾರಂಭಕ್ಕೆ ಇದ್ದ ಪ್ರಮುಖ ಕಾನೂನು ತೊಡಕು ನಿವಾರಣೆಯಾಗಿದ್ದು, ಸುಪ್ರೀಂಕೋರ್ಟ್ ನೀಡಿರುವ ಮಹತ್ವದ ತೀರ್ಪಿನಿಂದ ಯೋಜನೆಗೆ ಹೊಸ ಚೈತನ್ಯ ಸಿಕ್ಕಿದೆ. ಪರಿಸರ ಸಂಬಂಧಿತ ಅಂತಿಮ ಅನುಮತಿ ನಿರೀಕ್ಷೆಯಂತೆ ದೊರೆತರೆ ಮುಂದಿನ ಮೂರು ತಿಂಗಳೊಳಗೆ ವಿಜಯಪುರ ವಿಮಾನ ನಿಲ್ದಾಣವನ್ನು ಸಾರ್ವಜನಿಕ ಸೇವೆಗೆ ಸಮರ್ಪಿಸುವ ವಿಶ್ವಾಸವಿದೆ ಎಂದು ರಾಜ್ಯದ ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಹಾಗೂ ಮೂಲಸೌಕರ್ಯ ಅಭಿವೃದ್ಧಿ ಸಚಿವ ಎಂ.ಬಿ. ಪಾಟೀಲ ತಿಳಿಸಿದ್ದಾರೆ.
ಸುಪ್ರೀಂಕೋರ್ಟ್‍ನ ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್, ನ್ಯಾಯಮೂರ್ತಿ ಜಯಮಾಲ್ಯ ಬಾಗ್ಚಿ ಹಾಗೂ ನ್ಯಾಯಮೂರ್ತಿ ವಿಪುಲ್ ಎಂ. ಪಾಂಚೋಲಿ ಅವರನ್ನೊಳಗೊಂಡ ತ್ರಿಸದಸ್ಯ ಪೀಠ ಬುಧವಾರ ನೀಡಿದ ಅಂತಿಮ ತೀರ್ಪಿನಲ್ಲಿ, ಪರಿಸರ ಅನುಮತಿ ಬಾಕಿ ಇರುವ ಯೋಜನೆಗಳ ಕುರಿತು ಮಹತ್ವದ ಸ್ಪಷ್ಟನೆ ನೀಡಿದೆ. ಈ ತೀರ್ಪಿನ ಪರಿಣಾಮ ವಿಜಯಪುರ ವಿಮಾನ ನಿಲ್ದಾಣ ಯೋಜನೆಗೆ ಇದ್ದ ಕಾನೂನು ಅಡೆತಡೆ ದೂರವಾಗಿದ್ದು, ಮುಂದಿನ ಆಡಳಿತಾತ್ಮಕ ಪ್ರಕ್ರಿಯೆಗೆ ದಾರಿ ಸುಗಮವಾಗಿದೆ.
ಈ ಕುರಿತು ಬೆಃಗಳೂರಿನಲ್ಲಿ ಪ್ರತಿಕ್ರಿಯಿಸಿದ ಸಚಿವ ಎಂ.ಬಿ. ಪಾಟೀಲ, “ವಿಜಯಪುರ ವಿಮಾನ ನಿಲ್ದಾಣವು ಉತ್ತರ ಕರ್ನಾಟಕದ ಬಹುದಿನಗಳ ಕನಸಿನ ಯೋಜನೆ. ಸುಪ್ರೀಂಕೋರ್ಟ್‍ನ ಇಂದಿನ ತೀರ್ಪು ಯೋಜನೆಗೆ ಹೊಸ ಜೀವ ತುಂಬಿದೆ. ಪರಿಸರ ಅನುಮತಿ ಸಿಕ್ಕ ತಕ್ಷಣ ನಾಗರಿಕ ವಿಮಾನಯಾನ ಮಹಾನಿರ್ದೇಶಕರ (ಡಿಜಿಸಿಎ) ತಂಡ ಸ್ಥಳ ಪರಿಶೀಲನೆ ನಡೆಸಲಿದ್ದು, ಎಲ್ಲ ಪ್ರಕ್ರಿಯೆಗಳು ಪೂರ್ಣಗೊಂಡರೆ ಮೂರು ತಿಂಗಳೊಳಗೆ ವಿಮಾನ ಹಾರಾಟ ಆರಂಭಿಸಲು ಸಾಧ್ಯವಾಗಲಿದೆ” ಎಂದು ಹೇಳಿದರು.
2025ರ ಮೇ 16ರಂದು ಸುಪ್ರೀಂಕೋರ್ಟ್, ಪರಿಸರ ಅನುಮೋದನೆ ಪಡೆಯದೇ ಜಾರಿಗೊಂಡಿರುವ ಯೋಜನೆಗಳ ವಿರುದ್ಧ ಕಠಿಣ ನಿಲುವು ತಳೆದಿದ್ದರಿಂದ ವಿಜಯಪುರ ವಿಮಾನ ನಿಲ್ದಾಣ ಯೋಜನೆಯೂ ಸಂಕಷ್ಟಕ್ಕೆ ಸಿಲುಕಿತ್ತು. ನಂತರ ರಾಜ್ಯ ಸರ್ಕಾರ ಪರಿಸರ ಅನುಮತಿ ಪಡೆಯಲು ಅಗತ್ಯ ಅರ್ಜಿಗಳನ್ನು ಸಲ್ಲಿಸಿದ್ದು, ಈ ವಿಷಯದಲ್ಲಿ ರಾಜ್ಯದ ಪರವಾಗಿ ಕೇಂದ್ರ ಸರ್ಕಾರದ ಸಾಲಿಸಿಟರ್ ಜನರಲ್ ತುಷಾರ್ ಮೆಹತಾ, ಹಿರಿಯ ವಕೀಲರಾದ ಕಪಿಲ್ ಸಿಬಲ್, ದೇವದತ್ತ ಕಾಮತ್, ಅಡ್ವೊಕೇಟ್ ಜನರಲ್ ಶಶಿಕಿರಣ್ ಶೆಟ್ಟಿ ಹಾಗೂ ವಕೀಲ ನಿಶಾಂತ್ ಪಾಟೀಲ್ ಪರಿಣಾಮಕಾರಿ ವಾದ ಮಂಡಿಸಿದ್ದರು. ಅವರ ಸೇವೆಯನ್ನು ಸಚಿವರು ಶ್ಲಾಘಿಸಿ ಕೃತಜ್ಞತೆ ಸಲ್ಲಿಸಿದರು.
ಸುಪ್ರೀಂಕೋರ್ಟ್, ಪರಿಸರ ಅನುಮತಿ ಸಂಬಂಧ ಸಲ್ಲಿಕೆಯಾಗಿರುವ ಅರ್ಜಿಗಳನ್ನು ಶೀಘ್ರ ವಿಲೇವಾರಿ ಮಾಡುವಂತೆ ಕೇಂದ್ರ ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವಾಲಯಕ್ಕೆ ನಿರ್ದೇಶನ ನೀಡಿದೆ. ಇದರೊಂದಿಗೆ ವಿಜಯಪುರ ವಿಮಾನ ನಿಲ್ದಾಣಕ್ಕೆ ಅಗತ್ಯ ಪರಿಸರ ಅನುಮೋದನೆ ಪಡೆಯುವ ಪ್ರಕ್ರಿಯೆ ವೇಗಗೊಳ್ಳಲಿದೆ.
ಪರಿಸರ ಅನುಮತಿ ದೊರೆತ ಬಳಿಕ ಡಿಜಿಸಿಎ ಅಧಿಕಾರಿಗಳು ವಿಮಾನ ನಿಲ್ದಾಣದ ರನ್‍ವೇ, ಸುರಕ್ಷತಾ ವ್ಯವಸ್ಥೆ, ತಾಂತ್ರಿಕ ಸೌಲಭ್ಯಗಳು ಹಾಗೂ ಇತರ ಮೂಲಸೌಕರ್ಯಗಳನ್ನು ಪರಿಶೀಲಿಸಲಿದ್ದಾರೆ. ಪರಿಶೀಲನೆಯಲ್ಲಿ ಎಲ್ಲ ಮಾನದಂಡಗಳು ಪೂರೈಸಿದರೆ ವಿಮಾನ ನಿಲ್ದಾಣಕ್ಕೆ ಕಾರ್ಯಾಚರಣೆಯ ಅಂತಿಮ ಅನುಮತಿ ನೀಡಲಾಗುತ್ತದೆ.
?614 ಕೋಟಿಗೂ ಅಧಿಕ ವೆಚ್ಚದಲ್ಲಿ ನಿರ್ಮಾಣಗೊಂಡಿರುವ ವಿಜಯಪುರ ವಿಮಾನ ನಿಲ್ದಾಣ ಕಾರ್ಯಾರಂಭವಾದರೆ ವಿಜಯಪುರ ಸೇರಿದಂತೆ ಕಿತ್ತೂರು ಕರ್ನಾಟಕ ಹಾಗೂ ಉತ್ತರ ಕರ್ನಾಟಕದ ಜಿಲ್ಲೆಗಳಿಗೆ ನೇರ ವಿಮಾನ ಸಂಪರ್ಕ ಲಭ್ಯವಾಗಲಿದೆ. ಕೈಗಾರಿಕೆ, ಪ್ರವಾಸೋದ್ಯಮ, ಕೃಷಿ ಉತ್ಪನ್ನಗಳ ಸಾಗಣೆ, ವ್ಯಾಪಾರ ಮತ್ತು ಹೂಡಿಕೆ ವಲಯಗಳಿಗೆ ಹೊಸ ಉತ್ತೇಜನ ದೊರೆಯಲಿದ್ದು, ಪ್ರದೇಶದ ಸಮಗ್ರ ಆರ್ಥಿಕ ಅಭಿವೃದ್ಧಿಗೆ ಮಹತ್ವದ ಮೈಲಿಗಲ್ಲಾಗಲಿದೆ.






























