Home ಮುಖಪುಟ ಸುದ್ದಿ ನಕಲಿ ಔಷಧಿ ದಂಧೆ ನಗರದ ಮೂರು ಫಾರ್ಮಾಗಳ ಮೇಲೆ ಎಸ್‌ಐಟಿ ದಾಳಿ

ನಕಲಿ ಔಷಧಿ ದಂಧೆ ನಗರದ ಮೂರು ಫಾರ್ಮಾಗಳ ಮೇಲೆ ಎಸ್‌ಐಟಿ ದಾಳಿ

ಬೆಂಗಳೂರು,ಅ.೬-ನಕಲಿ ಔಷಧಿ ದಂಧೆ ಪ್ರಕರಣದ ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ತಂಡ (ಎಸ್ ಐಟಿ) ಅಧಿಕಾರಿಗಳು, ಆರೋಪಿಗಳಿಂದ ಹೆಚ್ಚಿನ ಪ್ರಮಾಣದಲ್ಲಿ ನಕಲಿ ಔಷಧಿಗಳನ್ನು ಖರೀದಿಸಿ ಮಾರಾಟ ಮಾಡಿರುವ ಆರೋಪದ ಹಿನ್ನೆಲೆಯಲ್ಲಿ ನಗರದ ಮೂರು ಫಾರ್ಮಾಗಳ ಮೇಲೆ ದಾಳಿ ನಡೆಸಿದ್ದಾರೆ.


ಪ್ರಕರಣದ ಪ್ರಮುಖ ಆರೋಪಿಗಳಾದ ಪ್ರಶಾಂತ್ ಹಾಗೂ ಡಿಸ್ಟ್ರಿಬ್ಯೂಟರ್ ವಿರೇಶ್ ಅವರ ವಿಚಾರಣೆ ವೇಳೆ ಹಲವು ಮಹತ್ವದ ಮಾಹಿತಿ ಬಹಿರಂಗವಾಗಿದೆ ಎನ್ನಲಾಗಿದೆ. ಇವರಿಂದ ಹೆಚ್ಚಿನ ಪ್ರಮಾಣದಲ್ಲಿ ನಕಲಿ ಔಷಧಿಗಳನ್ನು ಖರೀದಿಸಿ ಮಾರಾಟ ಮಾಡುತ್ತಿದ್ದ ಫಾರ್ಮಾಗಳನ್ನು ಗುರುತಿಸಿದ ಎಸ್‌ಐಟಿ ಅಧಿಕಾರಿಗಳು, ಅಲ್ಲಿಗೆ ದಾಳಿ ನಡೆಸಿ ನಕಲಿ ಔಷಧಿಗಳನ್ನು ವಶಕ್ಕೆ ಪಡೆದಿದ್ದಾರೆ.


ಕಳೆದ ವರ್ಷ ಏಪ್ರಿಲ್‌ನಿಂದ ಇಲ್ಲಿಯವರೆಗೆ ಆರೋಪಿಗಳಿಂದ ನಕಲಿ ಔಷಧಿಗಳನ್ನು ಖರೀದಿಸಿ ಮಾರಾಟ ಮಾಡಿರುವ ಆರೋಪದ ಮೇರೆಗೆ ರಾಜರಾಜೇಶ್ವರಿ ನಗರದಲ್ಲಿರುವ ಆರ್‌ಆರ್ ಫಾರ್ಮಾ, ಚಾಮರಾಜಪೇಟೆಯ ೨೩೬೫ ಎಲ್‌ಎಲ್‌ಪಿ ಫಾರ್ಮಾ ಹಾಗೂ ತಲಘಟ್ಟಪುರದಲ್ಲಿರುವ ಪಾಟೇಲ್ ಫಾರ್ಮಾ ಮೇಲೆ ಎಸ್‌ಐಟಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ.


ದಾಳಿ ವೇಳೆ ಪತ್ತೆಯಾದ ನಕಲಿ ಔಷಧಿಗಳನ್ನು ಅಧಿಕಾರಿಗಳು ಸೀಜ್ ಮಾಡಿದ್ದಾರೆ. ಅಲ್ಲದೆ, ಫಾರ್ಮಾಗಳ ಮಾಲೀಕರಿಗೆ ನೋಟಿಸ್ ಜಾರಿ ಮಾಡಿ ವಿಚಾರಣೆಯನ್ನೂ ನಡೆಸಿದ್ದಾರೆ.


ಆರೋಪಿಗಳಿಂದ ಯಾವಾಗಿನಿಂದ ನಕಲಿ ಮಾತ್ರೆಗಳನ್ನು ಖರೀದಿಸಲಾಗುತ್ತಿತ್ತು, ಅವುಗಳನ್ನು ಎಲ್ಲಿ ಹಾಗೂ ಹೇಗೆ ಮಾರಾಟ ಮಾಡಲಾಗುತ್ತಿತ್ತು ಮತ್ತು ಯಾವೆಲ್ಲಾ ಆಸ್ಪತ್ರೆಗಳಿಗೆ ಫಾರ್ಮಾಗಳ ಮೂಲಕ ನಕಲಿ ಔಷಧಿಗಳನ್ನು ಸರಬರಾಜು ಮಾಡಲಾಗಿದೆ ಎಂಬ ಬಗ್ಗೆ ಎಸ್‌ಐಟಿ ಅಧಿಕಾರಿಗಳು ಫಾರ್ಮಾ ಮಾಲೀಕರಿಂದ ಮಾಹಿತಿ ಪಡೆದುಕೊಂಡಿದ್ದಾರೆ.


ಪ್ರಕರಣದ ತನಿಖೆ ಮುಂದುವರಿದಿದ್ದು, ನಕಲಿ ಔಷಧಿಗಳ ಜಾಲದಲ್ಲಿ ಇನ್ನಷ್ಟು ಫಾರ್ಮಾಗಳು ಅಥವಾ ವ್ಯಕ್ತಿಗಳು ಭಾಗಿಯಾಗಿದ್ದಾರೆಯೇ ಎಂಬುದರ ಬಗ್ಗೆಯೂ ಅಧಿಕಾರಿಗಳು ಪರಿಶೀಲನೆ ನಡೆಸುತ್ತಿದ್ದಾರೆ.