
ಬೆಂಗಳೂರು,ಅ.೨೨-ವಿಜಯದಶಮಿ ಹಬ್ಬದ ಸಂಭ್ರಮದ ವೇಳೆ ಪುಲಿಕೇಶಿನಗರದಲ್ಲಿ ಎರಡು ದಿನಗಳ ಹಿಂದೆ ನಡೆದ ಸ್ಫೋಟದಲ್ಲಿ ಸುಧಾರಿತ ಸ್ಪೋಟಕ ಹಾಗೂ ಬ್ಯಾಟರಿ ಬಳಕೆಯ ಶಂಕೆಯ ಹಿನ್ನೆಲೆಯಲ್ಲಿ ಪ್ರಕರಣೆ ತನಿಖೆಯನ್ನು ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್ ಐಎ) ಕೈಗೆತ್ತಿಕೊಳ್ಳಲಿದೆ.
ಕಳೆದ ಅ. ೨೦ ರಂದು ನಿರ್ಮಾಣ ಹಂತದ ಕಟ್ಟಡದಲ್ಲಿ ನಡೆದ ಸ್ಫೋಟ ಪ್ರಕರಣದ ತನಿಖೆಯನ್ನು ತೀವ್ರಗೊಂಡಿರುವ ಬೆನ್ನಲ್ಲೇ ಸ್ಪೋಟ ಸಂಬಂಧಿಸಿದಂತೆ ಮಾಹಿತಿಯನ್ನು ಪಡೆದಿರುವ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್ ಐಎ) ತನಿಖಾ ವರದಿಯನ್ನು ಪಡೆದ ಬಳಿಕ ಪರಿಶೀಲನೆ ತನಿಖೆಯನ್ನು ಎಲ್ಲಾ ಆಯಾಮಗಳಲ್ಲಿ ನಡೆಸಲಿದೆ.
ಪ್ರಾಥಮಿಕ ತನಿಖೆಯಲ್ಲಿ, ಸ್ಫೋಟಕ್ಕೆ ಸುಧಾರಿತ ಸ್ಫೋಟಕ ಸಾಧನ (ಐಇಡಿ) ಬಳಸಲಾಗಿದೆಯೇ ಎಂಬ ಅನುಮಾನ ವ್ಯಕ್ತವಾಗಿದ್ದು, ಇಲ್ಲಿಯವರೆಗಿನ ತನಿಖೆಯ ವರದಿಯನ್ನು ಎನ್ ಐಎ ಅಧಿಕಾರಿಗಳು ಪಡೆದುಕೊಳ್ಳಲಿದ್ದಾರೆ.
ಸ್ಥಳ ಪರಿಶೀಲನೆ ಹಾಗೂ ವಿಧಿವಿಜ್ಞಾನ ಪ್ರಯೋಗಾಲಯದ (ಎಫ್ ಎಸ್ ಎಲ್ ) ವರದಿಯನ್ನು ಪರಿಶೀಲಿಸಿದ ಬಳಿಕ ಪ್ರಕರಣದ ತನಿಖೆಯಲ್ಲಿ ಎನ್ಐಎ ಮುಂದಿನ ಕ್ರಮ ಕೈಗೊಳ್ಳುವ ಸಾಧ್ಯತೆಯಿದೆ.
ಸ್ಫೋಟದ ಬಗ್ಗೆ ಈಗಾಗಲೇ ಮಾಹಿತಿ ಪಡೆದಿರುವ ಎನ್ಐಎ ಅಧಿಕಾರಿಗಳು, ಪ್ರಕರಣಕ್ಕೆ ಸಂಬಂಧಿಸಿದ ತನಿಖಾ ವರದಿಗಳನ್ನು ಕೇಳಿದ್ದಾರೆ.
ಸ್ಥಳ ಪರಿಶೀಲನೆ ನಡೆಸುವ ಸಾಧ್ಯತೆಯೂ ಇದ್ದು, ವಿಧಿವಿಜ್ಞಾನ ಪ್ರಯೋಗಾಲಯದ ವರದಿಯನ್ನು ಕೂಡ ಪರಿಶೀಲಿಸಲಿದ್ದಾರೆ. ಸ್ಥಳ ಪರಿಶೀಲನೆ ಮತ್ತು ಲಭ್ಯವಿರುವ ಸಾಕ್ಷ್ಯಗಳನ್ನು ಆಧರಿಸಿ ಮುಂದಿನ ನಿರ್ಧಾರ ಕೈಗೊಳ್ಳುವ ಸಾಧ್ಯತೆಯಿದೆ.
ಸ್ಫೋಟದ ಸ್ವರೂಪ ಮತ್ತು ಉಗ್ರಗಾಮಿ ಕೃತ್ಯದ ಆಯಾಮಗಳನ್ನು ಗಮನದಲ್ಲಿಟ್ಟುಕೊಂಡು ಎನ್ಐಎ ಈಗಾಗಲೇ ಸ್ಥಳೀಯ ಪೊಲೀಸರು ಹಾಗೂ ಸೀನ್ ಆಫ್ ಕ್ರೈಮ್ ಆಫೀಸರ್ಸ್ ಸೋಕೋ ಸಿದ್ಧಪಡಿಸಿದ ಪ್ರಾಥಮಿಕ ತನಿಖಾ ದಾಖಲೆಗಳನ್ನು ಪಡೆದುಕೊಂಡಿದೆ.
ಮೂರು ಬ್ಯಾಟರಿಗಳ ಬಳಕೆ:
ನಿರ್ಮಾಣ ಹಂತದ ಕಟ್ಟಡದಲ್ಲಿ ನಡೆದ ಸ್ಫೋಟದಲ್ಲಿ ಮೂರು ಬ್ಯಾಟರಿಗಳನ್ನು ಬಳಸಿರುವುದು ಸ್ಫೋಟಕ ಸಾಧನ ಬಳಕೆಯು ಪ್ರಾಥಮಿಕ ತನಿಖೆಯ ವೇಳೆ ವ್ಯಕ್ತವಾಗಿದೆ.
ಸ್ಫೋಟದ ನಿಖರ ಸ್ವರೂಪ ಮತ್ತು ಬಳಸಲಾಗಿರುವ ವಸ್ತುಗಳ ಬಗ್ಗೆ ವಿಧಿವಿಜ್ಞಾನ ವರದಿಯಿಂದ ಹೆಚ್ಚಿನ ಮಾಹಿತಿ ಲಭ್ಯವಾಗಬೇಕಿದೆ.
ಈ ಪ್ರಕರಣದ ತನಿಖೆಯನ್ನು ಎಟಿಸಿ ಹಾಗೂ ಸ್ಥಳೀಯ ಪೊಲೀಸರು ಮುಂದುವರಿಸಿದ್ದಾರೆ. ಪೊಲೀಸರು ಈಗಾಗಲೇ ಎನ್ಐಎಗೆ ಅನಾಮಧೇಯ ಕರೆ ಬಂದಿದ್ದ ವಿಚಾರವನ್ನೂ ತಿಳಿಸಿದ್ದಾರೆ.
ಸೆಕ್ಯುರಿಟಿ ಗಾರ್ಡ್ ಕೈವಾಡ:
ಸ್ಫೋಟ ಸಂಭವಿಸಿದ ಸ್ಥಳದಲ್ಲಿ ಸೋಕೋ ತಂಡ ಹಾಗೂ ಎಫ್ಎಸ್ಎಲ್ ನಡೆಸಿದ ಪರಿಶೀಲನೆಗೆ ಸಂಬಂಧಿಸಿದ ವರದಿಗಳನ್ನು ಎನ್ಐಎಗೆ ನೀಡಲಾಗಿದೆ.
ಪೊಲೀಸರ ಪ್ರಾಥಮಿಕ ತನಿಖೆಯ ಪ್ರಕಾರ, ಕಟ್ಟಡದೊಳಗೆ ಪಾರ್ಸೆಲ್ ಇಡಲು ಸೆಕ್ಯುರಿಟಿ ಗಾರ್ಡ್ ಮುಂದಾಗಿದ್ದ. ತನಗೆ ಅನಾಮಧೇಯ ಕರೆ ಬಂದಿದ್ದು, ಪಾರ್ಸೆಲ್ ಅನ್ನು ಕಟ್ಟಡದ ಒಳಗೆ ಇಡುವಂತೆ ಸೂಚಿಸಲಾಗಿತ್ತು ಎಂದು ಸೆಕ್ಯುರಿಟಿ ಗಾರ್ಡ್ ಪೊಲೀಸರಿಗೆ ಮಾಹಿತಿ ನೀಡಿದ್ದಾನೆ.
ಬಳಿಕ ಸೆಕ್ಯುರಿಟಿ ಗಾರ್ಡ್ ಮತ್ತು ಪೇಂಟರ್ ಇಬ್ಬರೂ ಸೇರಿ ಪಾರ್ಸೆಲ್ ತೆರೆಯಲು ಮುಂದಾದಾಗ ಸ್ಫೋಟ ಸಂಭವಿಸಿದೆ ಎಂದು ಇಬ್ಬರೂ ತಿಳಿಸಿದ್ದಾರೆ. ಅನಾಮಧೇಯ ಕರೆ, ಪಾರ್ಸೆಲ್ನ ಮೂಲ ಹಾಗೂ ಸ್ಫೋಟಕ್ಕೆ ಕಾರಣವಾದ ಅಂಶಗಳ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಪ್ರಕರಣದ ಸೂಕ್ಷ್ಮತೆ ಹಿನ್ನೆಲೆಯಲ್ಲಿ ಎಟಿಸಿ ಹಾಗೂ ಸ್ಥಳೀಯ ಪೊಲೀಸರು ತನಿಖೆ ತೀವ್ರಗೊಳಿಸಿದ್ದು, ಎನ್ಐಎ ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿ ಲಭ್ಯವಿರುವ ಸಾಕ್ಷ್ಯಗಳು ಮತ್ತು ವರದಿಗಳನ್ನು ಪರಿಶೀಲಿಸಿದ ಬಳಿಕ ಮುಂದಿನ ಕ್ರಮದ ಬಗ್ಗೆ ನಿರ್ಧರಿಸುವ ನಿರೀಕ್ಷೆಯಿದೆ.
ಅನುಮಾನಾಸ್ಪದ ಸ್ಫೋಟ:
ಕಳೆದ ಅ.೨೦ರಂದು ಮಧ್ಯಾಹ್ನ ಸುಮಾರು ೨.೩೦ರ ವೇಳೆಗೆ ಪುಲಿಕೇಶಿನಗರದ ನಿರ್ಮಾಣ ಹಂತದಲ್ಲಿದ್ದ ಐದು ಅಂತಸ್ತಿನ ಕಟ್ಟಡದಲ್ಲಿ ಅನುಮಾನಾಸ್ಪದ ಸ್ಫೋಟ ಸಂಭವಿಸಿತ್ತು. ಬ್ಯಾಟರಿ ಆನ್ ಮಾಡುವ ವೇಳೆ ಸ್ಫೋಟ ಸಂಭವಿಸಿದೆ ಎನ್ನಲಾಗಿದ್ದು, ಅಲ್ಲಾವುದ್ದೀನ್ ಮತ್ತು ನರೇಶ್ ಎಂಬ ಇಬ್ಬರು ಕಾರ್ಮಿಕರು ಗಾಯಗೊಂಡಿದ್ದರು.
ಘಟನೆಗೆ ಸಂಬಂಧಿಸಿದಂತೆ ಪುಲಿಕೇಶಿನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಎಫ್ಎಸ್ಎಲ್ ತಜ್ಞರು, ಬಾಂಬ್ ನಿಷ್ಕ್ರಿಯ ದಳ ಹಾಗೂ ಭಯೋತ್ಪಾದನಾ ನಿಗ್ರಹ ದಳದ (ಎಟಿಸಿ) ಸಿಬ್ಬಂದಿ ಸ್ಥಳ ಪರಿಶೀಲನೆ ನಡೆಸಿದ್ದರು. ಸ್ಫೋಟದ ಮಾದರಿಗಳನ್ನು ಸಂಗ್ರಹಿಸಿ, ಪ್ರಕರಣದ ತನಿಖೆಗಾಗಿ ವಿಶೇಷ ತಂಡಗಳನ್ನೂ ರಚಿಸಲಾಗಿತ್ತು. ಆರಂಭದಲ್ಲಿ ಬ್ಯಾಟರಿ ಸ್ಫೋಟದ ಶಂಕೆ ವ್ಯಕ್ತವಾಗಿದ್ದರೂ, ಬಳಿಕ ಐಇಡಿ ಬಳಕೆಯಾಗಿರಬಹುದೇ ಎಂಬ ಅನುಮಾನ ವ್ಯಕ್ತವಾಗಿತ್ತು.
ಅನಾಮಧೇಯ ಕರೆ:
ನಿರ್ಮಾಣ ಹಂತದ ಕಟ್ಟಡದಲ್ಲಿದ್ದ ಭದ್ರತಾ ಸಿಬ್ಬಂದಿಗೆ ಅನಾಮಧೇಯ ವ್ಯಕ್ತಿಯೊಬ್ಬ ಕರೆ ಮಾಡಿ, ಕಟ್ಟಡದ ಒಳಗೆ ಪಾರ್ಸೆಲ್ ಇಡುವಂತೆ ಸೂಚಿಸಿದ್ದ ಎನ್ನಲಾಗಿದೆ. ಈ ಪಾರ್ಸೆಲ್ ಬಾಕ್ಸ್ ತೆರೆಯುವಾಗಲೇ ಸ್ಫೋಟ ಸಂಭವಿಸಿದ್ದು, ಕರೆಯ ಮೂಲದ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.


























