Home Lead News ವಕೀಲನಿಗೆ ಗುಂಡಿಟ್ಟು ಕೊಲೆ

ವಕೀಲನಿಗೆ ಗುಂಡಿಟ್ಟು ಕೊಲೆ

ಬೆಂಗಳೂರು, ಅ.೧೯- ಸ್ವಿಗ್ಗಿ ಡೆಲಿವರಿ ಬೈಕ್‌ನಲ್ಲಿ ಬಂದಿದ್ದ ಹಂತಕರು ಮನೆಯ ಬಾಗಿಲು ಬಡಿದು ಹೊರಗೆ ಕರೆದ ವಕೀಲರೊಬ್ಬರ ಹಣೆಗೆ ಗುಂಡಿಕ್ಕಿ ಕೊಲೆ ಮಾಡಿರುವ ನಗರವನ್ನು ಬೆಚ್ಚಿ ಬೀಳಿಸಿದ ಕೃತ್ಯ ನಿನ್ನೆ ಮಧ್ಯರಾತ್ರಿ ವೈಟ್‌ಫೀಲ್ಡ್ ಬಳಿ ನಡೆದಿದೆ.


ಪಟ್ಟಂದೂರು ಅಗ್ರಹಾರದ ವಕೀಲ ಮಂಜುನಾಥ್ (೪೨) ಕೊಲೆಯಾದವರು, ಕೃತ್ಯ ನಡೆಸಿದ ಇಬ್ಬರು ಹಂತಕರ ಬಂಧನಕ್ಕೆ ನಾಲ್ಕು ವಿಶೇಷ ಪೊಲೀಸ್ ತಂಡಗಳನ್ನು ರಚಿಸಿ ಕಾರ್ಯಾಚರಣೆ ಕೈಗೊಳ್ಳಲಾಗಿದೆ ಎಂದು ವೈಟ್ ಫೀಲ್ಡ್ ಡಿಸಿಪಿ ಸೈದುಲು ಅಡಾವತ್ ತಿಳಿಸಿದ್ದಾರೆ.


ಕೊಲೆಯಾದ ಮಂಜುನಾಥ್ ಅವರು ಪಟ್ಟಂದೂರು ಅಗ್ರಹಾರದಲ್ಲಿ ಹಲವು ಎಕರೆ ಜಮೀನು ಹೊಂದಿದ್ದು, ಅಲ್ಲಿ ಸುಮಾರು ೫೦ ಲೇಬರ್ ಶೆಡ್‌ಗಳನ್ನು ನಿರ್ಮಿಸಿ ಹೊರರಾಜ್ಯಗಳಿಂದ ಬಂದ ಕಾರ್ಮಿಕರಿಗೆ ಬಾಡಿಗೆಗೆ ನೀಡಿದ್ದಾರೆ.


ಈ ಪೈಕಿ ಒಂದು ಶೆಡ್‌ನಲ್ಲಿ ವಾಸವಿದ್ದ ಬಾಡಿಗೆದಾರನೊಬ್ಬ ಕಳೆದ ಮೂರು ತಿಂಗಳಿಂದ ಬಾಡಿಗೆ ಹಣ ಪಾವತಿಸಿರಲಿಲ್ಲ, ಬಾಡಿಗೆ ಹಣ ಕೇಳಲು ಮಂಜುನಾಥ್ ಹೋದಾಗ ಇಬ್ಬರ ನಡುವೆ ಮಾತಿನ ಚಕಮಕಿ ನಡೆದಿತ್ತು. ಬಾಡಿಗೆ ಪಾವತಿಸುವಂತೆ ತಾಕೀತು ಮಾಡಿ ಅವರು ವಾಪಸ್ ಬಂದಿದ್ದರು. ಇದರಿಂದ ಕೋಪಗೊಂಡಿದ್ದ ಬಾಡಿಗೆದಾರ ಕೊಲೆಗೆ ಸಂಚು ರೂಪಿಸಿದ್ದಾನೆ ಎಂದು ಶಂಕಿಸಲಾಗಿದೆ.


ಬಾಡಿಗೆ ಹಣ ನೀಡುವುದಾಗಿ ಹೇಳಿ ಮಂಜುನಾಥ್ ಅವರಿಗೆ ಮೊಬೈಲ್ ಕರೆ ಮಾಡಿದ್ದ ಆರೋಪಿ, ಮತ್ತೊಬ್ಬನೊಂದಿಗೆ ಮಧ್ಯರಾತ್ರಿ ೧೨ ಗಂಟೆ ಸುಮಾರಿಗೆ ಅವರ ಮನೆಗೆ ಬಂದಿದ್ದಾನೆ. ಮನೆಗೆ ಬಂದವರು ಕಾಲಿಂಗ್ ಬೆಲ್ ಒತ್ತಿದ್ದಾರೆ. ಒಳಗಿನಿಂದ ಯಾರೆಂದು ಮಂಜುನಾಥ್ ಕೇಳಿದಾಗ, ಬಾಡಿಗೆ ಹಣ ನೀಡಲು ಬಂದಿರುವುದಾಗಿ ಹೇಳಿದ್ದಾರೆ.


ಮಂಜುನಾಥ್ ಬಾಗಿಲು ತೆರೆಯುತ್ತಿದ್ದಂತೆ, ಒಬ್ಬ ಆರೋಪಿ ಹಣ ನೀಡುವಂತೆ ನಟಿಸಿದ್ದಾನೆ. ಈ ವೇಳೆ ಮತ್ತೊಬ್ಬ ಏಕಾಏಕಿ ಪಿಸ್ತೂಲ್‌ನಿಂದ ಗುಂಡು ಹಾರಿಸಿದ್ದಾನೆ. ಒಂದು ಗುಂಡು ಹಣೆಗೆ ಹಾಗೂ ಎರಡು ಗುಂಡುಗಳು ಎದೆಗೆ ತಗುಲಿದ್ದು, ಮಂಜುನಾಥ್ ಸ್ಥಳದಲ್ಲೇ ಕುಸಿದುಬಿದ್ದಿದ್ದಾರೆ.ತಕ್ಷಣವೇ ಆರೋಪಿಗಳು ಸ್ಥಳದಿಂದ ಪರಾರಿಯಾಗಿದ್ದಾರೆ.


ಗುಂಡಿನ ಶಬ್ದ ಕೇಳುತ್ತಿದ್ದಂತೆ ಮಂಜುನಾಥ್ ಅವರ ಪತ್ನಿ ಮನೆಯಿಂದ ಹೊರಗೆ ಬಂದು ರಕ್ತದ ಮಡುವಿನಲ್ಲಿ ಬಿದ್ದಿದ್ದ ಪತಿಯನ್ನು ಕಂಡು ನೆರೆಹೊರೆಯವರ ಸಹಾಯದಿಂದ ತಕ್ಷಣ ಮಣಿಪಾಲ್ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಆದರೆ, ಅಷ್ಟರಲ್ಲಾಗಲೇ ಮಂಜುನಾಥ್ ಮೃತಪಟ್ಟಿರುವುದಾಗಿ ವೈದ್ಯರು ತಿಳಿಸಿದ್ದಾರೆ.


ದುಬೆ ವಿರುದ್ಧ ಶಂಕೆ:


ಮೃತರ ಸಹೋದರ ಮುನಿರಾಜು ಮಾತನಾಡಿ, ಬಾಡಿಗೆದಾರ ಅಂಕಿತ್ ಕುಮಾರ್ ದುಬೆ ಎಂಬಾತ ತನ್ನ ಸ್ನೇಹಿತನೊಂದಿಗೆ ಬಂದು ಸಹೋದರನನ್ನು ಕೊಲೆ ಮಾಡಿರುವ ಶಂಕೆ ವ್ಯಕ್ತಪಡಿಸಿದ್ದಾರೆ.


ದೇವಸ್ಥಾನಕ್ಕೆ ತೆರಳಿ ರಾತ್ರಿ ಸುಮಾರು ೧೦.೩೦ಕ್ಕೆ ಮನೆಗೆ ಹಿಂದಿರುಗಿದ್ದೆವು. ಈ ವೇಳೆ ಅಂಕಿತ್ ಕುಮಾರ್ ದುಬೆ ಹಾಗೂ ಮತ್ತೊಬ್ಬ ವ್ಯಕ್ತಿ ಮೊಬೈಲ್ ಕರೆ ಮಾಡಿ ಬಾಡಿಗೆ ಹಣ ನೀಡುವುದಾಗಿ ತಿಳಿಸಿದ್ದರು. ಬಳಿಕ ಮತ್ತೆ ಕರೆ ಮಾಡಿದಾಗ ಸಹೋದರ ಕರೆ ಸ್ವೀಕರಿಸಿರಲಿಲ್ಲ. ನಂತರ ಮಧ್ಯರಾತ್ರಿ ಮನೆಗೆ ಬಂದ ಇಬ್ಬರಲ್ಲಿ ಒಬ್ಬ ಹಣ ನೀಡಿದಂತೆ ನಟಿಸಿದರೆ, ಮತ್ತೊಬ್ಬ ಹಿಂದಿನಿಂದ ಗುಂಡು ಹಾರಿಸಿದ್ದಾನೆ ಎಂದು ಮುನಿರಾಜು ತಿಳಿಸಿದ್ದಾರೆ.


ಡೆಲಿವರಿ ಬಾಯ್:


ಅಂಕಿತ್ ಕುಮಾರ್ ದುಬೆ ಡೆಲಿವರಿ ಬಾಯ್ ಆಗಿ ಕೆಲಸ ಮಾಡುತ್ತಿದ್ದಾನೆ ಎನ್ನಲಾಗಿದ್ದು, ಮತ್ತೊಬ್ಬ ಆರೋಪಿಯ ಗುರುತು ಇನ್ನೂ ಪತ್ತೆಯಾಗಿಲ್ಲ. ತಮ್ಮ ಕುಟುಂಬದಲ್ಲಿ ಐವರು ಸಹೋದರರಿದ್ದು, ಸುಮಾರು ೫೦ ಮನೆಗಳನ್ನು ಬಾಡಿಗೆಗೆ ನೀಡಲಾಗಿದೆ. ಶಿವು ಎಂಬಾತ ಬಾಡಿಗೆ ಹಣ ಸಂಗ್ರಹಿಸುವ ಮತ್ತು ಪಾವತಿಸುವ ಕೆಲಸ ನೋಡಿಕೊಳ್ಳುತ್ತಿದ್ದ. ಆತ ಊರಿಗೆ ತೆರಳಿದ್ದರಿಂದ ಬಾಡಿಗೆ ಹಣವನ್ನು ಮನೆಗೆ ತಂದು ನೀಡುವುದಾಗಿ ಹೇಳಿ ಆರೋಪಿಗಳು ಬಂದಿದ್ದರು ಎಂದು ಮುನಿರಾಜು ಮಾಹಿತಿ ನೀಡಿದ್ದಾರೆ.


ಸಿಸಿಟಿವಿ ದೃಶ್ಯ ಪರಿಶೀಲನೆ:


ಘಟನೆ ಕುರಿತು ಮಾಹಿತಿ ತಿಳಿದ ತಕ್ಷಣ ವೈಟ್‌ಫೀಲ್ಡ್ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಮನೆಯ ಸಿಸಿಟಿವಿ ಕ್ಯಾಮೆರಾಗಳಲ್ಲಿ ಘಟನೆಯ ದೃಶ್ಯಗಳು ಸೆರೆಯಾಗಿವೆ ಎಂದು ಮೃತರ ಸಹೋದರ ತಿಳಿಸಿದ್ದಾರೆ.


ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದಾರೆ. ಬಾಡಿಗೆ ಹಣದ ವಿಚಾರದ ಜೊತೆಗೆ ಜಮೀನು ಸಂಬಂಧಿತ ವ್ಯಾಜ್ಯವೂ ಕೊಲೆಗೆ ಕಾರಣವಾಗಿದೆಯೇ ಎಂಬ ಅನುಮಾನ ವ್ಯಕ್ತವಾಗಿದ್ದು, ವೈಟ್‌ಫೀಲ್ಡ್ ಉಪವಿಭಾಗದ ಪೊಲೀಸರು ವಿವಿಧ ಆಯಾಮಗಳಲ್ಲಿ ತನಿಖೆ ಮುಂದುವರಿಸಿದ್ದಾರೆ.


೪ ವಿಶೇಷ ತಂಡ ರಚನೆ:


ಘಟನೆ ನಡೆದ ಸ್ಥಳಕ್ಕೆ ವೈಟ್‌ಫೀಲ್ಡ್ ಡಿಸಿಪಿ ಸೈದುಲು ಅಡಾವತ್ ಭೇಟಿ ನೀಡಿ ಪರಿಶೀಲನೆ ನಡೆಸಿದ ಬಳಿಕ ಮಾತನಾಡಿ ಬಾಡಿಗೆಗಾಗಿ ನಡೆದ ಗಲಾಟೆ, ಆಸ್ತಿ ವಿವಾದ ಹಾಗೂ ವೈಯಕ್ತಿಕ ವೈಷಮ್ಯಗಳ ಆಯಾಮಗಳಲ್ಲಿ ತನಿಖೆಯನ್ನು ಕೈಗೊಳ್ಳಲಾಗಿದೆ ಎಂದು ತಿಳಿಸಿದರು.


ತಲೆಮರೆಸಿಕೊಂಡಿರುವ ಆರೋಪಿಗಳ ಪತ್ತೆಗಾಗಿ ಪೊಲೀಸರು ನಾಲ್ಕು ವಿಶೇಷ ತಂಡಗಳನ್ನು ರಚಿಸಲಾಗಿದೆ,ತಂಡಗಳು ಆರೋಪಿಗಳ ಪತ್ತೆಗೆ ಕಾರ್ಯಾಚರಣೆಯನ್ನು ತೀವ್ರಗೊಳಿಸಿವೆ ಎಂದು ಹೇಳಿದರು