Home ಜಿಲ್ಲೆ ಕಲಬುರಗಿ ಅತೀ ನಗರೀಕರಣದಿಂದ ಪರಿಸರ ನಾಶ : ಕೊಪ್ಪದ

ಅತೀ ನಗರೀಕರಣದಿಂದ ಪರಿಸರ ನಾಶ : ಕೊಪ್ಪದ

ಕಲಬುರಗಿ: ಆ.2:ಅತೀ ನಗರೀಕರಣ ಮತ್ತು ಆಧುನಿಕ ತಂತ್ರಗಾರಿಕೆಯಿಂದ ನಗರದ ಪ್ರದೇಶದ ಮಕ್ಕಳು ಗ್ರಾಮೀಣ ಚಟುವಟಿಕೆಗಳನ್ನು ಮರೆತು ಹೋಗಿದ್ದಾರೆ ಎಂದು ಅಪರ ಆಯುಕ್ತ ಕಛೇರಿಯ ನಿವೃತ್ತ ಚಿತ್ರಕಲಾ ವಿಷಯ ಪರೀವಿಕ್ಷಕ ಶಿವಾನಂದ ಕೊಪ್ಪದ ಹೇಳಿದರು.
ದಿ. ಆರ್ಟ್ ಇಂಟಿಗೇಶನ್ ಚಿತ್ರಕಲಾ ಮಹಾವಿದ್ಯಾಲಯದ ಅಂಕುರ ಕಲಾ ಗ್ಯಾಲರಿಯಲ್ಲಿ ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ಆಶ್ರಯದಲ್ಲಿ ಆಯೋಜಿಸಿದ ಜಲಜಾಕ್ಷಿ ಕುಲಕರ್ಣಿಯವರ ಏಕವ್ಯಕ್ಷಿ ಚಿತ್ರಕಲಾ ಪ್ರದರ್ಶನವನ್ನು ಉದ್ಘಾಟಿಸಿ ಮಾತನಾಡಿ, ಜಲಜಾಕ್ಷಿಯವರು ರಚಿಸಿ, ಪ್ರದರ್ಶಿಸಿದ ವಿವಿಧ ಮಾಧ್ಯಮದ ಕಲಾಕೃತಿಗಳಲ್ಲಿ ಅತೀ ನಗರೀಕರಣದಿಂದ ಪರಿಸರ ಹಾಳಾಗುತ್ತಿರುವುದರೊಂದಿಗೆ ನಗರ ಜನಪದ ಮತ್ತು ಕಲಾತ್ಮಕ ವಾಸ್ತುಶಿಲ್ಪಗಳ ಸೌಂದರ್ಯ ನಾಶವಾಗುತ್ತಿರುವುದನ್ನು ಸೂಕ್ಷವಾಗಿ ಅಭಿವ್ಯಕ್ತಿಸಿದ್ದಾರೆ. ಇವರ ಕಲಾಕೃತಿಗಳಲ್ಲಿ ಗೂಳಿ, ರೈತಾಪ ಮಹಿಳೆಯರು, ಹಳ್ಳಿ, ಜಲ ಹೀಗೆ ಸರಳವಾದ ಸಣ್ಣ ಸಣ್ಣ ರೂಪಕಗಳೇ ಕಲಾಕೃತಿಯ ಜೀವಾಳವಾಗಿ ಮೂಡಿ ಬಂದಿವೆ. ಇವರ ಕೆಲವು ಸಂಯೋಜನಾ ಚಿತ್ರಗಳಲ್ಲಿ ಪ್ರಕೃತಿಯ ಪ್ರತೀಕವಾಗಿರುವ ವೃಕ್ಷವು ಪದೇ ಪದೇ ಪುನರಾವೃತ್ತಿಗೊಂಡು ಸರಣಿ ಚಿತ್ರಗಳಲ್ಲಿ ಸಾಮರಸ್ಯ ಮೂಡಿಸಲು ಸಹಕಾರಿಯಾಗಿವೆ’ ಎಂದರು.
ನಗರದ ಹಿರಿಯ ಚಿತ್ರ ಮತ್ತು ಶಿಲ್ಪಕಲಾವಿದ ಬಾಬುರಾವ್ ಎಚ್. ಮುಖ್ಯ ಅತಿಥಿಯಾಗಿ ಮಾತನಾಡಿ ‘ದೃಶ್ಯಕಲಾವಿದರು ಸಮಕಾಲೀನ ಸಾಹಿತ್ಯ, ಕಲಾತ್ಮಕ, ನಾಟಕ ಮತ್ತು ಚಲನಚಿತ್ರಗಳನ್ನು ಅಧ್ಯಯನ ಮಾಡುವುದರೊಂದಿಗೆ ಪ್ರಸ್ತುತ ಸಂದರ್ಭದ ವರ್ತಮಾನದ ತವಕ-ತಲ್ಲಣಗಳನ್ನು ಅರ್ಥೈಸಿಕೊಂಡು ಚಿತ್ರಕಲಾಕೃತಿಗಳನ್ನು ರಚಿಸಿದರೆ, ಆ ಕಲಾಕೃತಿ ಹೆಚ್ಚು ಸೃಜನಶೀಲ, ಸಮಾಜಮುಖಿ ಮತ್ತು ಸಮಕಾಲೀನವಾಗಿ ನಿಲ್ಲುತ್ತದೆ.’ ಎಂದು ಹೇಳಿದರು.
ಮುಖ್ಯ ಅತಿಥಿಯಾಗಿ ಆಗಮಿಸಿದ ಇನ್ನೋರ್ವ ಹಿರಿಯ ಚಿತ್ರಕಲಾವಿದ ವಿರೇಂದ್ರ ಶಾಹ ಮಾತನಾಡಿ ಕಲಬುರಗಿಯ ಯುವ ಮಹಿಳಾ ಚಿತ್ರಕಲಾವಿದರು ಭಾರತದ ಮಹಿಳಾ ಕಲಾವಿದರ ಇತಿಹಾಸವನ್ನು ಅಧ್ಯಯನ ಮಾಡಬೇಕು. ಭಾರತೀಯ ಚಿತ್ರಕಲಾ ಕ್ಷೇತ್ರದ ಪ್ರಮುಖ ಮಹಿಳಾ ಕಲಾವಿದರಾದ ಅಮೃತ ಶೇರ್-ಗಿಲ್, ಅರ್ಪಣಾ ಕೌರ್ ಮತ್ತು ನಳಿನಿ ಮಾಳಿನಿ ನಂತಹ ಚಿತ್ರಕಲಾವಿದೆಯರ ಕಲಾಕೃತಿಗಳು ಮತ್ತು ಅವರ ವ್ಯಕ್ತಿತ್ವವನ್ನು ಆದರ್ಶವಾಗಿಟ್ಟುಕೊಂಡು ಮುನ್ನಡೆಯಬೇಕು.’ ಎಂದು ಹೇಳಿದರು.
ದಿ ಆರ್ಟ್ ಇಂಟ್ರಿಗೇಶನ್ ಚಿತ್ರಕಲಾ ಮಹಾವಿದ್ಯಾಲಯದ ಪ್ರಾಚಾರ್ಯ ಎಂ. ಎಚ್. ಬೆಳಮಗಿ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಕಲಾವಿದೆ ಜಲಜಾಕ್ಷಿ ಕುಲಕರ್ಣಿ ಪ್ರಾಸ್ತಾವಿಕವಾಗಿ ಮಾತನಾಡಿ ನಿಸರ್ಗದ ಸಹಜ ಹಾಗೂ ಮಾನವ ನಿರ್ಮಿತ ಆಕೃತಿಗಳ ವೈವಿದ್ಯತೆ, ಸಂಕೀರ್ಣತೆ, ಸಮೃದಿ, ಬರ ಇತ್ಯಾದಿ ವೈಚಿತ್ರ್ಯಗಳು ನನ್ನಮೇಲೆ ಗಾಢವಾದ ಪ್ರಭಾವ ಬೀರಿವೆ. ಇವುಗಳನ್ನೆ ವರ್ಣಮಯವಾಗಿ, ಸೃಜನಶೀಲವಾಗಿ ಅಭಿವ್ಯಕ್ತಿಸಿರುವೆ’ ಎಂದು ಹೇಳಿದರು.
ಕಲಾವಿದರಾದ ವ್ಹಿ.ಬಿ. ಬಿರಾದಾರ, ಅಶೋಕ್ ಶೆಟಕಾರ, ರಾಘವೇಂದ್ರ ಬುರ್ಲಿ, ಸಂಗಯ್ಯ ಹಳ್ಳದಮಠ, ಅಣ್ಣಾರಾಯ ಹಂಗರಗಿ, ನಿಂಗಣ್ಣ ಕೇರಿ, ಶಶಿಕಾಂತ ಪಾಟೀಲ್, ಗೋಪಾಲ್ ಕೆ. ಪಿ., ವಿಜಯ ಔರಾದ, ಸುರೇಶ್ ಸಿ.ಎಂ, ಅನುಷಾ, ಮತ್ತು ಕಲಾಸಕ್ತರಾದ ಅನಂತ ಪ್ರತಿನಿಧಿ, ವಿವೇಕ ಹಬ್ಬು, ಸುಧಾ, ವೇಣುಗೋಪಾಲ, ವಾದಿರಾಜ, ಶ್ರೀಕಾರ ಕುಲಕರ್ಣಿ ಹಾಗೂ ಚಿತ್ರಕಲಾ ವಿದ್ಯಾರ್ಥಿಗಳು ಭಾಗವಹಿಸಿದ್ದರು. ಕವಿತಾ ಕಟ್ಟೆ ಸ್ವಾಗತಿಸಿದರು. ಬಿ. ಎನ್. ಪಾಟೀಲ್ ನಿರೂಪಿಸಿದರು. ಮಲ್ಲಿಕಾರ್ಜುನ ಮುಗಳಿ ವಂದಿಸಿದರು.