Home ಜಿಲ್ಲೆ ಕಾಯಕವೇ ಕೈಲಾಸ ತತ್ವಕ್ಕೆ ಉದಾಹರಣೆಯಾಗಿದ್ದ ಹಡಪದ ಅಪ್ಪಣ್ಣನವರ ಆದರ್ಶ ಮೈಗೂಡಿಸಿಕೊಳ್ಳಿ: ಗುಣತೀರ್ಥವಾಡಿಯ ಬಸವಪ್ರಭು ಸ್ವಾಮೀಜಿ ಕರೆ

ಕಾಯಕವೇ ಕೈಲಾಸ ತತ್ವಕ್ಕೆ ಉದಾಹರಣೆಯಾಗಿದ್ದ ಹಡಪದ ಅಪ್ಪಣ್ಣನವರ ಆದರ್ಶ ಮೈಗೂಡಿಸಿಕೊಳ್ಳಿ: ಗುಣತೀರ್ಥವಾಡಿಯ ಬಸವಪ್ರಭು ಸ್ವಾಮೀಜಿ ಕರೆ

ಬೀದರ್ ಜು 30: 12ನೇ ಶತಮಾನದ ಶರಣ ಕ್ರಾಂತಿಯಲ್ಲಿ ಹಡಪದ ಅಪ್ಪಣ್ಣನವರ ಪಾತ್ರ ಅತ್ಯಂತ ಮಹತ್ವದ್ದಾಗಿತ್ತು. ಕಾಯಕವೇ ಕೈಲಾಸ ಎಂಬ ತತ್ವವನ್ನು ನಿಜಜೀವನದಲ್ಲಿ ಅಳವಡಿಸಿಕೊಂಡು ಬಸವಣ್ಣನವರಿಗೆ ಆಪ್ತ ಕಾರ್ಯದರ್ಶಿಯಾಗಿ ಅವರ ಪ್ರತಿಯೊಂದು ಕಾರ್ಯದಲ್ಲೂ ನೆರಳಿನಂತೆ ಜೊತೆಗಿದ್ದು, ಕಲ್ಯಾಣ ಕ್ರಾಂತಿಯ ಸಂದರ್ಭದಲ್ಲಿ ಮಹತ್ವದ ಜವಾಬ್ದಾರಿಯನ್ನು ನಿರ್ವಹಿಸಿದರು ಎಂದು ಗುಣತೀರ್ಥವಾಡಿಯ ಶ್ರೀ ಬಸವಪ್ರಭು ಸ್ವಾಮೀಜಿಯವರು ಹೇಳಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಕನ್ನಡ ಮತ್ತು ಸಂಸ್ಕøತಿ ಇಲಾಖೆ ಹಾಗೂ ಮಹಾನಗರ ಪಾಲಿಕೆ ಬೀದರ್ ಇವರ ಸಂಯುಕ್ತಾಶ್ರಯದಲ್ಲಿ ಬುಧವಾರ ನಗರದ ಪೂಜ್ಯ ಡಾ. ಚನ್ನಬಸವ ಪಟ್ಟದೇವರು ರಂಗಮಂದಿರದಲ್ಲಿ ಹಮ್ಮಿಕೊಳ್ಳಲಾಗಿದ್ದ ಶ್ರೀ ಶಿವಶರಣ ಹಡಪದ ಅಪ್ಪಣ್ಣ ಅವರ ಜಯಂತಿ ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿ ಆಶೀರ್ವಚನ ನೀಡಿ ಮಾತನಾಡಿದ ಅವರು, ಹಡಪದ ಅಪ್ಪಣ್ಣನವರು ತಮ್ಮ ಕಾಯಕ ಮತ್ತು ನಿಷ್ಠೆಯ ಮೂಲಕ ಸಮಾಜಕ್ಕೆ ಮೇಲ್ಪಂಕ್ತಿ ಹಾಕಿಕೊಟ್ಟಿದ್ದಾರೆ. ಅವರ ವಚನಗಳಲ್ಲಿನ ಸಾರ್ವಕಾಲಿಕ ಜೀವನ ಮೌಲ್ಯಗಳು ಹಾಗೂ ಸರಳತೆಯ ಆದರ್ಶಗಳನ್ನು ಪ್ರತಿಯೊಬ್ಬರೂ ತಮ್ಮ ನಿತ್ಯ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ತಿಳಿಸಿದರು.
ಅತಿಥಿ ಉಪನ್ಯಾಸಕರಾಗಿ ಆಗಮಿಸಿದ್ದ ಶಿವಶರಣಪ್ಪ ವಾಲಿ ಅವರು ಮಾತನಾಡಿ, ಪ್ರತಿಯೊಬ್ಬ ಭಾರತೀಯರು ಶರಣರ ತತ್ವ ಸಿದ್ಧಾಂತಗಳ ಅನುಯಾಯಿಗಳಾಗಬೇಕಿದೆ. ಹಡಪದ ಅಪ್ಪಣ್ಣನವರು ಕೇವಲ ಒಂದು ನಿರ್ದಿಷ್ಟ ಸಮಾಜಕ್ಕೆ ಸೀಮಿತವಾಗದೆ, ಸಮತಾವಾದಿ ಚಿಂತನೆಗಳ ಮೂಲಕ ಇಡೀ ಮಾನವಕುಲಕ್ಕೆ ಬೆಳಕಾಗಿದ್ದಾರೆ. ಅವರ ವಚನ ಸಾಹಿತ್ಯವು ಶೋಷಣೆ ರಹಿತ ಸಮಾಜ ನಿರ್ಮಾಣದ ಆಶಯವನ್ನು ಹೊಂದಿದ್ದು, ಇಂದಿನ ಯುವ ಪೀಳಿಗೆ ಶರಣರ ವಿಚಾರಧಾರೆಗಳನ್ನು ಆಳವಾಗಿ ಅಧ್ಯಯನ ಮಾಡಿ, ಸನ್ಮಾರ್ಗದಲ್ಲಿ ನಡೆಯುವುದು ಅಗತ್ಯ ಎಂದು ಪ್ರತಿಪಾದಿಸಿದರು.
ಸಾರ್ವಜನಿಕರ ಮೆಚ್ಚುಗೆ ಪಾತ್ರರಾದ 5 ವರ್ಷದ ಮಗು:- ಕಾರ್ಯಕ್ರಮದಲ್ಲಿ ಮಣಿಕರಣಿಕ (ತಂದೆ ಗಣೇಶ ಹಡಪದ) ಎಂಬ 5 ವರ್ಷದ ಪುಟಾಣಿ ಬಾಲಕಿ ಸಂವಿಧಾನದ ಪೀಠಿಕೆಯನ್ನು ಕಂಠಪಾಠ ಮಾಡಿ ಬೋಧಿಸುವ ಮೂಲಕ ಸಾರ್ವಜನಿಕರ ಮೆಚ್ಚುಗೆಗೆ ಪಾತ್ರರಾದಳು.
ಕಾರ್ಯಕ್ರಮಕ್ಕೂ ಮುಂಚೆ ನಗರದ ಹಳೆ ಜಿಲ್ಲಾಧಿಕಾರಿ ಕಚೇರಿ ಎದುರುಗಡೆಯ ಶಿವಾಜಿ ವೃತ್ತದಿಂದ ವಿವಿಧ ಪ್ರಮುಖ ವೃತ್ತಗಳ ಮಾರ್ಗವಾಗಿ ರಂಗಮಂದಿರದವರೆಗೆ ಹಡಪದ ಅಪ್ಪಣ್ಣನವರ ಭಾವಚಿತ್ರದ ಭವ್ಯ ಮೆರವಣಿಗೆ ನಡೆಯಿತು.
ಈ ಸಂದರ್ಭದಲ್ಲಿ ಬೀದರ ತಹಶಿಲ್ದಾರ ಜಿಯಾವುದ್ದೀನ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಸಿದ್ರಾಮ ಶಿಂಧೆ, ಬೀದರ್ ಜಿಲ್ಲಾ ಹಡಪದ ಅಪ್ಪಣ್ಣ ಸಮಾಜದ ಅಧ್ಯಕ್ಷ ದತ್ತಾತ್ರೇಯ ಬಾಂದೇಕರ್, ಸಮಾಜದ ಮುಖಂಡರಾದ ಸಂಗಮೇಶ ಎಣಕೂರ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು, ಸಿಬ್ಬಂದಿಗಳು ಹಾಗೂ ಸಮಾಜದ ಮುಖಂಡರು ಉಪಸ್ಥಿತರಿದ್ದರು