
ಕಲಬುರಗಿ,ನ.14-ರಾಜ್ಯ ಸರ್ಕಾರ ಆರಂಭಿಸಿರುವ ಎಲಿವೇಟ್ ಕರ್ನಾಟಕ ಕಾರ್ಯಕ್ರಮವು ಉದ್ಯಮ ಕ್ಷೇತ್ರದಲ್ಲಿ ದೇಶದಲ್ಲಿಯೇ ದೊಡ್ಡ ಬದಲಾವಣೆ ತರಲಿದೆ ಎಂದು ರಾಜ್ಯದ ಗೃಹ, ಮಾಹಿತಿ ತಂತ್ರಜ್ಞಾನ ಮತ್ತು ಜೈವಿಕ ತಂತ್ರಜ್ಞಾನ ಹಾಗೂ ಇ-ಆಡಳಿತ ಇಲಾಖೆಯ ಸಚಿವರು ಹಾಗೂ ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಹೇಳಿದರು.
ಶನಿವಾರ ಕಲಬುರಗಿ ನಗರದ ಬಂಬು ನಜಾರ ಪ್ರದೇಶದ ಎನ್ ರೈಸ್ ಬೈ ಸಯ್ಯಾಜಿ ಹೋಟೆಲ್ ನಲ್ಲಿ ಐ.ಟಿ-ಬಿ.ಟಿ ಇಲಾಖೆ ಮತ್ತು ಕೃಷಿ ಕಲ್ಪ ಸಂಸ್ಥೆಯಿಂದ ಕೃಷಿ ನವೋದ್ಯಮಿಗಳಿಗೆ ಆಯೋಜಿಸಿದ ಕಲ್ಯಾಣ ಕರ್ನಾಟಕ ಸ್ಟಾರ್ಟ್ ಅಪ್ ಡೈಲಾಗ್-2026 ಸಂವಾದದಲ್ಲಿ ಮಾತನಾಡಿದ ಅವರು, ನವೋದ್ಯಮಿಗಳಿಗೆ ಉತ್ತೇಜಿಸಲೆಂದೆ ಈ ಯೋಜನೆ ಆರಂಭಿಸಿದೆ. ಅರ್ಥಿಕ ಪ್ರಗತಿಯಲ್ಲಿ ಪ್ರಮುಖ ಪಾತ್ರ ವಹಿಸಲಿದೆ ಎಂದರು.
ಯುವ ಸಮೂಹಕ್ಕೆ ಉತ್ತೇಜನ ನೀಡುವ ದೃಷ್ಠಿಯಿದ 1,500 ನವೋದ್ಯಮಗಳಿಗೆ ಎಲಿವೇಟ್ ಕಾರ್ಯಕ್ರಮದಡಿಯಲ್ಲಿ ಗರಿಷ್ಠ 50 ಲಕ್ಷ ರೂ. ವರೆಗೆ ಸಹಾಯಧನ ನೀಡಲಾಗುತ್ತಿದೆ. ಇದು ಪ್ರಪಂಚದ ಯಾವುದೇ ದೇಶದ ರಾಜ್ಯದಲ್ಲಿ ಈ ರೀತಿಯ ಯೋಜನೆ ಜಾರಿಯಲ್ಲಿಲ್ಲ. ಇದು ಕರ್ನಾಟಕದಲ್ಲಿ ಮಾತ್ರ. ಇನ್ನು ಇದರಲ್ಲಿ ಬೆಂಗಳೂರಿನಿಂದಾಚೆ ಇರುವ ನವೋದ್ಯಮಿಗಳು ಕೇವಲ ಶೇ.28ರಷ್ಟು ಮಾತ್ರ. ಕಲ್ಯಾಣ ಕರ್ನಾಟಕದಲ್ಲಿ ನವೋದ್ಯಮಿಗಳ ಸಂಖ್ಯೆ ಹೆಚ್ಚಾಗಬೇಕು ಇದಕ್ಕಾಗಿ ಬಿಯಾಂಡ್ ಬೆಂಗಳೂರು ಯೋಜನೆ ರೂಪಿಸಿದ್ದೇವೆ ಎಂದರು.
ಮುಂದಿನ 10 ವರ್ಷಗಳ ಕಾಲ ಡೀಪ್ ಟೆಕ್ ಕ್ಷೇತ್ರದಲ್ಲಿ ನವೋದ್ಯಮ ಸ್ಥಾಪನೆಗೆ 1 ಕೋಟಿ ರೂ. ವರೆಗೂ ಸಹಾಯಧನವನ್ನು ಆಯ್ದ ನವೋದ್ಯಮಿಗಳಿಗೆ ನೀಡುವ ಯೋಜನೆ ರೂಪಿಸಿದ್ದೇವೆ. ನವೋದ್ಯಮಗಳು ಕೇವಲ ಬೆಂಗಳೂರಿಗೆ ಸೀಮಿತವಾಗದೆ ದ್ವಿತೀಯ ಮತ್ತು ತೃತೀಯ ದರ್ಜೆಯ ನಗರಗಳಿಗೂ ವಿಸ್ತರಿಸಬೇಕು ಎಂಬುದು ಸರ್ಕಾರದ ಆಶಯವಾಗಿದೆ. ಈ ನಿಟ್ಟಿನಲ್ಲಿ ಸ್ಥಳೀಯ ಆರ್ಥಿಕತೆಯನ್ನು ಬಲಪಡಿಸಲು ಮತ್ತು ಯುವಕರನ್ನು ಉದ್ಯೋಗದಾತರನ್ನಾಗಿ ಪರಿವರ್ತಿಸಲು ಜಾರಿಗೆ ತಂದಿರುವ ಮಹತ್ವಾಕಾಂಕ್ಷಿ ‘ಲೀಪ್’ (ಲೋಕಲ್ ಎಕೊನೊಮಿಕ್ ಅಕ್ಸಲೇಟರ್ ಪೆÇ್ರೀಗ್ರಾಮ್) ಯೋಜನೆ ಜಾರಿಗೆ ತರಲಾಗಿದೆ ಎಂದರು.
ಇದು ನಿಮ್ಮ ಸರ್ಕಾರ,ಉದ್ಯಮಕ್ಕೆ ಎಲ್ಲ ಸಹಕಾರ
ಬಹುತೇಕ ಉದ್ಯಮಿಗಳು ಸರ್ಕಾರ ನಮಗೆ ಏನು ಮಾಡಲ್ಲ. ಯಾವುದೇ ಸಬ್ಸಿಡಿ ಸಿಗಲ್ಲ ಎನ್ನುವ ಭ್ರಮೆಯಿಂದ ಹೊರಬರಬೇಕಿದೆ. ಇದು ನಿಮ್ಮ ಸರ್ಕಾರ ನಿಮ್ಮ ಎಲ್ಲ ಉದ್ಯಮಗಳಿಗೆ ಎಲ್ಲಾ ರೀತಿಯ ಸಹಕಾರ ನೀಡಲು ಬದ್ದವಾಗಿದೆ. ನವೋದ್ಯಮ ಸ್ಥಾಪನೆ ಸಂದರ್ಭದಲ್ಲಿ ವೈಫಲ್ಯದಿಂದ ಕುಗ್ಗದೆ ಮುಂದೆ ಸಾಗಿ. ಸ್ಥಳೀಯ ಗುರುತಿನೊಂದಿಗೆ ಲೋಕಲ್-ವೋಕಲ್ ಕಲ್ಪನೆಯಲ್ಲಿ ಹೊಸ ಐಡಿಯಾದೊಂದಿಗೆ ಉದ್ಯಮ ಸ್ಥಾಪಿಸಿ ಸ್ಥಿರವಾದ ವಿತರಣೆ ಹೊಂದಿದಲ್ಲಿ ಉದ್ಯಮದಲ್ಲಿ ಯಶಸ್ಸು ಸಾಧ್ಯ ಎಂದರು.
ಕೃಷಿಕರಿಗೆ ಮಾರುಕಟ್ಟೆ ಕೌಶಲ್ಯ ಅಗತ್ಯ
ಸಮವಾದದಲ್ಲಿ ಭಾಗವಹಿಸಿದ ವೈದ್ಯಕೀಯ ಶಿಕ್ಷಣ, ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಖಾತೆ ಸಚಿವ ಡಾ. ಶರಣಪ್ರಕಾಶ ಆರ್. ಪಾಟೀಲ ಮಾತನಾಡಿ, ಇಲ್ಲಿನ ರೈತರಿಗೆ ಅನುಭವ ಇದೆ ಅದರೆ ಕೃಷಿ ಉತ್ಪನ್ನದ ಮಾರುಕಟ್ಟೆ ವಿಸ್ತರಣೆಯ ಕೌಶಲ್ಯ ಇಲ್ಲ. ಈ ಕೊರತೆಯನ್ನು ತುಂಬಿಸುವ ಕೆಲಸವಾಗಬೇಕಿದೆ. ಇನ್ನು ಕೃಷಿ ಉತ್ಪನ್ನಗಳ ಮೌಲ್ಯವರ್ಧಿತ ಸೇವೆ ನೀಡುವುದು ಮಹತ್ವದಾಗಿದೆ ಎಂದರು.
ಕೃಷಿಕಲ್ಪ ಎಸೆಲ್ ಅಧ್ಯಕ್ಷರು ಹಾಗೂ ಸಂಸ್ಥಾಪಕ ಪಾಲುದಾರರಾದ ಡಾ. ಪ್ರಶಾಂತ ಪ್ರಕಾಶ, ಸತ್ವ ಕನ್ಸಲಟಿಂಗ್ ಸಿ.ಇ.ಓ ಶ್ರೀಕೃಷ್ಣ ಶ್ರೀಧರ ಅವರು ಸಂವಾದದಲ್ಲಿ ಭಾಗಿಯಾಗಿದ್ದರು. ಕೃಷಿ ಕಲ್ಪ ಸಿ.ಇ.ಓ. ಸಿ.ಎಂ. ಪಾಟೀಲ ಅವರು ಸಂಚಾಲಕರಾಗಿ ಕಾರ್ಯನಿರ್ವಹಿಸಿದ್ದರು.
ಕಾರ್ಯಕ್ರಮದಲ್ಲಿ ಕರ್ನಾಟಕ ರೇಷ್ಮೆ ಉದ್ದಿಮೆಗಳ ನಿಗಮದ ಅಧ್ಯಕ್ಷೆ ಹಾಗೂ ಕಲಬುರಗಿ ಉತ್ತರ ಶಾಸಕಿ ಕನೀಜ್ ಫಾತೀಮಾ, ಕಲಬುರಗಿ ದಕ್ಷಿಣ ಶಾಸಕ ಅಲ್ಲಮಪ್ರಭು ಪಾಟೀಲ, ಎಂ.ವಯ.ಪಾಟಿಲ, ವಿಧಾನ ಪರಿಷತ್ ಶಾಸಕರುಗಳಾದ ತಿಪ್ಪಣ್ಣಪ್ಪ ಕಮಕನೂರ, ಜಗದೇವ ಗುತ್ತೇದಾರ್, ಜೆಸ್ಕಾಂ ಅಧ್ಯಕ್ಷ ಪ್ರವೀಣ ಪಾಟೀಲ ಹರವಾಳ, ಕಲಬುರಗಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಮಜಹರ್ ಆಲಂ ಖಾನ್, ಕರ್ನಾಟಕ ರಾಜ್ಯ ದ್ವಿದಳ ಧಾನ್ಯ ಅಭಿವೃದ್ಧಿ ಮಂಡಳಿಯ ಅಧ್ಯಕ್ಷ ಸೈಯ್ಯದ್ ಮಹೆಮೂದ್ ಚಿಸ್ತಿ ಸಾಹೇಬ್, ಮಹಾನಗರ ಪಾಲಿಕೆ ಮೇಯರ್ ಅಜಮಲ್ ಗೋಲಾ, ಐ.ಜಿ.ಪಿ. ಶಾಂತನು ಸಿನ್ಹಾ, ಜಿಲ್ಲಾಧಿಕಾರಿ ಇಕ್ರಂ ಶರೀಫ್, ನಗರ ಪೆÇಲೀಸ್ ಆಯುಕ್ತ ಡಾ.ಎಸ್.ಡಿ.ಶರಣಪ್ಪ, ಎಸ್.ಪಿ.ಅಡ್ಡೂರು ಶ್ರೀನುವಾಸಲು, ಡಿ.ಸಿ.ಪಿ ಶಾಲೂ, ಜಿಲ್ಲಾ ಪಂಚಾಯತ್ ಸಿ.ಇ.ಓ ರಾಹುಲ ಸಂಕನೂರ, ಮಹಾನಗರ ಪಾಲಿಕೆ ಆಯುಕ್ತ ಪಿ.ಶ್ರವಣಕುಮಾರ ಇದ್ದರು. ಯು.ಕೆ & ಕಂಪನಿಯ ಸಂಸ್ಥಾಪಕ ಡಾ.ಕೆ.ಉಲ್ಲಾಸ ಕಾಮತ್ ಅವರು ಪ್ರಸಕ್ತ ದೇಶದ ಅರ್ಥಿಕತೆ ಕುರಿತು ವಿವರಣೆ ನೀಡಿದರು.





















