
ಕುಣಿಗಲ್, ಜು. ೨೮- ಇತಿಹಾಸ ಪರಂಪರೆಯುಳ್ಳ ಗ್ರಾಮೀಣ ಮಠ-ಮಂದಿರಗಳನ್ನು ಪುನಶ್ಚೇತನಗೊಳ್ಳಲು ಸರ್ಕಾರ, ಭಕ್ತರು ಮುಂದಾಗಬೇಕು ಎಂದು ಮಾಜಿ ಮುಖ್ಯಮಂತ್ರಿ ಸದಾನಂದ ಗೌಡ ಕರೆ ನೀಡಿದರು.
ತಾಲ್ಲೂಕಿನ ಕಿತ್ಲಾ ಮಂಗಲ ಗ್ರಾಮದಲ್ಲಿರುವ ಇತಿಹಾಸ ಪ್ರಸಿದ್ಧ ಶ್ರೀ ಅರೆಶಂಕರ ಮಠದ ಶ್ರೀ ಸಿದ್ದರಾಮ ಚೈತನ್ಯ ಸ್ವಾಮೀಜಿಗಳ ೫೩ನೇ ಜನ್ಮ ವರ್ದಂತಿ ಹಾಗೂ ಉಚಿತ ವಿದ್ಯಾರ್ಥಿ ನಿಲಯ ಉದ್ಘಾಟಿಸಿ ಮಾತನಾಡಿದ ಅವರು, ಶ್ರೀ ಕ್ಷೇತ್ರವು ಸಾವಿರ ವರ್ಷಗಳ ಇತಿಹಾಸ ಹೊಂದಿದ್ದರೂ ಯಾವುದೇ ಅಭಿವೃದ್ಧಿ ಕಾಣದೆ ಭಕ್ತರ ಸಹಕಾರದಿಂದ ದೇವಸ್ಥಾನ ಪುನಶ್ಚೇತನಗೊಳ್ಳುತ್ತಿದ್ದು ಇದಕ್ಕೆ ಸರ್ಕಾರ ಹಾಗೂ ಭಕ್ತರು ಹೆಚ್ಚಿನ ಸಹಕಾರ ನೀಡಬೇಕು ಎಂದರು.
ಗುಡಿ ಗೋಪುರಗಳು ಶಾಂತಿ ನೆಮ್ಮದಿ ನೀಡುವುದರೊಂದಿಗೆ ಭಕ್ತರಿಗೆ ಮನಸ್ಸಿಗೆ ಶಾಂತಿ ನೀಡುವ ಪುಣ್ಯ ಕ್ಷೇತ್ರಗಳಾಗಿರುತ್ತವೆ. ಸಾವಿರಾರು ವರ್ಷವಿರುವ ಈ ಪುಣ್ಯ ಕ್ಷೇತ್ರಕ್ಕೆ ತಾವು ಆಗಮಿಸಿರುವುದು ತಮಗೆ ಅತೀವ ಆನಂದ ಉಂಟಾಗಿದ್ದು, ಬಡವ-ಶ್ರೀಮಂತ ಎನ್ನದೆ ಎಲ್ಲ ವರ್ಗದ ಜನರಿಗೂ ಈ ದೇವರು ಶಾಂತಿ ನೆಮ್ಮದಿ ನೀಡುವಂತಾಗಲಿ. ಸಮಾಜದಲ್ಲಿ ಎಷ್ಟೇ ದೊಡ್ಡ ವ್ಯಕ್ತಿಗಳಾದರೂ ಸಹ ದೇವರ ಶಕ್ತಿಯ ಮುಂದೆ ಯಾವುದೂ ಶಾಶ್ವತವಾಗಿರುವುದಿಲ್ಲ. ಮಠಕ್ಕೆ ಮುಂದಿನ ದಿನಗಳಲ್ಲಿ ವಸತಿ ನಿಲಯ ಸೇರಿದಂತೆ ಎಲ್ಲ ರೀತಿಯ ಸಹಕಾರ ನೀಡುವ ಭರವಸೆ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಶಾಸಕ ಡಾ.ಎಚ್. ಡಿ. ರಂಗನಾಥ್ ಮಾತನಾಡಿ, ಇತಿಹಾಸ ಪರಂಪರೆಯುಳ್ಳ ಬಾದಾಮಿ- ಐಹೊಳೆ ಚರಿತ್ರೆ ಹೊಂದಿರುವ ಈ ಕ್ಷೇತ್ರದ ಅಭಿವೃದ್ಧಿ ಬೆಳವಣಿಗೆಗೆ ಮುಂದಿನ ದಿನಗಳಲ್ಲಿ ಹೆಚ್ಚಿನ ಹೊತ್ತು ನೀಡುವುದರೊಂದಿಗೆ ಈ ಮಠವು ಉತ್ತಮ ಸಂಸ್ಕಾರವುಳ್ಳ ಪುಣ್ಯ ಕ್ಷೇತ್ರವಾಗಿ ಹೊರಹೊಮ್ಮಲು ಎಲ್ಲ ರೀತಿಯ ಸಹಕಾರ ನೀಡಲಾಗುವುದು. ಇತಿಹಾಸ ಹೊಂದಿರುವ ಈ ಗುರುಪೀಠವು ಯಾವುದೇ ರಾಜಕೀಯ ವ್ಯಕ್ತಿಗಳ ಸಹಕಾರವಿಲ್ಲದೆ ಬೆಳೆಯುತ್ತಿದ್ದು ಮುಂದಿನ ದಿನಗಳಲ್ಲಿ ಈ ಕ್ಷೇತ್ರಕ್ಕೆ ಬೇಕಾದ ರಸ್ತೆ, ಮಠದ ಅಭಿವೃದ್ಧಿಗೆ ಬೆಂಗಳೂರಿನಲ್ಲಿ ಸಿಎ ನಿವೇಶನ ಕೊಡಿಸುವ ಭರವಸೆ ನೀಡಿದರು
ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿದ್ದ ಅರೆ ಶಂಕರ ಮಠದ ಶ್ರೀ ಸಿದ್ದರಾಮಯ್ಯ ಚೈತನ್ಯ ಸ್ವಾಮೀಜಿ ಮಾತನಾಡಿ, ಕಳೆದ ೨೩ ವರ್ಷಗಳಿಂದಲೂ ಮಠದ ಬೆಳವಣಿಗೆ ಅಭಿವೃದ್ಧಿಗೆ ಶ್ರಮಿಸುತ್ತಿದ್ದು ಜನಾಂಗದ ಮುಖಂಡರು ಸಹಕಾರ ನೀಡಿ ತಾವು ಯಾವುದೇ ವ್ಯಕ್ತಿಗಳಿಂದ ಹಣ ಕೇಳಲು ಮುಂದಾಗುವುದಿಲ್ಲ. ಮಾಜಿ ಸಚಿವ ಡಿ ನಾಗರಾಜಯ್ಯ ಹಾಗೂ ಬಿ.ಬಿ. ರಾಮಸ್ವಾಮಿಗೌಡ ರವರ ಸಹಕಾರದಿಂದ ಈ ಮಠದಲ್ಲಿ ನೆಲೆಯೂರಿ ಜನಾಂಗದ ಅಭಿವೃದ್ಧಿ ಹಾಗೂ ಎಲ್ಲರ ಸಹಕಾರದಿಂದ ಸಮುದಾಯದ ಏಳ್ಗೆಗೆ ಮೂಲಭೂತ ಸೌಲಭ್ಯ ಮಠಗಳ ಬೆಳವಣಿಗೆಗೆ ಪ್ರಾಮಾಣಿಕವಾಗಿ ಶ್ರಮಿಸುತ್ತಿದ್ದು ಇದರಲ್ಲಿ ಯಾವುದೇ ರಾಜಕೀಯ ಬೆರೆಸುವುದಿಲ್ಲ ಮಠವು ಒಕ್ಕಲಿಗ ಸಮಾಜದ, ಜನಾಂಗದ ಅಭಿವೃದ್ಧಿಗೆ ಸದಾ ಸ್ಪಂದಿಸುವ ಭರವಸೆ ನೀಡಿದರು
ಕಾರ್ಯಕ್ರಮದಲ್ಲಿ ರಾಜ್ಯ ಒಕ್ಕಲಿಗರ ಸಂಘದ ನಿರ್ದೇಶಕರಾದ ಲೋಕೇಶ್, ನಾಗರಾಜಯ್ಯ, ಆಡಿಟರ್ ನಾಗರಾಜು, ಬಿಜೆಪಿ ಮುಖಂಡರಾದ ಡಿ ಕೃಷ್ಣಕುಮಾರ್, ರಾಜೇಶ್ಗೌಡ, ಜೆಡಿಎಸ್ನ ಜಗದೀಶ್ ನಾಗರಾಜಯ್ಯ, ಬಿ.ಕೆ. ರಾಮಣ್ಣ, ಮಹಿಳಾ ಕಾಂಗ್ರೆಸ್ ಜಿಲ್ಲಾಧ್ಯಕ್ಷೆ ಸುಮತಿ, ನಾರಾಯಣಸ್ವಾಮಿ, ನಿವೃತ್ತ ಐಎ ಎಸ್ ಅಧಿಕಾರಿ ಜಯರಾಮ್, ಬಾ.ನಾ. ರವಿ, ಗಾಯತ್ರಿ ಬಲರಾಮ್ರಾಜ್ ಮತ್ತಿತರರು ಭಾಗವಹಿಸಿದ್ದರು.


































