
ಬೆಂಗಳೂರು, ಅ.೩: ರಾಜ್ಯದಲ್ಲಿ ಬರದಿಂದ ಉಂಟಾಗಿರುವ ಭಾರೀ ನಷ್ಟಕ್ಕೆ ಪರಿಹಾರ ಕೋರಿ ಕರ್ನಾಟಕ ಸರ್ಕಾರ ಕೇಂದ್ರದ ಮುಂದೆ ೭,೫೦೦ ಕೋಟಿ ನೆರವಿಗೆ ಮನವಿ ಸಲ್ಲಿಸಿದೆ.
ಬರದ ನಷ್ಟ, ಬೆಳೆ ಹಾನಿ, ಮಳೆಯ ಕೊರತೆ ಹಾಗೂ ಜನ-ಜಾನುವಾರುಗಳ ಸಂಕಷ್ಟದ ವಿವರಗಳನ್ನು ಒಳಗೊಂಡ ಸುಮಾರು ಒಂದು ಸಾವಿರ ಪುಟಗಳ ಎರಡು ದಾಖಲೆ ಪುಸ್ತಕಗಳನ್ನು ಕೇಂದ್ರ ಬರ ಅಧ್ಯಯನ ತಂಡಕ್ಕೆ ರಾಜ್ಯ ಸರ್ಕಾರ ಸಲ್ಲಿಸಿದೆ. ಮೊದಲ ಹಂತದಲ್ಲಿ ಗುರುತಿಸಲಾದ ಬರಪೀಡಿತ ಪ್ರದೇಶಗಳಲ್ಲಿ ೧೮ ಸಾವಿರ ಕೋಟಿ, ನಂತರದ ಹಂತದಲ್ಲಿ ಘೋಷಿಸಲಾದ ಪ್ರದೇಶಗಳಲ್ಲಿ ೨೭ ಸಾವಿರ ಕೋಟಿ ಸೇರಿದಂತೆ ಒಟ್ಟು ೪೬ ಸಾವಿರ ಕೋಟಿ ನಷ್ಟವಾಗಿದ್ದು, ಅದರ ಆಧಾರದ ಮೇಲೆ ೭,೫೦೦ ಕೋಟಿ ಪರಿಹಾರ ನೀಡುವಂತೆ ಮನವಿ ಮಾಡಲಾಗಿದೆ ಎಂದು ಸಚಿವ ಜಿ. ಪರಮೇಶ್ವರ್ ತಿಳಿಸಿದ್ದಾರೆ.
ರಾಜ್ಯದಲ್ಲಿ ತೀವ್ರ ಬರ ಪರಿಸ್ಥಿತಿ ಉಂಟಾಗಿರುವ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರದ ಅಂತರ ಸಚಿವಾಲಯದ ಬರ ಅಧ್ಯಯನ ತಂಡ ಕರ್ನಾಟಕಕ್ಕೆ ಆಗಮಿಸಿದ್ದು, ಬರಪೀಡಿತ ಪ್ರದೇಶಗಳ ನೈಜ ಸ್ಥಿತಿಯನ್ನು ನಾಲ್ಕು ದಿನಗಳ ಕಾಲ ಸ್ಥಳದಲ್ಲೇ ಪರಿಶೀಲಿಸಲಿದೆ ಎಂದು ಉಪಮುಖ್ಯಮಂತ್ರಿ ಹಾಗೂ ಕಂದಾಯ ಸಚಿವ ಡಾ. ಜಿ. ಪರಮೇಶ್ವರ್ ತಿಳಿಸಿದ್ದಾರೆ.
ಕೇಂದ್ರ ಕೃಷಿ ಮತ್ತು ರೈತರ ಕಲ್ಯಾಣ ಸಚಿವಾಲಯದ ಜಂಟಿ ಕಾರ್ಯದರ್ಶಿ ಅಜಿತ್ ಕುಮಾರ್ ಸಾಹು ನೇತೃತ್ವದಲ್ಲಿ ತಂಡ ರಾಜ್ಯಕ್ಕೆ ಆಗಮಿಸಿದ್ದು, ಮೂರು
ಉಪತಂಡಗಳಾಗಿ ವಿಭಜಿಸಿಕೊಂಡು ವಿವಿಧ ಜಿಲ್ಲೆಗಳಲ್ಲಿ ಬರ ಪರಿಸ್ಥಿತಿಯ ಅಧ್ಯಯನ ನಡೆಸಲಿದೆ. ಅಕ್ಟೋಬರ್ ೩ರಿಂದ ೬ರವರೆಗೆ ತಂಡದ ಕ್ಷೇತ್ರ ಪರಿಶೀಲನೆ ನಡೆಯಲಿದೆ.
ಕೇಂದ್ರ ತಂಡದೊಂದಿಗೆ ಸಭೆಯ ಬಳಿಕ ಮಾತನಾಡಿದ ಪರಮೇಶ್ವರ್, ರಾಜ್ಯದ ಬರ ಪರಿಸ್ಥಿತಿ, ಬೆಳೆ ನಷ್ಟ, ಮಳೆಯ ಕೊರತೆ, ಕುಡಿಯುವ ನೀರಿನ ಸಮಸ್ಯೆ, ಜಲಾಶಯಗಳಲ್ಲಿನ ನೀರಿನ ಮಟ್ಟ ಹಾಗೂ ಬರದಿಂದಾಗಿ ಜನರು ಗುಳೆ ಹೋಗುತ್ತಿರುವ ಪರಿಸ್ಥಿತಿ ಸೇರಿದಂತೆ ವಿವಿಧ ಅಂಶಗಳ ಬಗ್ಗೆ ತಂಡಕ್ಕೆ ವಿವರಿಸಲಾಗಿದೆ ಎಂದರು.
ಕೇಂದ್ರ ತಂಡವು ಕೇವಲ ದಾಖಲೆಗಳನ್ನು ಪರಿಶೀಲಿಸುವುದಲ್ಲದೆ, ಸ್ಥಳಕ್ಕೆ ತೆರಳಿ ಬೆಳೆ ಹಾನಿ ಹಾಗೂ ಬರದ ನೈಜ ಪರಿಣಾಮವನ್ನು ಕಣ್ಣಾರೆ ಪರಿಶೀಲಿಸಲಿದೆ.
ನೈಜ ಸ್ಥಿತಿ ಪರಿಶೀಲಿಸಿ ಪರಿಹಾರ ನೀಡಿ
“ನಾವು ಕೇಳಿರುವ ಪರಿಹಾರದ ಮೊತ್ತಕ್ಕೆ ಸಂಬಂಧಿಸಿದಂತೆ ಅಗತ್ಯ ದಾಖಲೆಗಳನ್ನು ಸಲ್ಲಿಸಿದ್ದೇವೆ. ಅಧಿಕಾರಿಗಳು ಸ್ಥಳಕ್ಕೆ ತೆರಳಿ ನೈಜ ಪರಿಸ್ಥಿತಿಯನ್ನು ಕಣ್ಣಾರೆ ನೋಡಬೇಕು. ನಾವು ಕೇಳಿರುವ ಪರಿಹಾರವನ್ನು ನೀಡಬೇಕು” ಎಂದು ಪರಮೇಶ್ವರ್ ಹೇಳಿದರು.
ಬರದ ಪ್ರಮಾಣ ನಿರ್ಧರಿಸುವಾಗ ಮಳೆಯ ಕೊರತೆ ಮಾತ್ರವಲ್ಲದೆ ಬೆಳೆ ನಷ್ಟ, ಕುಡಿಯುವ ನೀರಿನ ಸಮಸ್ಯೆ, ಜಲಾಶಯಗಳು ಮತ್ತು ಕೆರೆಗಳಲ್ಲಿ ನೀರಿನ ಕೊರತೆ, ಜಾನುವಾರುಗಳಿಗೆ ನೀರು-ಮೇವು, ಜನರ ವಲಸೆ ಹಾಗೂ ರೈತರ ಮೇಲಿನ ಪರಿಣಾಮ ಸೇರಿದಂತೆ ಹಲವು ಅಂಶಗಳನ್ನು ಪರಿಗಣಿಸಲಾಗುತ್ತದೆ ಎಂದು ತಿಳಿಸಿದರು.
ರಾಜ್ಯದಲ್ಲಿ ಸುಮಾರು ೯ ಲಕ್ಷ ರೈತರು ಬೆಳೆ ವಿಮೆ ಮಾಡಿಸಿಕೊಂಡಿದ್ದು, ವಿಮಾ ವ್ಯವಸ್ಥೆ ಮತ್ತು ಬೆಳೆ ನಷ್ಟದ ಅಂಕಿಅಂಶಗಳ ಬಗ್ಗೆಯೂ ಕೇಂದ್ರ ತಂಡಕ್ಕೆ ಮಾಹಿತಿ ನೀಡಲಾಗಿದೆ ಎಂದರು.
‘ಪರಿಹಾರ ಕೊಡಲ್ಲ’ ಎಂದು ಮೊದಲೇ ಊಹಿಸಬೇಕೇ?
ಕೇಂದ್ರದಿಂದ ಬರ ಪರಿಹಾರ ಸಿಗುವ ಬಗ್ಗೆ ವಿಶ್ವಾಸವಿದೆಯೇ ಎಂಬ ಪ್ರಶ್ನೆಗೆ ಉತ್ತರಿಸಿದ ಪರಮೇಶ್ವರ್, “ನಮ್ಮ ಕರ್ತವ್ಯವನ್ನು ನಾವು ಮಾಡಬೇಕು. ಅವರು ಪರಿಹಾರ ಕೊಡಲ್ಲ ಎಂದು ನಾವು ಯಾಕೆ ಮೊದಲೇ ಊಹಿಸಿಕೊಳ್ಳಬೇಕು? ಕಾನೂನು ಚೌಕಟ್ಟಿನಡಿ ನೀಡಬೇಕಾದ ಪರಿಹಾರವನ್ನು ನೀಡುವಂತೆ ನಾವು ಕೇಳುತ್ತೇವೆ” ಎಂದು ಹೇಳಿದರು.
ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಕೂಡ ರಾಜ್ಯದ ಬರದ ಗಂಭೀರತೆಯನ್ನು ಕೇಂದ್ರ ತಂಡದ ಗಮನಕ್ಕೆ ತಂದಿದ್ದು, ರಾಜ್ಯಕ್ಕೆ ಅನುಕೂಲವಾಗುವ ರೀತಿಯಲ್ಲಿ ಪರಿಹಾರ ಒದಗಿಸುವಂತೆ ಮನವಿ ಮಾಡಿದ್ದಾರೆ ಎಂದು ಅವರು ತಿಳಿಸಿದರು.
‘ಹಸಿರು ಬರ’ದ ಬಗ್ಗೆಯೂ ಮನವರಿಕೆ
ರಾಜ್ಯದಲ್ಲಿ ಕೆಲವು ಪ್ರದೇಶಗಳಲ್ಲಿ ಮಳೆ ಬಂದಿರುವುದರಿಂದ ಬರದ ತೀವ್ರತೆ ಕಡಿಮೆಯಾಗಿದೆ ಎಂಬ ಅಭಿಪ್ರಾಯ ಸರಿಯಲ್ಲ ಎಂದು ಹೇಳಿದ ಪರಮೇಶ್ವರ್, ಎರಡು ದಿನ ಮಳೆಯಾದ ಮಾತ್ರಕ್ಕೆ ಬರದ ಪರಿಸ್ಥಿತಿಯ ಮೇಲೆ ದೊಡ್ಡ ಪರಿಣಾಮ ಬೀರುವುದಿಲ್ಲ ಎಂದರು.
“ಎರಡು ದಿನ ಮಳೆಯಾದರೆ ರೈತರಿಗೆ ತಕ್ಷಣ ಅನುಕೂಲವಾಗುವುದಿಲ್ಲ. ಈಗಾಗಲೇ ಆಗಿರುವ ಬೆಳೆ ನಷ್ಟವನ್ನು ಅದು ಸರಿಪಡಿಸುವುದಿಲ್ಲ. ಈ ವಿಚಾರವನ್ನೂ ಕೇಂದ್ರ ತಂಡಕ್ಕೆ ಮನವರಿಕೆ ಮಾಡಿದ್ದೇವೆ” ಎಂದು ಹೇಳಿದರು.
‘ಓವರ್‌ಲುಕ್ ಮಾಡುವುದಿಲ್ಲ’ ಎಂದ ತಂಡ
ಂದ್ರ ಬರ ಅಧ್ಯಯನ ತಂಡದೊಂದಿಗೆ ನಡೆದ ಚರ್ಚೆಯಲ್ಲಿ ರಾಜ್ಯದ ಮನವಿಯನ್ನು ಗಂಭೀರವಾಗಿ ಪರಿಗಣಿಸುವ ಭರವಸೆ ದೊರೆತಿದೆ ಎಂದು ಪರಮೇಶ್ವರ್ ಹೇಳಿದರು.
“ಯಾವುದನ್ನೂ ಓವರ್‌ಲುಕ್ ಮಾಡುವುದಿಲ್ಲ. ನ್ಯಾಯಸಮ್ಮತ ಹಾಗೂ ನೈಜ ಮೌಲ್ಯಮಾಪನ ಮಾಡುತ್ತೇವೆ ಎಂದು ಕೇಂದ್ರ ತಂಡದವರು ಹೇಳಿದ್ದಾರೆ” ಎಂದು ಅವರು ತಿಳಿಸಿದರು.






















