Home ಜಿಲ್ಲೆ ತುಮಕೂರು ಪಶುಪಾಲನ ಇಲಾಖೆ ಸವಲತ್ತು ರೈತರಿಗೆ ವಿತರಣೆ

ಪಶುಪಾಲನ ಇಲಾಖೆ ಸವಲತ್ತು ರೈತರಿಗೆ ವಿತರಣೆ

ಕುಣಿಗಲ್, ಜು. ೨೭- ಪಟ್ಟಣದ ಪಶುಪಾಲನೆ ಮತ್ತು ಪಶು ವೈದ್ಯಕೀಯ ಇಲಾಖೆ ವತಿಯಿಂದ ರೈತರಿಗೆ ವಿವಿಧ ಸವಲತ್ತು ವಿತರಿಸುವ ಕಾರ್ಯಕ್ರಮಕ್ಕೆ ಶಾಸಕ ಡಾ.ರಂಗನಾಥ್ ಚಾಲನೆ ನೀಡಿದರು.
ಕಾರ್ಯಕ್ರಮಲ್ಲಿ ೧೪ ಮೇವು ಕತ್ತರಿಸುವ ಯಂತ್ರ, ೬ ಹಾಲು ಕರೆಯುವ ಯಂತ್ರ, ೯೪ ರಬ್ಬರ್ ಮ್ಯಾಟ್‌ಗಳನ್ನು ರೈತರಿಗೆ ವಿತರಿಸಿದ ನಂತರ ಮಾತನಾಡಿದ ಶಾಸಕರು, ತಾಲ್ಲೂಕಿನಲ್ಲಿ ಪ್ರಸ್ತುತ ೩೦ ಪಶುಪಾಲನ ಆಸ್ಪತ್ರೆಗಳಿದ್ದು ವೈದ್ಯರು ಸಿಬ್ಬಂದಿಗಳು ಕೊರತೆ ಇರುವ ಕಾರಣ ಖಾಲಿ ಇರುವ ಕಡೆಗಳಲ್ಲಿ ಹೊರಗುತ್ತಿಗೆ ಆಧಾರದಲ್ಲಿ ಸಿಬ್ಬಂದಿಗಳನ್ನು ನೇಮಿಸಿ ರೈತರಿಗೆ ಸಮಸ್ಯೆಯಾಗದಂತೆ ಕ್ರಮ ವಹಿಸಲು ಅಧಿಕಾರಿಗಳಿಗೆ ಸೂಚಿಸಿದರು.


ರೈತರಿಗೆ ಹೈನುಗಾರಿಕೆಗೆ ಅವಶ್ಯಕವಾಗಿರುವ ಇನ್ನೂ ಹೆಚ್ಚಿನ ಸಲಕರಣೆ ವಿತರಿಸಲು ಪಶುಪಾಲನ ಇಲಾಖೆಯ ಹಿರಿಯ ಅಧಿಕಾರಿಗಳೊಂದಿಗೆ ಚರ್ಚಿಸಿ ಕ್ರಮ ವಹಿಸಲಾಗುವುದು. ತಾಲ್ಲೂಕಿನಲ್ಲಿ ಮಳೆ ಕೊರತೆಯ ಕಾರಣದಿಂದ ಹೈನುಗಾರಿಕೆ ಮೇಲೆ ಪರಿಣಾಮ ಬೀರಲಿದೆ. ಹೆಚ್ಚಿನ ರೈತರು ಹೈನುಗಾರಿಕೆ ನಂಬಿಕೊಂಡಿದ್ದು ಹಾಲು ಉತ್ಪಾದಕರ ಸಹಕಾರ ಸಂಘಗಳಿಗೆ ಹಾಲು ಹಾಕುತ್ತಿರುವ ಉತ್ಪಾದಕರಿಗೆ ಇನ್ನೂ ಸಂಘಗಳಲ್ಲಿ ಸದಸ್ಯತ್ವ ನೀಡಿಲ್ಲ ಎಂಬುದು ಗಮನಕ್ಕೆ ಬಂದಿದ್ದು ಅದನ್ನು ಮುಂದಿನ ದಿನಗಳಲ್ಲಿ ಸರಿಪಡಿಸುವ ಕೆಲಸ ಮಾಡಲಾಗುವುದು ಎಂದರು.


ಈ ಸಂದರ್ಭದಲ್ಲಿ ಪಶುಪಾಲನ ಇಲಾಖೆಯ ಮುಖ್ಯ ಆಡಳಿತ ವೈದ್ಯಾಧಿಕಾರಿ ಡಾ.ಸೀತಾರಾಮಯ್ಯ, ಮುಖ್ಯ ವೈದ್ಯಾಧಿಕಾರಿ ಡಾ.ನವೀನ್ ಸೇರಿದಂತೆ ಸಿಬ್ಬಂದಿವರ್ಗ ಹಾಗೂ ರೈತರು ಉಪಸ್ಥಿತರಿದ್ದರು.