
ಬೀದರ್: ನೆರೆಯ ಮಹಾರಾಷ್ಟ್ರದ ಪುಣೆ ಜಿಲ್ಲೆಯ ದೌಂಡ್ ತಾಲ್ಲೂಕಿನ ಬಿಗ್ವಾನ್ ಆಶ್ರಮದಲ್ಲಿ ಜೈ ಭಾರತ ಮಾತಾ ರಾಷ್ಟ್ರೀಯ ಸೇವಾ ಸಮಿತಿಯಿಂದ ಬುಧವಾರ ಆಯೋಜಿಸಿದ್ದ ಗುರು ಪೂರ್ಣಿಮೆ ಕಾರ್ಯಕ್ರಮದಲ್ಲಿ ಭಕ್ತರು ಸಮಿತಿಯ ರಾಷ್ಟ್ರೀಯ ಅಧ್ಯಕ್ಷ ಹವಾ ಮಲ್ಲಿನಾಥ ಮಹಾರಾಜರಿಗೆ ಗೌರವ ಸಮರ್ಪಿಸಿದರು.
ವಿವಿಧೆಡೆಯಿಂದ ಅಪಾರ ಸಂಖ್ಯೆಯಲ್ಲಿ ಆಗಮಿಸಿದ್ದ ಗುರುವಿನ ದರ್ಶನ ಪಡೆದರು. ಅವರ ಪಾದಕ್ಕೆ ನಮಸ್ಕರಿಸಿದರು. ಹೂಮಾಲೆ ಹಾಕಿ, ಶಾಲು ಹೊದಿಸಿ ಸತ್ಕರಿಸಿ ಧನ್ಯತಾ ಭಾವದಿಂದ ಬೀಗಿದರು.
ಹವಾ ಮಲ್ಲಿನಾಥ ಮಹಾರಾಜರು ಭಕ್ತರಿಗೆ ಪ್ರಸಾದ ನೀಡಿ ಆಶೀರ್ವದಿಸಿದರು.
ಮಾಜಿ ಸಚಿವ ರಾಜಶೇಖರ ಪಾಟೀಲ ಹುಮನಾಬಾದ್ ಅವರು ಗುರು ಪೂರ್ಣಿಮೆ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಪ್ರೇಮಾ ಆರ್. ಪಾಟೀಲ, ಜೈ ಭಾರತ ಮಾತಾ ರಾಷ್ಟ್ರೀಯ ಸೇವಾ ಸಮಿತಿಯ ಭಾಲ್ಕಿ ತಾಲ್ಲೂಕು ಅಧ್ಯಕ್ಷ ಪಪ್ಪು ಪಾಟೀಲ ಖಾನಾಪುರ ಮತ್ತಿತರರು ಇದ್ದರು.






























