
ಕಲಬುರಗಿ,ಆ.21-ಅಕ್ಷರ ದಾಸೋಹ ಯೋಜನೆ ಅಡಿಯಲ್ಲಿ ಸುಮಾರು 26 ವರ್ಷಗಳಿಂದ ಅಲ್ಪ ಗೌರವ ಧನದಲ್ಲಿ ಸೇವೆ ಸಲ್ಲಿಸುತ್ತಿರುವ ಬಿಸಿಯೂಟ ನೌಕರರ ಗೌರವಧನವನ್ನು 10 ಸಾವಿರ ರೂ.ಗೆ ಹೆಚ್ಚಿಸಬೇಕು ಎಂದು ಆಗ್ರಹಿಸಿ ಕರ್ನಾಟಕ ಸಮತಾ ಸೈನಿಕ ದಳ ರಾಜ್ಯ ಉಪಾಧ್ಯಕ್ಷ ಸಂಜೀವ ಟಿ.ಮಾಲೆ, ಜಿಲ್ಲಾ ಅಧ್ಯಕ್ಷ ಈರಣ್ಣಾ ಜಾನೆ, ಮಹಿಳಾ ಘಟಕದ ಜಿಲ್ಲಾ ಅಧ್ಯಕ್ಷೆ ಶಿವಲಿಂಗಮ್ಮ ಸಾವಳಗಿ ಅವರ ನೇತೃತ್ವದಲ್ಲಿ ಗುರುವಾರ ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿಗಳ ಮುಖಾಂತರ ಮುಖ್ಯಮಂತ್ರಿಗಳಿಗೆ ಮನವಿ ಪತ್ರ ಸಲ್ಲಿಸಲಾಯಿತು.
ಬಿಸಿಯೂಟ ನೌಕರರು ಅತ್ಯಂತ ಕಡಿಮೆ ಸಂಬಳದಲ್ಲಿ ಸುಮಾರು 26 ವರ್ಷಗಳಿಂದ ಅಚ್ಚುಕಟ್ಟಾಗಿ ಕೆಲಸ ನಿರ್ವಹಿಸುತ್ತಿದ್ದಾರೆ. ಅವರಿಗೆ ಸದ್ಯ ನೀಡುತ್ತಿರುವ ಗೌರವಧನ ಕುಟುಂಬ ನಿರ್ವಹಣೆಗೆ ಸಾಕಾಗುತ್ತಿಲ್ಲ. ಮಕ್ಕಳ ಪಾಲನೆ, ಪೋಷಣೆ ಮತ್ತು ವಿದ್ಯಾಭ್ಯಾಸದ ಖರ್ಚು ಭರಿಸಲು ತುಂಬಾ ತೊಂದರೆ ಅನುಭವಿಸುತ್ತಿದ್ದಾರೆ. ಆದ್ದರಿಂದ ಸಮಾನ ಕೆಲಸಕ್ಕೆ ಸಮಾನ ವೇತನ ನೀಡಬೇಕು. ಮುಖ್ಯ ಅಡುಗೆಯವರಿಗೆ 10 ಸಾವಿರ ಮತ್ತು ಅಡುಗೆ ಸಹಾಯಕರಿಗೆ 8 ಸಾವಿರ ಮಾಸಿಕ ಗೌರವಧನ ನೀಡಬೇಕು, ಬಿಸಿಯೂಟ ನೌಕರರನ್ನು ಖಾಯಂಗೊಳಿಸಬೇಕು, ಹೆರಿಗೆ ಭತ್ಯೆ ಮತ್ತು ಹೆರಿಗೆ ರಜೆ ಮಂಜೂರು ಮಾಡಬೇಕು, ಬಿಸಿಯೂಟ ನೌಕರರು ಆಕಸ್ಮಿಕವಾಗಿ ಮರಣ ಹೊಂದಿದರೆ ಅದೇ ಹುದ್ದೆಯಲ್ಲಿ ಅವರ ಕುಟುಂಬದ ಸದಸ್ಯರಿಗೆ ನೇಮಕ ಮಾಡಿಕೊಳ್ಳಬೇಕು, ಬಿಸಿಯೂಟ ನೌಕರರು ನಿವೃತ್ತಿ ಹೊಂದಿದ ಮೇಲೆ ಜೀವನ ನಡೆಸಲು ಮಾಸಿಕ 3 ಸಾವಿರ ರೂ.ಮಂಜೂರು ಮಾಡಬೇಕು, ಸರ್ಕಾರ ಮುಖ್ಯೋಪಾಧ್ಯಾಯರ ಮತ್ತು ಎಸ್ಡಿಎಂಸಿ ಅಧ್ಯಕ್ಷರ ಮಧ್ಯೆ ಜಂಟಿ ಖಾತೆ ಮಾಡಿರುವುದನ್ನು ರದ್ದು ಪಡಿಸಿ ಮೊದಲಿನ ಆದೇಶದಂತ ಮುಂದುವರಿಸಬೇಕು, ಬಿಸಿಯೂಟ ನೌಕರರನ್ನು ಪ್ರತಿ ವರ್ಷ ಮಾರ್ಚ 31 ರಂದು ಬಿಡುಗಡೆ ಮಾಡಿ, ಜೂನ್ ತಿಂಗಳಲ್ಲಿ ಪುನ: ನೇಮಕ ಮಾಡಿಕೊಳ್ಳುತ್ತಿರುವುದನ್ನು ಕೈ ಬಿಟ್ಟು ಬಿಸಿಯೂಟ ಸಿಬ್ಬಂದಿಯನ್ನು ಸರ್ಕಾರದ ಹಂತದಲ್ಲೇ ನೇಮಕ ಮಾಡಬೇಕು ಎಂದು ಮನವಿ ಪತ್ರದಲ್ಲಿ ಒತ್ತಾಯಿಸಲಾಗಿದೆ.
ಸಂಘಟನೆಯ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅಪ್ಪಾರಾವ ಎಸ್.ಭಾವಿಮನಿ, ಶರಣು ಕಡಗಂಚಿ, ಪದ್ಮಾವತಿ ಅಟ್ಟೂರ, ಅಮೃತರಾವ ನಾಯಿಕೋಡಿ, ವಿಜಯಕುಮಾರ ಉದ್ದಾ, ಶರಣು ಮುದ್ನಾಳಕರ, ಖತಲಪ್ಪ ಕಟ್ಟಿಮನಿ, ಮಹಾದೇವಿ ಜಾಧವ, ಮಲ್ಲಿಕಾರ್ಜುನ ಉದಯಕರ, ಇಂದುಮತಿ ಭರತನೂರ, ಮಲ್ಲು ನಂದೂರ, ಮಹಾದೇವಿ ಬಾಪುನಗರ ಸೇರಿದಂತೆ ಮತ್ತಿತರರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.































