Home ಜಿಲ್ಲೆ ಖಾಶೆಂಪೂರ ಗ್ರಾಮದಲ್ಲಿ ಉದ್ಯೋಗ ಖಾತ್ರಿ ಯೋಜನೆ ಜಾರಿಗೊಳಿಸುವಂತೆ ಆಗ್ರಹ

ಖಾಶೆಂಪೂರ ಗ್ರಾಮದಲ್ಲಿ ಉದ್ಯೋಗ ಖಾತ್ರಿ ಯೋಜನೆ ಜಾರಿಗೊಳಿಸುವಂತೆ ಆಗ್ರಹ

ಬೀದರ:ಜೂ.2: ಬೀದರ ತಾಲೂಕಿನ ಕಾಡವಾದ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಖಾಶೆಂಪೂರ (ಪಿ) ಗ್ರಾಮದಲ್ಲಿ (ಗಿಃ -ಉ ಖಂಒ ಉ) ವಿಕಾಸಿತ್ ಭಾರತ ಗ್ಯಾರಂಟಿ ಫಾರ್ ರೋಜಗಾರ್ ಮತ್ತು ಅಜೀವಿಕಾ ಮಿಷನ್ (ಗ್ರಾಮೀಣ) ಯೋಜನೆಯನ್ನು ತಕ್ಷಣ ಪುನರಾರಂಭಿಸಿ ಕೂಲಿ ಕಾರ್ಮಿಕರಿಗೆ ಉದ್ಯೋಗ ಕಲ್ಪಿಸಬೇಕು ಎಂದು ಇಂಡಿಯನ್ ನ್ಯಾಷನಲ್ ಭೀಮ್ ಆರ್ಮಿಯ ಸಂಸ್ಥಾಪಕ ರಾಜ್ಯಾಧ್ಯಕ್ಷ ದಿಲೀಪಕುಮಾರ ವರ್ಮಾ ಅವರು ಒತ್ತಾಯಿಸಿದ್ದಾರೆ.

ಈ ಕುರಿತು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ಸಲ್ಲಿಸಿದ ಮನವಿಯಲ್ಲಿ, ಕಳೆದ ಒಂದು ವರ್ಷದಿಂದ ಖಾಶೆಂಪೂರ ಗ್ರಾಮದಲ್ಲಿ ಯೋಜನೆ ಸ್ಥಗಿತಗೊಂಡಿರುವುದರಿಂದ ನೂರಾರು ಕೂಲಿ ಕಾರ್ಮಿಕರು ಉದ್ಯೋಗವಿಲ್ಲದೆ ಸಂಕಷ್ಟ ಅನುಭವಿಸುತ್ತಿದ್ದಾರೆ ಎಂದು ಆರೋಪಿಸಲಾಗಿದೆ.

ಗ್ರಾಮೀಣ ಪ್ರದೇಶಗಳಲ್ಲಿ ಉದ್ಯೋಗ ಖಾತ್ರಿ ಯೋಜನೆಯಡಿ ಸರ್ಕಾರ 100 ದಿನಗಳಿಂದ 125 ದಿನಗಳವರೆಗೆ ಉದ್ಯೋಗಾವಕಾಶವನ್ನು ವಿಸ್ತರಿಸಿದ್ದರೂ, ಸ್ಥಳೀಯ ಅಧಿಕಾರಿಗಳು ನಿಯಮಗಳನ್ನು ಸಮರ್ಪಕವಾಗಿ ಜಾರಿಗೊಳಿಸುತ್ತಿಲ್ಲ ಎಂದು ಸಂಘಟನೆ ದೂರಿದೆ. ಕಾರ್ಮಿಕರು ಕೆಲಸಕ್ಕಾಗಿ ಅರ್ಜಿ ಸಲ್ಲಿಸಿದ 15 ದಿನಗಳೊಳಗೆ ಉದ್ಯೋಗ ನೀಡದಿದ್ದರೆ ನಿರುದ್ಯೋಗ ಭತ್ಯೆ ನೀಡಬೇಕೆಂಬ ನಿಯಮವಿದ್ದರೂ, ಕಳೆದ ಒಂದು ವರ್ಷದಿಂದ ಯಾವುದೇ ಭತ್ಯೆ ನೀಡದೇ ಕಾರ್ಮಿಕರ ಹಕ್ಕುಗಳನ್ನು ನಿರ್ಲಕ್ಷಿಸಲಾಗಿದೆ ಎಂದು ಮನವಿಯಲ್ಲಿ ಉಲ್ಲೇಖಿಸಲಾಗಿದೆ.

ಆದ್ದರಿಂದ ಸಂಬಂಧಿಸಿದ ಅಧಿಕಾರಿಗಳು ಕೂಡಲೇ ಯೋಜನೆಯನ್ನು ಪುನರಾರಂಭಿಸಿ ಖಾಶೆಂಪೂರ ಗ್ರಾಮದ ಕೂಲಿ ಕಾರ್ಮಿಕರಿಗೆ ಉದ್ಯೋಗ ಒದಗಿಸುವಂತೆ ಇಂಡಿಯನ್ ನ್ಯಾಷನಲ್ ಭೀಮ್ ಆರ್ಮಿ ಆಗ್ರಹಿಸಿದೆ.

ಒಂದು ವಾರದೊಳಗೆ ಕ್ರಮ ಕೈಗೊಳ್ಳದಿದ್ದಲ್ಲಿ ಕಾಡವಾದ ಗ್ರಾಮ ಪಂಚಾಯಿತಿ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಲಾಗುವುದು ಎಂದು ಸಂಘಟನೆ ಎಚ್ಚರಿಕೆ ನೀಡಿದೆ.

ಈ ಸಂದರ್ಭದಲ್ಲಿ ಇಂಡಿಯನ್ ನ್ಯಾಷನಲ್ ಭೀಮ್ ಆರ್ಮಿಯ ರಾಜ್ಯ ಸಂಚಾಲಕ ರಾಜಶೇಖರ ಶೇರಿಕಾರ, ಬೀದರ ದಕ್ಷಿಣ ಕ್ಷೇತ್ರದ ತಾಲ್ಲೂಕು ಅಧ್ಯಕ್ಷ ಶ್ರೀಕಾಂತ ಸಾಗರ, ಪ್ರಧಾನ ಕಾರ್ಯದರ್ಶಿ ಪೀಟರ್ ಲಾಯನ್, ತಾಲ್ಲೂಕು ಉಪಾಧ್ಯಕ್ಷ ಅನೀಲಕುಮಾರ ಬಾಜಿ, ಭಾಲ್ಕಿ ತಾಲ್ಲೂಕು ಅಧ್ಯಕ್ಷ ಮಹೇಂದ್ರ ಕಾಂಬಳೆ, ಸಂಘಟನಾ ಕಾರ್ಯದರ್ಶಿ ರಜನಿಕಾಂತ ಬಾಲೆಬೈ, ಖಾಶೆಂಪೂರ ಗ್ರಾಮ ಘಟಕದ ಅಧ್ಯಕ್ಷ ಅಮರ ಸಿಂಧೆ, ಸಂಘಟನಾ ಕಾರ್ಯದರ್ಶಿ ಪ್ರವೀಣ ಗುಪ್ತಾ, ಜಿಲ್ಲಾ ಉಪಾಧ್ಯಕ್ಷ ಭೀಮರಾವ ಖಂದಾರೆ, ಭಾಲ್ಕಿ ತಾಲ್ಲೂಕು ಪ್ರಧಾನ ಕಾರ್ಯದರ್ಶಿ ಸುದರ್ಶನ ಭಾಗ್ಯಕರ್ ಹಾಗೂ ಗ್ರಾಮ ಘಟಕದ ಉಪಾಧ್ಯಕ್ಷ ವಿಕ್ಕಿ ಸಿಂಧೆ ಸೇರಿದಂತೆ ಇತರರು ಉಪಸ್ಥಿತರಿದ್ದರು.