
ಡಿಜಿಪಿ- ಐಜಿಪಿಗೆ ಮನವಿ
ಬೆಂಗಳೂರು.ಅ.೩- ಎಸ್‌ಐಆರ್ ಸಂದರ್ಭದಲ್ಲಿ ಚುನಾವಣಾ ಆಯೋಗದ ಫಾರ್ಮ-೭ ಸಲ್ಲಿಕೆ ವಿಚಾರವಾಗಿ ರಾಜ್ಯದ ವಿವಿಧೆಡೆ ಬಿಜೆಪಿ ಕಾರ್ಯಕರ್ತರ ವಿರುದ್ಧ ಎಫ್‌ಐಆರ್ ದಾಖಲಾಗಿರುವ ಹಿನ್ನೆಲೆ, ಬಿಜೆಪಿ ನಾಯಕರು ಡಿಜಿ&ಐಜಿಪಿ ಡಾ. ಎಂ.ಎ. ಸಲೀಂ ಅವರನ್ನು ಭೇಟಿಯಾಗಿ ಮನವಿ ಸಲ್ಲಿಸಿದರು.
ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ವೈ. ವಿಜಯೇಂದ್ರ, ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್. ಅಶೋಕ್, ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ, ಶಾಸಕ ಅಶ್ವತ್ಥ್ ನಾರಾಯಣ ಹಾಗೂ ಸಂಸದ ಪಿ.ಸಿ. ಮೋಹನ್ ಸೇರಿದಂತೆ ಹಲವು ನಾಯಕರು ಡಿಜಿ ಮತ್ತುಐಜಿಪಿ ಅವರನ್ನು ಭೇಟಿ ಮಾಡಿ ಬಿಜೆಪಿ ಕಾರ್ಯಕರ್ತರ ವಿರುದ್ಧ ದಾಖಲಾಗಿರುವ ಪ್ರಕರಣಗಳನ್ನು ಸ್ಥಗಿತಗೊಳಿಸುವಂತೆ ಹಾಗೂ ಕಾರ್ಯಕರ್ತರಿಗೆ ಕಿರುಕುಳ ನೀಡದಂತೆ ಕ್ರಮ ಕೈಗೊಳ್ಳಬೇಕು ಎಂದು ನಾಯಕರು ಒತ್ತಾಯಿಸಿದರು.
ಬಳಿಕ ಮಾತನಾಡಿದ ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ, ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ.ಬಿಜೆಪಿ ಕಾರ್ಯಕರ್ತರಿಗೆ ಕಿರುಕುಳ ನೀಡುವುದನ್ನು ಸಹಿಸಲು ಸಾಧ್ಯವಿಲ್ಲ. ಕಾರ್ಯಕರ್ತರ ವಿರುದ್ಧ ದಾಖಲಾಗಿರುವ ಎಫ್‌ಐಆರ್‌ಗಳನ್ನು ಇಲ್ಲಿಗೇ ನಿಲ್ಲಿಸಬೇಕು. ಇಲ್ಲದಿದ್ದರೆ ರಾಜ್ಯಾದ್ಯಂತ ಹೋರಾಟ ನಡೆಸುವುದಾಗಿ ಡಿಜಿಮತ್ತುಐಜಿಪಿಗೆ ತಿಳಿಸಿದ್ದೇವೆ ಎಂದು ಹೇಳಿದರು.
ಫಾರ್ಮ್-೭ ಅರ್ಜಿಗಳು ಸರಿಯಾಗಿದ್ದರೆ ಅವುಗಳನ್ನು ಪರಿಗಣಿಸಬೇಕು,ಇಲ್ಲದಿದ್ದರೆ ಚುನಾವಣಾ ನಿಯಮಗಳ ಪ್ರಕಾರ ತಿರಸ್ಕರಿಸಬೇಕು.ಪೊಲೀಸರು ಸರ್ಕಾರವನ್ನು ಮೆಚ್ಚಿಸಲು ಪ್ರಕರಣ ದಾಖಲಿಸುತ್ತಿದ್ದಾರೆ ಎಂದು ಯಡಿಯೂರಪ್ಪ ಹೇಳಿದರು.
ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್. ಅಶೋಕ್, ಫಾರ್ಮ್-೭ ಸಲ್ಲಿಸುವುದು ಸಂವಿಧಾನಬದ್ಧ ಹಕ್ಕು ಎಂದು ಪ್ರತಿಪಾದಿಸಿದರು. ಫಾರ್ಮ್-೭ ಸಲ್ಲಿಸಿದವರ ವಿರುದ್ಧ ಪ್ರಕರಣ ದಾಖಲಿಸಲು ಒತ್ತಡ ಹೇರಲಾಗುತ್ತಿದೆ ಮತ್ತು ಅದರ ಪರಿಣಾಮವಾಗಿ ಬಿಜೆಪಿ ಕಾರ್ಯಕರ್ತರ ವಿರುದ್ಧ ಪ್ರಕರಣಗಳು ದಾಖಲಾಗುತ್ತಿವೆ ಎಂದು ಆರೋಪಿಸಿದರು.
ಫಾರ್ಮ್-೭ ಅರ್ಜಿಗಳ ಮೂಲಕ ಅಕ್ರಮವಾಗಿ ಮತದಾರರ ಪಟ್ಟಿಗೆ ಹೆಸರು ಸೇರ್ಪಡೆಗೊಂಡಿರುವುದನ್ನು ಪ್ರಶ್ನಿಸುವ ಪ್ರಯತ್ನ ನಡೆದಿದೆ. ಬೆಂಗಳೂರಿನ ಕೋಗಿಲು ಲೇಔಟ್‌ನಲ್ಲಿ ಅಕ್ರಮ ಬಾಂಗ್ಲಾದೇಶಿ ವಲಸಿಗರನ್ನು ಮತದಾರರ ಪಟ್ಟಿಗೆ ಸೇರಿಸುವ ಪ್ರಯತ್ನ ನಡೆದಿದೆ ಎಂಬ ಆರೋಪವನ್ನೂ ಅವರು ಮಾಡಿದರು. ಈ ಕುರಿತು ತಮ್ಮ ಪಕ್ಷ ಹೋರಾಟ ನಡೆಸಿದೆ ಎಂದು ತಿಳಿಸಿದರು.
ರಾಜ್ಯದಲ್ಲಿ ಲಕ್ಷಾಂತರ ಅಕ್ರಮ ವಲಸಿಗರನ್ನು ಮತದಾರರನ್ನಾಗಿ ಸೇರಿಸಲು ಕಾಂಗ್ರೆಸ್ ಪ್ರಯತ್ನಿಸುತ್ತಿದೆ ಎಂಬುದು ಬಿಜೆಪಿ ನಾಯಕರ ಆರೋಪವಾಗಿದೆ. ಆದರೆ, ಈ ಆರೋಪಗಳಿಗೆ ಸಂಬಂಧಿಸಿದಂತೆ ಸರ್ಕಾರ ಅಥವಾ ಕಾಂಗ್ರೆಸ್‌ನ ಅಧಿಕೃತ ಪ್ರತಿಕ್ರಿಯೆ ಅಗತ್ಯವಾಗಿದೆ. ಚುನಾವಣಾ ಆಯೋಗದ ವೆಬ್‌ಸೈಟ್‌ನಲ್ಲೇ ಫಾರ್ಮ್-೭ ಲಭ್ಯವಿದ್ದು, ಅದನ್ನು ಯಾರೂ ಪಡೆದು ಸಲ್ಲಿಸಬಹುದು. ಬಿಜೆಪಿ ಅಥವಾ ಆರ್‌ಎಸ್‌ಎಸ್ ಕಚೇರಿಗಳಲ್ಲಿ ಫಾರ್ಮ್-೭ ಮುದ್ರಿಸಿ ಹಂಚಲಾಗಿದೆ ಎಂಬ ಆರೋಪ ಸತ್ಯವಲ್ಲ ಎಂದು ಅಶೋಕ್ ಹೇಳಿದರು.
ಬಿಜೆಪಿ ಕಾರ್ಯಕರ್ತರನ್ನು ಬಂಧಿಸಿದರೆ ಪೊಲೀಸ್ ಠಾಣೆಗಳ ಮುಂದೆ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಕೆ ನೀಡಿದ ಅಶೋಕ್, ಪ್ರಕರಣ ದಾಖಲಿಸುವ ಮುನ್ನ ಪೊಲೀಸರು ಹಲವು ಬಾರಿ ಪರಿಶೀಲಿಸಬೇಕು.ಕಾನೂನನ್ನು ಕೈಗೆ ತೆಗೆದುಕೊಳ್ಳಬಾರದು ಎಂದು ಬಿಜೆಪಿ ನಾಯಕರಿಗೂ ಕಾರ್ಯಕರ್ತರಿಗೂ ಸೂಚಿಸಿರುವುದಾಗಿ ಅವರು ತಿಳಿಸಿದರು.
ಇದೇ ವೇಳೆ, ಫಾರ್ಮ್-೭ ವಿಚಾರಕ್ಕೆ ಸಂಬಂಧಿಸಿದಂತೆ ಎಸ್‌ಐಟಿ ರಚನೆ ಕುರಿತು ಪ್ರತಿಕ್ರಿಯಿಸಿದ ಬಿ.ವೈ. ವಿಜಯೇಂದ್ರ, ಯಾವುದೇ ತನಿಖೆ ಅಥವಾ ಒತ್ತಡಕ್ಕೂ ಬಿಜೆಪಿ ಹೆದರುವುದಿಲ್ಲ. ಅಧಿಕಾರ ಯಾರೊಬ್ಬರ ವೈಯಕ್ತಿಕ ಆಸ್ತಿಯಲ್ಲ ಎಂದು ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ ಅವರು, ಸರ್ಕಾರ ಇದೇ ರೀತಿಯ ಕ್ರಮ ಮುಂದುವರಿಸಿದರೆ ಬಿಜೆಪಿ ಬೀದಿಗಿಳಿದು ಹೋರಾಟ ನಡೆಸಲಿದೆ ಎಂದು ಎಚ್ಚರಿಕೆ ನೀಡಿದರು.






















