Home ಜಿಲ್ಲೆ ವಿಜಯಪುರ ಜಿಲ್ಲೆಯನ್ನು ಬರಪೀಡಿತ ಜಿಲ್ಲೆ ಎಂದು ಘೋಷಿಸಿ: ರೈತ ಸಂಘ ಆಗ್ರಹ

ವಿಜಯಪುರ ಜಿಲ್ಲೆಯನ್ನು ಬರಪೀಡಿತ ಜಿಲ್ಲೆ ಎಂದು ಘೋಷಿಸಿ: ರೈತ ಸಂಘ ಆಗ್ರಹ

ವಿಜಯಪುರ, ಜು.31: ಜಿಲ್ಲೆಯಾದ್ಯಂತ ಸಮರ್ಪಕ ಮಳೆಯಾಗದೇ ರೈತರು ಸಂಕಷ್ಟಕ್ಕೆ ಸಿಲುಕಿರುವ ಹಿನ್ನೆಲೆಯಲ್ಲಿ ವಿಜಯಪುರ ಜಿಲ್ಲೆಯ ಎಲ್ಲ 13 ತಾಲೂಕುಗಳನ್ನು ತಕ್ಷಣವೇ ಬರಪೀಡಿತ ಪ್ರದೇಶವೆಂದು ಘೋಷಿಸಿ, ಪ್ರತಿ ಎಕರೆಗೆ ?25 ಸಾವಿರ ಪರಿಹಾರ ನೀಡಬೇಕು ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಒತ್ತಾಯಿಸಿದೆ.
ಈ ಕುರಿತು ಅಪರ ಜಿಲ್ಲಾಧಿಕಾರಿ ಡಾ. ಔದ್ರಾಮ್ ಅವರ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಿದ ಸಂಘದ ಜಿಲ್ಲಾ ಅಧ್ಯಕ್ಷ ಸಂಗಮೇಶ ಸಗರ ಮಾತನಾಡಿ, ಕಳೆದ ವರ್ಷ ಇದೇ ಅವಧಿಯಲ್ಲಿ 158 ಮಿ.ಮೀ. ಮಳೆಯಾಗಿದ್ದರೆ, ಈ ವರ್ಷ ಜಿಲ್ಲೆಯ ಬಹುತೇಕ ಭಾಗಗಳಲ್ಲಿ ಅಷ್ಟೂ ಪ್ರಮಾಣದ ಮಳೆಯಾಗಿಲ್ಲ. ಆದರೆ ಅಧಿಕೃತ ವರದಿಯಲ್ಲಿ 138 ಮಿ.ಮೀ. ಮಳೆಯಾಗಿದೆ ಹಾಗೂ ಕೇವಲ ಶೇ.10ರಷ್ಟು ಮಳೆ ಕೊರತೆಯಾಗಿದೆ ಎಂದು ತಪ್ಪು ಮಾಹಿತಿ ನೀಡಲಾಗಿದೆ ಎಂದು ಆರೋಪಿಸಿದರು.
ಜಿಲ್ಲೆಯಲ್ಲಿರುವ ಹಲವು ಮಳೆ ಮಾಪನ ಕೇಂದ್ರಗಳು ಸಮರ್ಪಕವಾಗಿ ಕಾರ್ಯನಿರ್ವಹಿಸುತ್ತಿಲ್ಲ. ಹೀಗಾಗಿ ಮಳೆ ದಾಖಲೆಗಳ ಕುರಿತು ಸಮಗ್ರ ತನಿಖೆ ನಡೆಸಿ, ಎಲ್ಲ ಕೇಂದ್ರಗಳ ವರದಿಯನ್ನು ಮರುಪರಿಶೀಲಿಸಿ ವಿಜಯಪುರ ಜಿಲ್ಲೆಯನ್ನು ಬರಪೀಡಿತ ಜಿಲ್ಲೆ ಎಂದು ಘೋಷಿಸಬೇಕು ಎಂದು ಅವರು ಆಗ್ರಹಿಸಿದರು.
ತಾಲೂಕು ಅಧ್ಯಕ್ಷ ಅನಮೇಶ ಜಮಖಂಡಿ ಮಾತನಾಡಿ, ರೈತರು ಸಾಲ ಮಾಡಿ ಬೀಜ, ಗೊಬ್ಬರ ಖರೀದಿಸಿದ್ದರೂ ಮಳೆಯ ಕೊರತೆಯಿಂದ ಬಿತ್ತನೆ ಮಾಡಲು ಸಾಧ್ಯವಾಗಿಲ್ಲ. ಕೆಲವರು ಬಿತ್ತನೆ ಮಾಡಿದ ಬೆಳೆ ಕೂಡ ಒಣಗುವ ಸ್ಥಿತಿಯಲ್ಲಿದೆ. ರೈತರು ತೀವ್ರ ಆರ್ಥಿಕ ಸಂಕಷ್ಟದಲ್ಲಿದ್ದು ಆತ್ಮಹತ್ಯೆಯಂತಹ ದುರ್ಘಟನೆಗಳು ಸಂಭವಿಸದಂತೆ ಸರ್ಕಾರ ತುರ್ತು ನೆರವು ನೀಡಬೇಕು ಎಂದರು.
ಪ್ರತಿ ಎಕರೆಗೆ ?25 ಸಾವಿರ ಪರಿಹಾರ, ಜಾನುವಾರುಗಳಿಗೆ ಮೇವು ಹಾಗೂ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸುವುದರ ಜೊತೆಗೆ ಜಿಲ್ಲೆಯಲ್ಲಿ ಹಳ್ಳ, ಕೊಳ್ಳ ಮತ್ತು ಕೆರೆಗಳನ್ನು ನೀರಿನಿಂದ ತುಂಬಿಸುವ ಕ್ರಮ ಕೈಗೊಳ್ಳಬೇಕು ಎಂದು ಸಂಘ ಮನವಿಯಲ್ಲಿ ಒತ್ತಾಯಿಸಿದೆ.
ಈ ಸಂದರ್ಭದಲ್ಲಿ ರಾಮನಗೌಡ ಪಾಟೀಲ, ಸಂಗಪ್ಪ ತಕ್ಕೆ, ಮಹಾದೇವ ಬನಸೋಡೆ, ರಾಮಸಿಂಗ್ ರಜಪೂತ, ಬಸಗೊಂಡ ತೇಲಿ, ಗೋರಕನಾಥ ಗೇರಡೆ, ಸುಭಾಷ ಹಿಟ್ನಳ್ಳಿ, ಶಟ್ಟು ಜಾಧವ, ಪ್ರಕಾಶ ವಂಬಾಸೆ, ಮುದಕಣ್ಣ ಯಂಕಂಚಿ, ರಾಘವೇಂದ್ರ ಗೇರಡೆ, ಮೃತ್ಯುಂಜಯ ನುಚ್ಚಿ, ಬಸವರಾಜ ಉಕ್ಕಲಿ ಸೇರಿದಂತೆ ರೈತ ಸಂಘದ ಪದಾಧಿಕಾರಿಗಳು ಮತ್ತು ಸದಸ್ಯರು ಉಪಸ್ಥಿತರಿದ್ದರು.