
ಮೈಸೂರು, ಜೂ.15: ನಗರದ ದಟ್ಟಗಳ್ಳಿ ಸಮೀಪದ ‘ಫಾಕ್ಸ್ ಡೆನ್ ಲಿಕ್ಕರ್ ಗ್ಯಾರೇಜ್’ನಲ್ಲಿ ಸಂಜೆ ಸಿಲಿಂಡರ್ ಸ್ಫೋಟಗೊಂಡು ಸಂಭವಿಸಿದ ಭೀಕರ ಬೆಂಕಿ ಅವಘಡದಲ್ಲಿ ಪ್ರಕಾಶ್ ಮತ್ತು ಸುಹಲ್ ಎಂಬುವವರು ಮೃತಪಟ್ಟಿದ್ದು, ಹಲವರು ಗಾಯಗೊಂಡಿದ್ದಾರೆ.
ಇಬ್ಬರ ದುರ್ಮರಣ:
ಅವಘಡದ ವೇಳೆ ಪಬ್‌ನಲ್ಲಿದ್ದ ಪ್ರಕಾಶ್ ಮತ್ತು ಸುಹಲ್ ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ಪೊಲೀಸರು ಖಚಿತಪಡಿಸಿದ್ದಾರೆ. ಮೃತರ ಪೂರ್ಣ ವಿವರ ಇನ್ನಷ್ಟೇ ಲಭ್ಯವಾಗಬೇಕಿದೆ.
ಹಲವರಿಗೆ ಸುಟ್ಟ ಗಾಯ:
ಸ್ಫೋಟದ ತೀವ್ರತೆಗೆ ಹಲವರಿಗೆ ಸುಟ್ಟ ಗಾಯಗಳಾಗಿದ್ದು, ಗಾಯಾಳುಗಳನ್ನು ತಕ್ಷಣ ಕೆ.ಆರ್. ಆಸ್ಪತ್ರೆ ಹಾಗೂ ಅಪೋಲೋ ಆಸ್ಪತ್ರೆಗೆ ದಾಖಲಿಸಲಾಗಿದೆ. ಇಬ್ಬರ ಸ್ಥಿತಿ ಚಿಂತಾಜನಕವಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ.
ದಟ್ಟ ಹೊಗೆ, ಆತಂಕದಲ್ಲಿ ಜನ:
ಸ್ಫೋಟದ ಬಳಿಕ ಕಟ್ಟಡದಲ್ಲಿ ದಟ್ಟ ಹೊಗೆ ಆವರಿಸಿತ್ತು. ಜೀವಭಯದಿಂದ ಆತಂಕಗೊಂಡ ಕೆಲವರು ಮೇಲಂತಸ್ತಿನಿಂದ ಜಿಗಿದು ಪಾರಾಗಲು ಯತ್ನಿಸಿದರು. ಸ್ಥಳದಲ್ಲಿ ಕೆಲಕಾಲ ಗೊಂದಲ, ಆಕ್ರಂದನದ ವಾತಾವರಣ ನಿರ್ಮಾಣವಾಗಿತ್ತು.
ಅಗ್ನಿಶಾಮಕ ದಳದಿಂದ ಕಾರ್ಯಾಚರಣೆ:
ವಿಷಯ ತಿಳಿಯುತ್ತಿದ್ದಂತೆ ಅಗ್ನಿಶಾಮಕ ದಳದ ಎರಡು ವಾಹನಗಳು ಸ್ಥಳಕ್ಕೆ ಧಾವಿಸಿ ಬೆಂಕಿಯನ್ನು ನಿಯಂತ್ರಣಕ್ಕೆ ತಂದವು. ಸ್ಥಳೀಯರ ನೆರವಿನಿಂದ ಹೆಚ್ಚಿನ ಅನಾಹುತ ತಪ್ಪಿದೆ.





























