Home ಮುಖಪುಟ ಸುದ್ದಿ ತುಕ್ಕು ಹಿಡಿದ ವ್ಯವಸ್ಥೆ: ಹಳಿಗೆ ತರಲು ಸಮಯಬೇಕು

ತುಕ್ಕು ಹಿಡಿದ ವ್ಯವಸ್ಥೆ: ಹಳಿಗೆ ತರಲು ಸಮಯಬೇಕು

ಬೆಂಗಳೂರು,ಜೂ೧೫: “ರಾಜಸ್ಥಾನದಲ್ಲಿ ಲಂಚ ಪಡೆಯುವಾಗ ಬೆಂಗಳೂರು ಪೊಲೀಸರು ಸಿಕ್ಕಿಬಿದ್ದಿರುವ ಪ್ರಕರಣ ಯಾರಿಗೂ ಗೌರವ ತರುವ ವಿಚಾರವಲ್ಲ. ರಕ್ಷಕರೇ ಭಕ್ಷಕರಾದರೆ ಸಹಿಸಲು ಸಾಧ್ಯವಿಲ್ಲ. ಈ ಹಿನ್ನೆಲೆಯಲ್ಲಿ ಈಗಾಗಲೇ ಆರೋಪಿ ಪೊಲೀಸರನ್ನು ಅಮಾನತುಗೊಳಿಸಲಾಗಿದೆ,” ಎಂದು ಗೃಹ ಸಚಿವ ಪ್ರಿಯಾಂಕ್ ಖರ್ಗೆ ತಿಳಿಸಿದ್ದಾರೆ.

ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇಲಾಖೆಯ ಲೋಪದೋಷಗಳು ಹಾಗೂ ವಿರೋಧ ಪಕ್ಷಗಳ ಟೀಕೆಗಳಿಗೆ ಖಾರವಾಗಿಯೇ ಪ್ರತಿಕ್ರಿಯಿಸಿ “ಪೊಲೀಸ್ ಇಲಾಖೆಯಲ್ಲಿ ಬೇರು ಮಟ್ಟದಲ್ಲೂ ಒಂದಿಲ್ಲೊಂದು ಸಮಸ್ಯೆಗಳು ಇವೆ. ಒಟ್ಟಾರೆ ವ್ಯವಸ್ಥೆ ತುಕ್ಕು ಹಿಡಿದಿದ್ದು, ಇದನ್ನು ಸರಿಪಡಿಸಲು ನಮಗೆ ಸ್ವಲ್ಪ ಸಮಯದ ಅಗತ್ಯವಿದೆ. ಈ ಪ್ರಕರಣದಲ್ಲಿ ಮೇಲಾಧಿಕಾರಿಗಳ ಪಾತ್ರವೂ ಇದೆಯೇ ಎಂಬ ಬಗ್ಗೆ ಪರಿಶೀಲನೆ ನಡೆಸಲಾಗುವುದು. ಮುಂದಿನ ದಿನಗಳಲ್ಲಿ ಪ್ರತಿಯೊಂದು ಪೊಲೀಸ್ ಠಾಣೆಯನ್ನು ಜನಸ್ನೇಹಿ ವ್ಯವಸ್ಥೆಯನ್ನಾಗಿ ರೂಪಿಸುವುದು ನಮ್ಮ ಗುರಿ,” ಎಂದರು.


ಗೃಹ ಇಲಾಖೆ ನಿಭಾಯಿಸಲು ಪ್ರಿಯಾಂಕ್ ಖರ್ಗೆ ಅಸಮರ್ಥರು ಎಂಬ ಬಿಜೆಪಿಯ ಟೀಕೆಗೆ ತಿರುಗೇಟು ನೀಡಿದ ಅವರು, “ನಾನು ಯಾವಾಗಲೂ ಹೊಣೆಗಾರಿಕೆ ಹೊರಲು ಸಿದ್ಧನಿದ್ದೇನೆ. ಆದರೆ ಆರ್. ಅಶೋಕ್, ಆರಗ ಜ್ಞಾನೇಂದ್ರ ಮತ್ತು ಬಸವರಾಜ ಬೊಮ್ಮಾಯಿ ಅವರು ಗೃಹ ಸಚಿವರಾಗಿದ್ದಾಗ ನಡೆದ ಘಟನೆಗಳಿಗೆ ಅವರು ಹೊಣೆ ಹೊರುತ್ತಾರಾ? ಅವರ ಅವಧಿಯಲ್ಲಿ ಲಂಚ ಇರಲಿಲ್ಲವೇ? ಅಶೋಕ್ ಅವರು ಎಂದಾದರೂ ಜವಾಬ್ದಾರಿಯಿಂದ ಮಾತನಾಡಿದ್ದಾರಾ? ಅವರದೇ ಪಕ್ಷದ ಶಿರಹಟ್ಟಿ ಶಾಸಕ ಲಂಚ ಪಡೆದು ಟ್ರ್ಯಾಪ್ ಆದಾಗ ಅಶೋಕ್ ಒಪ್ಪಿಕೊಂಡಿದ್ದರೇ?” ಎಂದು ಪ್ರಶ್ನಿಸಿದ ಅವರು, ಕೇವಲ ಬೇಜವಾಬ್ದಾರಿ ಹೇಳಿಕೆ ನೀಡುವುದು ವಿಪಕ್ಷ ನಾಯಕರ ಕೆಲಸವಲ್ಲ ಎಂದು ವಾಗ್ದಾಳಿ ನಡೆಸಿದರು.


ಗ್ಯಾರಂಟಿ ಯೋಜನೆಗಳ ಕುರಿತು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರ ಹೇಳಿಕೆಗೆ ಆಕ್ರೋಶ ಹೊರಹಾಕಿದ ಸಚಿವರು, “ಗ್ಯಾರಂಟಿ ಯೋಜನೆಗಳನ್ನು ನಡೆಸಲು ಸಿಎಂ ಸಿದ್ದರಾಮಯ್ಯ ಅವರಾಗಲಿ, ಡಿಕೆಶಿ ಅವರಾಗಲಿ ನಿರ್ಮಲಾ ಸೀತಾರಾಮನ್ ಅವರ ಬಳಿ ಭಿಕ್ಷೆ ಬೇಡಿಲ್ಲ. ನಾವು ಕೇಂದ್ರದ ಪುರಸ್ಕಾರ ಯೋಜನೆಗಳಡಿ ರಾಜ್ಯಕ್ಕೆ ಬರಬೇಕಾದ ನ್ಯಾಯಯುತ ಪಾಲನ್ನು ಕೇಳುತ್ತಿದ್ದೇವೆಯೇ ವಿನಃ ಗ್ಯಾರಂಟಿಗಳಿಗೆ ಹಣ ಕೇಳುತ್ತಿಲ್ಲ. ನಾವು ತೆರಿಗೆ ಕಟ್ಟುತ್ತಿದ್ದೇವೆ, ಅದಕ್ಕೆ ತಕ್ಕಂತೆ ಫಲ ಕೊಡಿ ಎಂದು ಕೇಳುತ್ತಿದ್ದೇವೆ,” ಎಂದು ಸ್ಪಷ್ಟಪಡಿಸಿದರು.

ಇದೇ ವೇಳೆ, “ಆಂಧ್ರಪ್ರದೇಶಕ್ಕೆ ೧೦-೧೫ ಲಕ್ಷ ಕೋಟಿ ರೂ. ಬಾಕಿ ಕೊಡಬೇಕಲ್ಲ, ಅದರ ಬಗ್ಗೆ ಏಕೆ ಮಾತನಾಡುತ್ತಿಲ್ಲ? ಮಹಾರಾಷ್ಟ್ರದ ’ಲಾಡ್ಲಿ ಬೆಹೆನ್’ ಯೋಜನೆ ಹಾಗೂ ಗುಜರಾತ್, ಮಧ್ಯಪ್ರದೇಶ, ಯುಪಿ ರಾಜ್ಯಗಳ ಗ್ಯಾರಂಟಿಗಳನ್ನು ಮೊದಲು ನಿಲ್ಲಿಸಲಿ. ನೀವು ಕೊಟ್ಟರೆ ಮಾಸ್ಟರ್ ಸ್ಟ್ರೋಕ್, ನಾವು ಕೊಟ್ಟರೆ ತೊಂದರೆಯೇ? ಉತ್ತರ ಪ್ರದೇಶಕ್ಕೆ ಹೆಚ್ಚಿನ ಅನುದಾನ ನೀಡುವ ಕೇಂದ್ರ ಸರ್ಕಾರ, ಅತಿ ಹೆಚ್ಚು ತೆರಿಗೆ ಕೊಡುವ ನಮಗೆ ಅನ್ಯಾಯ ಮಾಡುತ್ತಿದೆ,” ಎಂದು ಆರೋಪಿಸಿದರು.

ಗ್ಯಾರಂಟಿ ಯೋಜನೆಗಳಿಗೆ ಮರು ಅರ್ಜಿ ಸಲ್ಲಿಸುವ ವಿಚಾರವಾಗಿ ಸ್ಪಷ್ಟನೆ ನೀಡಿದ ಅವರು, “ಯಾವುದೇ ಗ್ಯಾರಂಟಿಗಳನ್ನು ನಿಲ್ಲಿಸುತ್ತಿಲ್ಲ. ಯೋಜನೆಗಳು ನಿಜವಾದ ಅರ್ಹ ಫಲಾನುಭವಿಗಳಿಗೆ ತಲುಪಬೇಕು ಎಂಬ ಉದ್ದೇಶದಿಂದ ಪರಿಷ್ಕರಣೆ ಮಾಡಲಾಗುತ್ತಿದೆ. ಹೊಸದಾಗಿ ಅರ್ಜಿ ಪಡೆದಾಗ ಪರಿಶೀಲನೆ ಸುಲಭವಾಗುತ್ತದೆ. ಇದಕ್ಕೆ ಬಿಜೆಪಿಯವರಿಗೆ ಏಕೆ ಆತಂಕ? ತಾಕತ್ತಿದ್ದರೆ ಬಿಜೆಪಿಯವರು ತಮ್ಮ ಕಾರ್ಯಕರ್ತರಿಗೆ ಗ್ಯಾರಂಟಿ ಸೌಲಭ್ಯ ಬೇಡ ಎಂದು ಅಭಿಯಾನ ಮಾಡಲಿ,” ಎಂದು ಸವಾಲು ಹಾಕಿದರು.


ಧರ್ಮಸ್ಥಳದ ಸೌಜನ್ಯ (ಬುರುಡೆ) ಪ್ರಕರಣದ ಎಸ್‌ಐಟಿ ಮಧ್ಯಂತರ ವರದಿ ಬಹಿರಂಗಪಡಿಸುವಂತೆ ವಿಪಕ್ಷಗಳ ಒತ್ತಾಯಕ್ಕೆ ಪ್ರತಿಕ್ರಿಯಿಸಿ, “ನಾವು ವರದಿಯನ್ನು ಯಾರಿಗೆ ಬಹಿರಂಗಪಡಿಸಬೇಕು? ಬಿಜೆಪಿಯವರನ್ನು ಕೇಳಿ ನಾವು ಸರ್ಕಾರ ನಡೆಸಬೇಕೇ ಪ್ರಕರಣದ ತನಿಖೆ ನ್ಯಾಯಾಲಯದಲ್ಲಿದೆ. ನಾವು ವರದಿಯನ್ನು ನೇರವಾಗಿ ಕೋರ್ಟ್‌ಗೆ ಸಲ್ಲಿಕೆ ಮಾಡುತ್ತೇವೆ. ಕೋರ್ಟ್ ನಿರ್ದೇಶನದಂತೆ ಮುಂದಿನ ಕ್ರಮ ಕೈಗೊಳ್ಳುತ್ತೇವೆಯೇ ಹೊರತು ಬಿಜೆಪಿ ಹೇಳಿದಂತೆ ಕೇಳಲು ಸಾಧ್ಯವಿಲ್ಲ,” ಎಂದರು.
ಬಿಡದಿ ಟೌನ್‌ಶಿಪ್ ಯೋಜನೆಗೆ ಜೆಡಿಎಸ್ ವಿರೋಧ ವ್ಯಕ್ತಪಡಿಸುತ್ತಿರುವ ಕುರಿತು ಮಾತನಾಡಿದ ಅವರು, “ಈ ಯೋಜನೆ ಜೆಡಿಎಸ್ ನಾಯಕರ ’ಬ್ರೈನ್ ಚೈಲ್ಡ್’ (ಕಲ್ಪನೆ). ಅವರೇ ಇದನ್ನು ಪ್ರಸ್ತಾಪಿಸಿ ಈಗ ವಿರೋಧಿಸುತ್ತಿರುವುದು ಹಾಸ್ಯಾಸ್ಪದ. ನಾವು ರೈತರ ಜಮೀನನ್ನು ದಬ್ಬಾಳಿಕೆ ಮಾಡಿ ಕಿತ್ತುಕೊಳ್ಳುತ್ತಿಲ್ಲ. ರೈತರಿಗೆ ಇಷ್ಟವಿದ್ದರೆ ಮಾತ್ರ ಜಮೀನು ನೀಡುತ್ತಾರೆ. ನಾವು ಕಾನೂನು ಮೀರಿ ಏನನ್ನೂ ಮಾಡುತ್ತಿಲ್ಲ,” ಎಂದು ಸಮರ್ಥಿಸಿಕೊಂಡರು.


ನಾನು ವೈಯಕ್ತಿಕವಾಗಿ ಇಲಾಖೆಯ ಕೆಲಸದ ನಿಮಿತ್ತ ದೆಹಲಿಗೆ ತೆರಳುತ್ತಿದ್ದೇನೆ. ಕೃಷ್ಣಬೈರೇಗೌಡರ ವಿಚಾರವಾಗಿ ಅವರೇ ಈಗಾಗಲೇ ಮಾತನಾಡಿದ್ದಾರೆ. ಸದ್ಯಕ್ಕೆ ಯುದ್ಧ ನಿಂತಿದೆ, ಇನ್ನು ಕೆಲವು ದಿನಗಳು ಕಳೆಯಲಿ. ಕೇಂದ್ರ ಸರ್ಕಾರ ಏರಿಸಿರುವ ಎಲ್ಲಾ ಅಗತ್ಯ ವಸ್ತುಗಳ ದರಗಳನ್ನು ತಕ್ಷಣವೇ ಇಳಿಸಬೇಕು,” ಎಂದು ಪ್ರಿಯಾಂಕ್ ಖರ್ಗೆ ಆಗ್ರಹಿಸಿದರು.