Home ಮುಖಪುಟ ಸುದ್ದಿ ಅಮೆರಿಕ ಇರಾನ್ ಶಾಂತಿ ಒಪ್ಪಂದ:ಹೊರ್ಮುಜ್ ಸಂಚಾರಕ್ಕೆ ಮುಕ್ತ

ಅಮೆರಿಕ ಇರಾನ್ ಶಾಂತಿ ಒಪ್ಪಂದ:ಹೊರ್ಮುಜ್ ಸಂಚಾರಕ್ಕೆ ಮುಕ್ತ

ಜೂ. ೧೯ಕ್ಕೆ ಅಂಕಿತ

ವಾಷಿಂಗ್ಟನ್/ಜೆನೆವಾ,ಜೂ.೧೫:ಜಾಗತಿಕ ರಾಜಕೀಯ ಮತ್ತು ಆರ್ಥಿಕ ವಲಯದಲ್ಲಿ ಭಾರಿ ಸಂಚಲನ ಮೂಡಿಸಿರುವ ಅಮೆರಿಕ ಮತ್ತು ಇರಾನ್ ನಡುವಿನ ಬಹುನಿರೀಕ್ಷಿತ ‘ಶಾಂತಿ ಒಪ್ಪಂದ’ವು ಅಂತಿಮಗೊಂಡಿದ್ದು, ಮುಂಬರುವ ಜೂನ್ ೧೯ರಂದು ಸ್ವಿಟ್ಜರ್ಲೆಂಡ್‌ನ ಜೆನೆವಾದಲ್ಲಿ ಅಧಿಕೃತವಾಗಿ ಸಹಿ ಬೀಳುವ ಸಾಧ್ಯತೆಯಿದೆ.


ಹೊರ್ಮುಜ್ ಜಲಮಾರ್ಗವನ್ನು ಸುಂಕರಹಿತವಾಗಿ ಸಂಚಾರ ಅನುವು ಮಾಡಿಕೊಡಲಾಗುವುದು ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಹೇಳಿದ್ದಾರೆ.
ಈ ಬಗ್ಗೆ ಸಾಮಾಜಿಕ ಜಾಲತಾಣ ಟ್ರುತ್ ಸೋಷಿಯಲ್‌ನಲ್ಲಿ ಮಾಹಿತಿ ಹಂಚಿಕೊಂಡಿರುವ ಅಮೆರಿಕ ಅಧ್ಯಕ್ಷ ಟ್ರಂಪ್. ಇರಾನ್ ಜೊತೆ ಶಾಂತಿ ಒಪ್ಪಂದ ಪೂರ್ಣಗೊಂಡಿದೆ. ಹೊರ್ಮುಜ್ ನಲ್ಲಿ ನೌಕಾ ದಿಗ್ಭಂದನ ಅಂತ್ಯಗೊಂಡಿದ್ದು, ಜಲಮಾರ್ಗವನ್ನು ಸುಂಕ ರಹಿತವಾಗಿ ತೆರೆಯಲಾಗುವುದು ಎಂದು ಟ್ರಂಪ್ ಇಂದು ಘೋಷಿಸಿದ್ದಾರೆ.


ನಿಮ್ಮ ಇಂಜನ್ ಚಾಲು ಮಾಡಿ ಇಂಧನ ಹರಿಯಲು ಬಿಡಿ ಎಂದು ಟ್ರಂಪ್ ಜಾಗತಿಕ ಇಂಧನ ಹಡಗು ಸಂಸ್ಥೆಗಳಿಗೆ ಕರೆ ನೀಡಿದ್ದಾರೆ. ಒಪ್ಪಂದಕ್ಕೆ ಸಂಬಂಧಿಸಿದ ಹೆಚ್ಚಿನ ವಿವರಗಳನ್ನು ಬಿಟ್ಟು ಕೊಡದಿದ್ದರೂ ಲೆಬನಾನ್ ಸೇರಿದಂತೆ ಎಲ್ಲಾ ದೇಶಗಳಲ್ಲಿ ನಡೆಯುತ್ತಿರುವ ಸೇನಾಕಾರ್ಯಚರಣೆ ತಕ್ಷuವೇ ಹಾಗೂ ಶಾಶ್ವತವಾಗಿ ಕೊನೆಯಾಗಬೇಕೆಂದು ಕರೆ ನೀಡಿದ್ದಾರೆ.


ಈ ಶಾಂತಿ ಒಪ್ಪಂದದ ಐತಿಹಾಸಿಕ ಕ್ಷಣಕ್ಕೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರೇ ಖುದ್ದಾಗಿ ಹಾಜರಾಗಲಿದ್ದಾರೆಯೇ ಎಂಬ ಕುತೂಹಲ ಈಗ ಜಾಗತಿಕವಾಗಿ ಮನೆ ಮಾಡಿದೆ. ಈ ಕುರಿತು ಅಮೆರಿಕ ಉಪಾಧ್ಯಕ್ಷ ಜೆ.ಡಿ. ವ್ಯಾನ್ಸ್ ಮಾಧ್ಯಮವೊಂದಕ್ಕೆ ಪ್ರತಿಕ್ರಿಯಿಸಿದ್ದು, “ಒಪ್ಪಂದದ ಸಹಿ ಸಮಾರಂಭದಲ್ಲಿ ಯಾರೆಲ್ಲಾ ಭಾಗವಹಿಸಲಿದ್ದಾರೆ ಎಂಬ ತಾಂತ್ರಿಕ ವಿವರಗಳನ್ನು ನಾವು ಅಂತಿಮಗೊಳಿಸುತ್ತಿದ್ದೇವೆ. ನಾನು ಖಂಡಿತವಾಗಿ ಅಲ್ಲಿರಲಿದ್ದೇನೆ. ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರೇ ನೇರವಾಗಿ ಭಾಗವಹಿಸುವ ಸಾಧ್ಯತೆಯೂ ಇದೆ” ಎಂದು ತಿಳಿಸಿದ್ದಾರೆ. ಈ ಒಪ್ಪಂದವು ಅಮೆರಿಕದ ಜನತೆಗೆ ಸಿಕ್ಕ ಬಹುದೊಡ್ಡ ಗೆಲುವಾಗಿದ್ದು, ಇಂಧನ ಬೆಲೆಗಳನ್ನು ತಗ್ಗಿಸಲು ನೆರವಾಗಲಿದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಇರಾನ್‌ನಿಂದ ೬೦ ದಿನಗಳ ಗಡುವು!


ಒಪ್ಪಂದಕ್ಕೆ ಸಹಿ ಹಾಕಲು ಇರಾನ್ ಒಪ್ಪಿಕೊಂಡಿದೆಯಾದರೂ, ಅದಕ್ಕೊಂದು ಕಟ್ಟುನಿಟ್ಟಿನ ಷರತ್ತನ್ನು ವಿಧಿಸಿದೆ. ಹೊರ್ಮುಜ್ ಜಲಸಂಧಿಯ ಮೇಲಿನ ದಿಗ್ಬಂಧನ ತೆರವು, ಮುಟ್ಟುಗೋಲು ಹಾಕಿಕೊಳ್ಳಲಾಗಿರುವ ಇರಾನ್ ಆಸ್ತಿಗಳ ಬಿಡುಗಡೆ ಮತ್ತು ಸಂಪೂರ್ಣ ಹಗೆತನ ನಿಲ್ಲಿಸುವ ಅಮೆರಿಕದ ಭರವಸೆಗಳು ಈಡೇರುತ್ತವೆಯೇ ಎಂಬುದನ್ನು ಗಮನಿಸಲು ಇರಾನ್ ೬೦ ದಿನಗಳ ಕಾಲ ಕಾದು ನೋಡುವ ತಂತ್ರಕ್ಕೆ ಮೊರೆ ಹೋಗಿದೆ.

ಒಪ್ಪಂದವೇನೋ ಅಂತಿಮ ಹಂತಕ್ಕೆ ಬಂದಿದ್ದರೂ, ಇರಾನ್‌ನ ಪರಮಾಣು ಕಾರ್ಯಕ್ರಮದ ಕುರಿತಾದ ಪ್ರಮುಖ ವಿವಾದಕ್ಕೆ ಇನ್ನೂ ಸ್ಪಷ್ಟ ಪರಿಹಾರ ಸಿಕ್ಕಿಲ್ಲ. ಇರಾನ್ ತನ್ನ ಇಂಧನ ಸಮೃದ್ಧ ಯೂಟ್ಯೂಬ್ ಮತ್ತು ಪರಮಾಣು ಶಸ್ತ್ರಾಸ್ತ್ರ ತಯಾರಿಕೆಯನ್ನು ಸಂಪೂರ್ಣವಾಗಿ ನಿಲ್ಲಿಸಬೇಕು ಎಂಬುದು ಅಮೆರಿಕದ ಪಟ್ಟು. ಆದರೆ, ತನ್ನ ಪರಮಾಣು ಯೋಜನೆ ಕೇವಲ ನಾಗರಿಕ ಬಳಕೆಗೆ ಮಾತ್ರಸೀಮಿತ ಎಂದು ಇರಾನ್ ವಾದಿಸುತ್ತಿದೆ. ಇರಾನ್ ಪರವಾಗಿ ವಿದೇಶಾಂಗ ಸಚಿವ ಸೆಯ್ಯದ್ ಅಬ್ಬಾಸ್ ಅರಾಗ್ಚಿ ಅಥವಾ ಸಂಸತ್ತಿನ ಸ್ಪೀಕರ್ ಮೊಹಮ್ಮದ್-ಬಾಗೇರ್ ಘಾಲಿಬಾಫ್ ಸಮಾರಂಭದಲ್ಲಿ ಭಾಗವಹಿಸುವ ಸಾಧ್ಯತೆಯಿದೆ.

ಈ ಒಪ್ಪಂದದಿಂದಾಗಿ ಜಗತ್ತಿನ ಪ್ರಮುಖ ತೈಲ ಸಾರಿಗೆ ಮಾರ್ಗವಾದ ‘ಹೊರ್ಮುಜ್ ಜಲಸಂಧಿ ಈ ವಾರವೇ ಮುಕ್ತವಾಗಲಿದ್ದು, ಜಾಗತಿಕ ಆರ್ಥಿಕತೆ ಸ್ಥಿರಗೊಳ್ಳಲು ಮತ್ತು ಮಧ್ಯಪ್ರಾಚ್ಯದಲ್ಲಿ ಶಾಂತಿ ನೆಲೆಸಲು ದಾರಿಯಾಗಲಿದೆ ಎಂದು ತಜ್ಞರು ವಿಶ್ಲೇಷಿಸಿದ್ದಾರೆ.

ವಿಶ್ವ ನಾಯಕರ ಸ್ವಾಗತ


ಇರಾನ್, ಅಮೆರಿಕಾ ನಡುವೆ ಶಾಂತಿ ಒಪ್ಪಂದ ಹಾಗೂ ಹೊರ್ಮುಜ್ ಜಲಸಂಧಿ ಪುನರಾರಂಭದ ನಿರ್ಧಾರವನ್ನು ವಿಶ್ವ ನಾಯಕರುಗಳು ಸ್ವಾಗತಿಸಿದ್ದಾರೆ. ಇರಾನ್ ಜೊತೆ ಅಮೆರಿಕ ಶಾಂತಿ ಒಪ್ಪಂದ ಮಾಡಿಕೊಳ್ಳಲಿದೆ. ಹೊರ್ಮುಜ್ ಜಲಸಂಧಿ ಮುಕ್ತವಾಗಲಿದೆ ಎಂದು ಟ್ರಂಪ್ ಘೋಷಣೆ ಮಾಡಿದ ಬೆನ್ನಲ್ಲೇ ಬ್ರಿಟನ್, ಫ್ರಾನ್ಸ್, ಜರ್ಮನಿ, ನ್ಯೂಜಿಲ್ಯಾಂಡ್, ಜಪಾನ್, ಟರ್ಕಿ ಸೇರಿದಂತೆ ಹಲವು ದೇಶಗಳ ಪ್ರಧಾನಿಗಳು ಅಧ್ಯಕ್ಷರು ಈ ನಿರ್ಧಾರವನ್ನು ಸ್ವಾಗತಿಸಿದ್ದಾರೆ.


ಯುದ್ಧವನ್ನು ಕೊನೆಗಳಿಸಿ ಪ್ರಾದೇಶಿಕ ಸ್ಥಿರತೆಯನ್ನು ಖಚಿತಪಡಿಸಿಕೊಳ್ಳಲು ಮತ್ತು ಹೊರ್ಮುಜ್ ಜಲಸಂಧಿಯನ್ನು ಮರು ಮುಕ್ತಗೊಳಿಸಲು ಇತ್ತ ಅತ್ಯಂತ ಪ್ರಮುಖ ಹೆಜ್ಜೆ ಇದು ಎಂದು ಬ್ರಿಟನ್ ಪ್ರಧಾನಿ ಕಿಯರ್ ಸ್ಟಾiರ್ ಹೇಳಿ ಯಾವುದೇ ಸುಂಕವಿಲ್ಲದ ಮುಕ್ತ ವಾಯುಯಾನಾ ವನ್ನು ಮರು ಸ್ಥಾಪಿಸಬೇಕೆಂದು ಆಗ್ರಹಿಸಿದ್ದಾರೆ.
ಫ್ರಾನ್ಸ್ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರಾನ್ ಅವರು ಯಾವುದೇ ನಿರ್ಬಂಧ ಅಥವಾ ಸುಂಕವಿಲ್ಲದೆ ಕಡಲ ಸಂಚಾರವನ್ನು ಪುನರಾರಂಭಿಸಲು ಪ್ರಾದೇಶಿಕ ಸ್ಥಿರತೆ ಜಾಗತಿಕ ಆರ್ಥಿಕತೆಗೆ ಅತ್ಯಗತ್ಯವಾಗಿದೆ ಎಂದಿದ್ದಾರೆ.


ಶಾಂತಿ ಒಪ್ಪಂದಕ್ಕಾಗಿ ಅಮೆರಿಕ ಮತ್ತು ಇರಾನ್ ಎರಡು ದೇಶಗಳನ್ನು ಅಭಿನಂದಿಸಿರುವ ಜರ್ಮನಿಯ ಚಾನ್ಸಲರ್ ಫ್ರೆಡ್ರಿಕ್ ಮೆರ್ಜ್. ಇದು ಆರ್ಥಿಕ ಪುನಶ್ಚೇತನ ಹಾಗೂ ಪಶ್ಚಿಮ ಏಷ್ಯಾದಲ್ಲಿ ಸುರಕ್ಷಿತೆಗೆ ದಾರಿ ಮಾಡಿಕೊಡಲಿದೆ ಎಂದಿದ್ದಾರೆ.


ನ್ಯೂಜಿಲ್ಯಾಂಡ್ ವಿದೇಶಾಂಗ ಸಚಿವ ವಿನ್‌ಸ್ಟನ್ ಪೀಟರ್‍ಸ್ ಶಾಂತಿ ಒಪ್ಪಂದವನ್ನು ಸ್ವಾಗತಿಸಿ, ಪ್ರಮುಖ ಕಡಲ ಮಾರ್ಗವನ್ನು ಸುರಕ್ಷಿತವಾಗಿ ಮರು ಮುಕ್ತಗೊಳಿಸುವ ಹೆಜ್ಜೆಗಳನ್ನು ಸ್ವಾಗತಿಸುತ್ತೇವೆ ಎಂದಿದ್ದಾರೆ.


ಜಪಾನ್ ಪ್ರಧಾನಿ ಸನಾ ತಕೈಚಿ ಅವರು ಪರಿಹಾರದ ಕಡೆಗೆ ಇಟ್ಟ ದೊಡ್ಡ ಹೆಜ್ಜೆ ಇದು. ಹೊರ್ಮುಜ್ ಜಲಸಂಧಿಯಲ್ಲಿ ಮುಕ್ತ ಮತ್ತು ಸುರಕ್ಷಿತ ನೌಕಾಯಾನಾವನ್ನು ವಾಸ್ತವವಾಗಿ ಖಚಿತಪಡಿಸಿಕೊಳ್ಳಬೇಕು ಎಂದಿದ್ದಾರೆ.
ಅಮೆರಿಕಾ, ಇರಾನ್ ಒಪ್ಪಂದವು ಮಧ್ಯಪ್ರಾಚ್ಯದಲ್ಲಿ ಶಾಶ್ವತ ಮತ್ತು ಶಾಂತಿ ಮತ್ತು ಭದ್ರತೆಗೆ ದಾರಿಮಾಡಿಕೊಡಲಿ ಎಂದು ಟರ್ಕಿ ಅಧ್ಯಕ್ಷ ರೆಸೆಪ್ ತಯ್ಯಿಪ್ ಎರ್ಡೊಗನ್ ಹೇಳಿದ್ದಾರೆ.