Home ಮುಖಪುಟ ಸುದ್ದಿ ಇಂದು ಸಂಜೆ ದೆಹಲಿಗೆ ಸಿಎಂ

ಇಂದು ಸಂಜೆ ದೆಹಲಿಗೆ ಸಿಎಂ

ಬೆಂಗಳೂರು, ಅ. ೬- ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಇಂದು ಸಂಜೆ ದೆಹಲಿಗೆ ತೆರಳಲಿದ್ದು, ಸಂಪುಟ ವಿಸ್ತರಣೆ, ವಿಧಾನಪರಿಷತ್‌ಗೆ ಐವರು ಸದಸ್ಯರುಗಳ ನಾಮ ನಿರ್ದೇಶನ ಹಾಗೂ ನಿಗಮ ಮಂಡಳಿ ಅಧ್ಯಕ್ಷ-ಉಪಾಧ್ಯಕ್ಷರ ನೇಮಕಾತಿ ಸಂಬಂಧ ಕಾಂಗ್ರೆಸ್ ಪಕ್ಷದ ವರಿಷ್ಠರೊಂದಿಗೆ ಚರ್ಚೆ ನಡೆಸುವ ಸಾಧ್ಯತೆ ಇದೆ.


ದೆಹಲಿಯಲ್ಲಿ ನಾಳೆ ನಡೆಯಲಿರುವ ಜಿಎಸ್‌ಟಿ ಕೌನ್ಸಿಲ್ ಸಭೆಯಲ್ಲಿ ಪಾಲ್ಗೊಳ್ಳಲು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಇಂದು ಸಂಜೆ ಬೆಂಗಳೂರಿನಿಂದ ದೆಹಲಿಗೆ ಪ್ರಯಾಣಿಸಲಿದ್ದು, ದೆಹಲಿಯಲ್ಲೇ ವಾಸ್ತವ್ಯ ಹೂಡುವರು.


ಇಂದು ರಾತ್ರಿ ದೆಹಲಿಯಲ್ಲೇ ಇರುವ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಸಚಿವ ಸಂಪುಟದಲ್ಲಿ ಖಾಲಿ ಇರುವ ಎರಡು ಸ್ಥಾನಗಳನ್ನು ಭರ್ತಿ ಮಾಡಿಕೊಂಡು, ಸಂಪುಟ ವಿಸ್ತರಣೆ ಸಂಬಂಧ ಹೈಕಮಾಂಡ್ ಜತೆ ಚರ್ಚೆ ನಡೆಸಲಿದ್ದಾರೆ ಎಂದು ಹೇಳಲಾಗಿದೆ.


ಸಂಪುಟದಲ್ಲಿ ಮಹಿಳಾ ಪ್ರಾತನಿಧ್ಯ ಇಲ್ಲದಂತಾಗಿದ್ದು, ಮಹಿಳೆಯರೊಬ್ಬರನ್ನು ಸಂಪುಟಕ್ಕೆ ಸೇರ್ಪಡೆ ಮಾಡಿಕೊಂಡು ಜತೆಗೆ ಬಸವರಾಜ ನೀಲಣ್ಣ ಶಿವಣ್ಣನವರನ್ನು ಸಂಪುಟಕ್ಕೆ ಸೇರ್ಪಡೆ ಮಾಡಿಕೊಳ್ಳುವ ಸಂಬಂಧ ವರಿಷ್ಠರ ಜತೆ ಸಮಾಲೋಚನೆ ನಡೆಸುವರು.


ಮಹಿಳಾ ಕೋಟಾದಲ್ಲಿ ಬಳ್ಳಾರಿಯ ಅನ್ನಪೂರ್ಣ ತುಕಾರಾಂ ಇಲ್ಲವೆ ಬೆಳಗಾವಿಯ ಲಕ್ಷ್ಮಿ ಹೆಬ್ಬಾಳ್ಕರ್ ಅವರಿಗೆ ಸಚಿವ ಸ್ಥಾನ ನೀಡುವ ಸಂಬಂಧ ಚರ್ಚೆಗಳು ನಡೆಯಲಿವೆ ಎಂದು ಹೇಳಲಾಗಿದೆ.


ಪರಿಷತ್ ನಾಮನಿರ್ದೇಶನ-ನಿಗಮ ಮಂಡಳಿ ಚರ್ಚೆ


ಸಂಪುಟ ವಿಸ್ತರಣೆ ಜತೆಗೆ ವಿಧಾನಪರಿಷತ್‌ಗೆ ಐವರು ಸದಸ್ಯರನ್ನು ನಾಮ ನಿರ್ದೇಶನ ಮಾಡುವ ಬಗ್ಗೆಯೂ ವರಿಷ್ಠರೊಂದಿಗೆ ಮುಖ್ಯಮಂತ್ರಿಗಳು ಚರ್ಚೆ ನಡೆಸಲಿದ್ದು,, ಯಾರೆನ್ನೆಲ್ಲಾ ವಿಧಾನಪರಿಷತ್‌ಗೆ ನಾಮಕರಣ ಮಾಡಬೇಕು ಎಂಬ ಬಗ್ಗೆಯೂ ಚರ್ಚೆ ನಡೆಸಲಿದ್ದಾರೆ.


ಇದರ ಜತೆಗೆ ೨ ವರ್ಷ ಪೂರೈಸಿರುವ ನಿಗಮ ಮಂಡಳಿ ಅಧ್ಯಕ್ಷರು- ಉಪಾಧ್ಯಕ್ಷರನ್ನು ಬದಲಿಸಿ ಹೊಸದಾಗಿ ಅಧ್ಯಕ್ಷರು ಹಾಗೂ ಉಪಾಧ್ಯಕ್ಷರುಗಳ ನೇಮಕ ಹಾಗೂ ನಿರ್ದೇಶಕರ ನೇಮಕದ ಬಗ್ಗೆಯೂ ವರಿಷ್ಠರೊಡನೆ ಚರ್ಚೆ ನಡೆಸಲಿದ್ದಾರೆ ಎಂದು ಕಾಂಗ್ರೆಸ್ ಮೂಲಗಳು ಹೇಳಿವೆ.


ನಾಳೆ ಜಿಎಸ್‌ಟಿ ಕೌನ್ಸಿಲ್ ಸಭೆಯಲ್ಲಿ ಪಾಲ್ಗೊಂಡ ನಂತರ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಬೆಂಗಳೂರಿಗೆ ವಾಪಸ್ಸಾಗುವರು.