
ಬೆಂಗಳೂರು,ಜೂ೧೧: ರಾಜ್ಯದಲ್ಲಿ ತೀವ್ರ ಸಂಚಲನ ಮೂಡಿಸಿರುವ ೨,೪೦೦ ಕೋಟಿ ಮೌಲ್ಯದ ’ಶಿವಂ ಅಸೋಸಿಯೇಟ್ಸ್’ ಹೂಡಿಕೆ ವಂಚನೆ ಪ್ರಕರಣದ ತನಿಖೆ ಚುರುಕುಗೊಂಡಿದ್ದು, ಬಾಲಿವುಡ್ ನಟಿ ಸನ್ನಿ ಲಿಯೋನ್ ಈಗ ಕರ್ನಾಟಕ ಅಪರಾಧ ತನಿಖಾ ಇಲಾಖೆ ದಾಳಿ ನಡೆಸಿದೆ. ವಂಚನೆ ಪ್ರಕರಣದ ಪ್ರಮುಖ ಆರೋಪಿ ನಿರ್ಮಿಸಿದ್ದ ಚಲನಚಿತ್ರದಲ್ಲಿ ನಟಿಸಿದ್ದಕ್ಕಾಗಿ ಸನ್ನಿ ಲಿಯೋನ್ ಪಡೆದಿದ್ದ ಸಂಭಾವನೆಯ ವಿವರಗಳನ್ನು ಕೋರಿ ಸಿಐಡಿ ಅಧಿಕಾರಿಗಳು ನೋಟಿಸ್ ನೀಡಿದ್ದಾರೆ.
ಆದರೆ, ಈ ನೋಟಿಸ್ ಕೇವಲ ತನಿಖೆಯ ಭಾಗವಾಗಿದ್ದು, ನಟಿಯ ಯಾವುದೇ ತಪ್ಪು ಅಥವಾ ಅಪರಾಧವನ್ನು ಇದು ಸೂಚಿಸುವುದಿಲ್ಲ ಎಂದು ತನಿಖಾಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.
ಶಿವಂ ಅಸೋಸಿಯೇಟ್ಸ್ ಸಂಸ್ಥೆಯ ಪ್ರವರ್ತಕ ಶಿವಾನಂದ್ ನೀಲಣ್ಣವರ್, ಸಾರ್ವಜನಿಕರಿಗೆ ಹೆಚ್ಚಿನ ಲಾಭದ ಆಮಿಷ ಒಡ್ಡಿ ಅನಧಿಕೃತ ಠೇವಣಿ ಮತ್ತು ಹೂಡಿಕೆ ಯೋಜನೆಗಳ ಮೂಲಕ ಸುಮಾರು ೪೦,೭೦೦ ಹೂಡಿಕೆದಾರರಿಂದ ಕೋಟ್ಯಂತರ ರೂಪಾಯಿ ಹಣ ಸಂಗ್ರಹಿಸಿ ವಂಚಿಸಿರುವ ಗಂಭೀರ ಆರೋಪ ಎದುರಿಸುತ್ತಿದ್ದಾರೆ. ಸದ್ಯ ಸಿಐಡಿ ಪೊಲೀಸರು ಈ ಸಂಸ್ಥೆಗೆ ಸಂಬಂಧಿಸಿದ ಹಣದ ವರ್ಗಾವಣೆ ಮತ್ತು ವ್ಯವಹಾರಗಳ ಜಾಡನ್ನು ಬೆನ್ನಟ್ಟಿದ್ದಾರೆ.
ಆರೋಪಿ ಶಿವಾನಂದ್ ನೀಲಣ್ಣವರ್ ನಿರ್ಮಿಸಿದ್ದ, ೨೦೨೩ರಲ್ಲಿ ಬಿಡುಗಡೆಯಾದ ’ಚಾಂಪಿಯನ್’ ಎಂಬ ಕನ್ನಡ ಚಲನಚಿತ್ರದ “ಡಿಂಗರ ಬಿಲ್ಲಿ ನಾನು” ಎಂಬ ವಿಶೇಷ ಹಾಡಿನಲ್ಲಿ ಸನ್ನಿ ಲಿಯೋನ್ ನಟಿಸಿದ್ದರು. ಈ ಹಾಡಿನಲ್ಲಿ ಹೆಜ್ಜೆ ಹಾಕಲು ಸನ್ನಿ ಲಿಯೋನ್ ಅವರಿಗೆ ಸುಮಾರು ?೧ ಕೋಟಿ ಸಂಭಾವನೆ ನೀಡಲಾಗಿತ್ತು ಎಂದು ತನಿಖೆಯಿಂದ ತಿಳಿದುಬಂದಿದೆ. ಹೂಡಿಕೆದಾರರಿಂದ ವಂಚಿಸಿದ ಹಣವನ್ನೇ ಈ ಚಿತ್ರದ ನಿರ್ಮಾಣಕ್ಕೆ ಬಳಸಲಾಗಿದೆಯೇ ಮತ್ತು ಆ ಹಣವೇ ನಟಿಗೆ ಸಂದಾಯವಾಗಿದೆಯೇ ಎಂಬ ಹಣದ ಹರಿವನ್ನು ಪರಿಶೀಲಿಸಲು ಸಿಐಡಿ ಮಾಹಿತಿ ಕೋರಿದೆ.
“ಇದು ಕೇವಲ ಹಣದ ವರ್ಗಾವಣೆಯ ಮೂಲವನ್ನು ಪತ್ತೆಹಚ್ಚುವ ಸಾಮಾನ್ಯ ತನಿಖಾ ಪ್ರಕ್ರಿಯೆಯಾಗಿದೆ. ನಟಿ ಸನ್ನಿ ಲಿಯೋನ್ ಅವರು ಈ ವಂಚನೆಯಲ್ಲಿ ಭಾಗಿಯಾಗಿದ್ದಾರೆ ಎಂದರ್ಥವಲ್ಲ. ವೃತ್ತಿಪರ ನಟಿಯಾಗಿ ಚಿತ್ರದಲ್ಲಿ ನಟಿಸಿದ್ದಕ್ಕಾಗಿ ಅವರು ಪಡೆದ ಸಂಭಾವನೆಯ ವಿವರಗಳನ್ನು ಮಾತ್ರ ಕೇಳಲಾಗಿದೆ.”



























