Home ಜಿಲ್ಲೆ ರಾಜಸ್ಥಾನ-ಪಶ್ಚಿಮ ಬಂಗಾಳದಲ್ಲಿ ಬಾಲಕಿಯರ ಮೇಲಿನ ಅತ್ಯಾಚಾರ ಖಂಡನೆ: ರಾಷ್ಟ್ರಪತಿಗೆ ಮನವಿ

ರಾಜಸ್ಥಾನ-ಪಶ್ಚಿಮ ಬಂಗಾಳದಲ್ಲಿ ಬಾಲಕಿಯರ ಮೇಲಿನ ಅತ್ಯಾಚಾರ ಖಂಡನೆ: ರಾಷ್ಟ್ರಪತಿಗೆ ಮನವಿ

ಸಂಜೆವಾಣಿ ವಾರ್ತೆ,
ವಿಜಯಪುರ, ಜು. ೧೪: ಅಖಿಲ ಭಾರತ ಮಹಿಳಾ ಸಾಂಸ್ಕೃತಿಕ ಸಂಘಟನೆ (ಎಐಎಂಎಸ್‌ಎಸ್) ವಿಜಯಪುರ ಜಿಲ್ಲಾ ಸಮಿತಿಯು ರಾಜಸ್ಥಾನ ಹಾಗೂ ಪಶ್ಚಿಮ ಬಂಗಾಳ ರಾಜ್ಯಗಳಲ್ಲಿ ಅಪ್ರಾಪ್ತ ಬಾಲಕಿಯರ ಮೇಲಿನ ಅತ್ಯಾಚಾರ ಮತ್ತು ಹತ್ಯೆ ಪ್ರಕರಣಗಳನ್ನು ತೀವ್ರವಾಗಿ ಖಂಡಿಸಿ, ಜಿಲ್ಲಾಧಿಕಾರಿಗಳ ಮೂಲಕ ರಾಷ್ಟ್ರಪತಿಗೆ ಮನವಿ ಸಲ್ಲಿಸಿತು.
ಸಂಘಟನೆಯು ಈ ಘಟನೆಗಳ ಕುರಿತು ತೀವ್ರ ಆಘಾತ ಮತ್ತು ದುಃಖ ವ್ಯಕ್ತಪಡಿಸಿದೆ. ಪಶ್ಚಿಮ ಬಂಗಾಳದ ಬರುಯಿಪುರದಲ್ಲಿ ೧೧ ವರ್ಷದ ಬಾಲಕಿಯ ಮೇಲೆ ಅತ್ಯಾಚಾರ ಎಸಗಿ ಹತ್ಯೆ ಮಾಡಿದ ಘಟನೆ ಹಾಗೂ ರಾಜಸ್ಥಾನದ ಶ್ರೀಗಂಗಾನಗರದಲ್ಲಿ ೧೩ ವರ್ಷದ ಬಾಲಕಿಯನ್ನು ಅಪಹರಿಸಿ ಹಲವು ದಿನಗಳ ಕಾಲ ಸಾಮೂಹಿಕ ಅತ್ಯಾಚಾರ ನಡೆಸಿ ಹತ್ಯೆಗೈದ ಪ್ರಕರಣಗಳನ್ನು ಉಲ್ಲೇಖಿಸಿ, ಆರೋಪಿಗಳಿಗೆ ಕಠಿಣ ಶಿಕ್ಷೆ ವಿಧಿಸಬೇಕೆಂದು ಆಗ್ರಹಿಸಲಾಗಿದೆ.
ಮಹಿಳೆಯರು ಹಾಗೂ ಹೆಣ್ಣುಮಕ್ಕಳ ಸುರಕ್ಷತೆಯನ್ನು ದೇಶಾದ್ಯಂತ ಖಾತ್ರಿಪಡಿಸುವಂತೆ, ಇಂತಹ ಪ್ರಕರಣಗಳ ತನಿಖೆಯನ್ನು ತ್ವರಿತವಾಗಿ ಪೂರ್ಣಗೊಳಿಸಿ ಅಪರಾಧಿಗಳಿಗೆ ಉಗ್ರ ಶಿಕ್ಷೆ ನೀಡುವಂತೆ ಕೇಂದ್ರ ಹಾಗೂ ಸಂಬAಧಪಟ್ಟ ರಾಜ್ಯ ಸರ್ಕಾರಗಳಿಗೆ ಮನವಿ ಮಾಡಲಾಗಿದೆ.
ಅಲ್ಲದೆ, ಸಮಾಜದಲ್ಲಿ ಅಶ್ಲೀಲತೆ, ಮಾದಕ ವಸ್ತುಗಳ ದುರ್ಬಳಕೆ ಮತ್ತು ಮಹಿಳೆಯರ ಮೇಲಿನ ದೌರ್ಜನ್ಯ ತಡೆಗಟ್ಟಲು ಕಠಿಣ ಕ್ರಮ ಕೈಗೊಳ್ಳಬೇಕು ಹಾಗೂ ಹೆಣ್ಣುಮಕ್ಕಳ ಗೌರವ ಮತ್ತು ಭದ್ರತೆ ಕಾಪಾಡುವ ವಾತಾವರಣ ನಿರ್ಮಿಸಬೇಕೆಂದು ಸಂಘಟನೆ ಒತ್ತಾಯಿಸಿದೆ.
ಈ ಸಂದರ್ಭದಲ್ಲಿ ಎಐಎಂಎಸ್‌ಎಸ್ ಜಿಲ್ಲಾ ಕಾರ್ಯದರ್ಶಿ ಶಿವಬಾಳಮ್ಮ ಕೊಂಡಗೂಳಿ, ಜಂಟಿ ಕಾರ್ಯದರ್ಶಿ ಶಿವರಂಜನಿ ಹಾಗೂ ಸದಸ್ಯೆ ಚಾಂದಬಿ ನಧಾಫ್ ಉಪಸ್ಥಿತರಿದ್ದರು.